ಸುಸ್ಥಿರ ಕರಾವಳಿ ನಿರ್ವಹಣಾ ರಾಷ್ಟ್ರೀಯ ಕೇಂದ್ರ ಮಂಗಳೂರಿನಲ್ಲಿ ಆರಂಭಿಸಲು ಚಿಂತನೆ: ಆನಂದ್ ಸಿಂಗ್

 ಸುಸ್ಥಿರ ಕರಾವಳಿ ನಿರ್ವಹಣಾ ರಾಷ್ಟ್ರೀಯ ಕೇಂದ್ರ ಮಂಗಳೂರಿನಲ್ಲಿ ಆರಂಭಿಸಲು ಚಿಂತನೆ: ಆನಂದ್ ಸಿಂಗ್
Share this post

ಮಂಗಳೂರು,ಮಾ.19, 2022: ರಾಜ್ಯದ 320 ಕಿ.ಮೀ. ವ್ಯಾಪ್ತಿಯ ಕರಾವಳಿ ವಲಯದ ವಿವಿಧ ನಿರ್ವಹಣಾ ಯೋಜನೆಗಳಿಗೆ ಅನುಮತಿ ನೀಡುವ ಸುಸ್ಥಿರ ಕರಾವಳಿ ನಿರ್ವಹಣಾ ರಾಷ್ಟ್ರೀಯ ಕೇಂದ್ರ (ಎನ್.ಸಿ.ಎಸ್.ಸಿ.ಎಂ.- ನ್ಯಾಷನಲ್ ಸೆಂಟರ್ ಫಾರ್ ಸಸ್ಟೈನಬಲ್ ಕೋಸ್ಟಲ್ ಮ್ಯಾನೇಜ್‍ಮೆಂಟ್) ವನ್ನು ಸುರತ್ಕಲ್‍ನ ಎನ್‍ಐಟಿಕೆ ಸಹಯೋಗದಲ್ಲಿ ಮಂಗಳೂರಿನಲ್ಲಿ ಆರಂಭಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾದ ಆನಂದ್ ಸಿಂಗ್ ಅವರು ತಿಳಿಸಿದರು.

ಅವರು ಮಾ.19ರ ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಸ್ತುತ ಚೆನ್ನೈನಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಸ್ಥಿರ ಕರಾವಳಿ ನಿರ್ವಹಣ ರಾಷ್ಟ್ರೀಯ ಕೇಂದ್ರವು ರಾಜ್ಯದ ಕರಾವಳಿ ವಲಯದಲ್ಲಿ ಕೈಗೊಳ್ಳುವ ನೂತನ ಯೋಜನೆಗಳಿಗೆ ಪ್ರಸ್ತಾವನೆ ಸಲ್ಲಿಸಿ, ಅನುಮತಿ ಪಡೆಯಬೇಕಿರುತ್ತದೆ. ಆ ಕೇಂದ್ರವನ್ನು ಸುರತ್ಕಲ್‍ನ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಸಹಯೋಗದಲ್ಲಿ ಮುಂದಿನ ದಿನಗಳಲ್ಲಿ ಆರಂಭಿಸಲು ಚಿಂತನೆ ನಡೆಸಲಾಗಿದೆ. ಅದಕ್ಕಾಗಿ ಅಧಿಕಾರಿಗಳೊಂದಿಗೆ ಚೆನ್ನೈನಲ್ಲಿರುವ ಕೇಂದ್ರಕ್ಕೆ ಭೇಟಿ ನೀಡಲಾಗುವುದು. ಮುಂದಿನ ಎರಡು ತಿಂಗಳಲ್ಲಿ ಆ ಕೇಂದ್ರದ ಆರಂಭಕ್ಕೆ ಯತ್ನಿಸಲಾಗುವುದು. ಇದರಿಂದಾಗಿ ರಾಜ್ಯದ ಕರಾವಳಿ ವಲಯದಲ್ಲಿ ಕೈಗೊಳ್ಳಬಹುದಾದ ವಿವಿಧ ರೀತಿಯ ಅಭಿವೃದ್ದಿ ಚಟುವಟಿಕೆಗಳಿಗೆ ಅನುಮತಿ ಪಡೆಯುವುದು ಸುಲಭಸಾಧ್ಯವಾಗಲಿದೆ ಎಂದು ಅವರು ಹೇಳಿದರು.

ಸಸಿಹಿತ್ಲು ಕಡಲತೀರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಪ್ರಸ್ತುತ ಎನ್.ಸಿ.ಎಸ್.ಸಿ.ಎಂ ನಿಂದ ಅನುಮತಿ ದೊರೆಯಬೇಕಿದೆ. ಅನುಮತಿ ದೊರೆತಲ್ಲಿ ಅಲ್ಲಿ ಸರ್ಫಿಂಗ್, ಕ್ಲಬ್ ಹೌಸ್, ಶೌಚಾಲಯ, ಪಾರ್ಕಿಂಗ್ ಸೇರಿದಂತೆ ಇತರೆ ಅಭಿವೃದ್ದಿ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು. ಅದಕ್ಕೆ ರಾಜ್ಯ ಸರ್ಕಾರ 10 ಕೋಟಿ ರೂ.ಗಳ ಅನುದಾನ ನೀಡಿದೆ ಎಂದು ತಿಳಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನೇತ್ರಾವತಿ ಸ್ನಾನಘಟ್ಟದ ಸಮಗ್ರ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಅದರ ಉದ್ಘಾಟನೆಗೆ ಸಿದ್ದತೆ ಮಾಡಿಕೊಳ್ಳುವಂತೆ ತಿಳಿಸಿದ ಸಚಿವರು, ಮಂಗಳೂರು ನಗರದ ಸುಲ್ತಾನ್ ಬತ್ತೇರಿ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೂಡಲೇ ಆರಂಭಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳೂರು ತಾಲೂಕಿನ ಕುಡುಪು ಅನಂತ ಪದ್ಮನಾಭ ದೇವಸ್ಥಾನದ ಬಳಿ ಶೌಚಾಲಯ ಹಾಗೂ ಇಂಟರ್‍ಲಾಕ್ ಕಾಮಗಾರಿ ಮುಕ್ತಾಯ ಹಂತದಲ್ಲಿದೆ, ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಸೋಮನಾಥೇಶ್ವರ ದೇವಸ್ಥಾನದ ಮೂಲಭೂತ ಕಾಮಗಾರಿ ಮುಂಬರುವ ನಾಲ್ಕು ತಿಂಗಳಲ್ಲಿ ಪೂರ್ಣಗೊಳಿಸಿ ಮಾಹಿತಿ ನೀಡುವಂತೆ ಸಚಿವರು ನಿರ್ಮಿತಿ ಕೇಂದ್ರದ ಅಧಿಕಾರಿಗೆ ನಿರ್ದೇಶನ ನೀಡಿದರು.

ಬಂಟ್ವಾಳ ತಾಲೂಕಿನ ಬೆಳ್ಳೂರು ಕಾವೇಶ್ವರ ದೇವಸ್ಥಾನದ ಬಳಿ ಕೈಗೊಳ್ಳಲಾಗಿರುವ ವಿವಿಧ ಅಭಿವೃದ್ದಿ ಕಾಮಗಾರಿಯನ್ನು ಮುಂಬರುವ ಎರಡು ತಿಂಗಳೊಳಗೆ ಪೂರ್ಣಗೊಳಿಸಬೇಕು. ಅದೇ ರೀತಿ ನಿಗದಿತ ಕಾಲಾವಧಿಯಲ್ಲಿ ಮಂಗಳೂರು ತಾಲೂಕಿನ ಕುರ್ನಾಡು ಸೋಮನಾಥ ದೇವಸ್ಥಾನಕ್ಕೆ ಮೂಲಭೂತ ಸೌಕರ್ಯ ಒದಗಿಸುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದ ಸಚಿವರು, ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಸುರ್ಯ ದೇವಸ್ಥಾನಕ್ಕೆ ಸಂಪರ್ಕ ರಸ್ತೆ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸುವ ಬಗ್ಗೆ ಸಚಿವರು ಪ್ರಶಂಶೆ ವ್ಯಕ್ತಪಡಿಸಿದರು.

ತಣ್ಣೀರು ಬಾವಿ ಕಡಲ ತೀರಕ್ಕೆ ಸಂಪರ್ಕ ರಸ್ತೆ, ದುರಸ್ತಿ, ಅಗಲೀಕರಣ ಕಾಂಕ್ರಿಟೀಕರಣ, ಚರಂಡಿ ನಿರ್ಮಾಣ, ಸೈಕಲ್ ಟ್ರ್ಯಾಕ್ ನಿರ್ಮಾಣ ಕಾಮಗಾರಿ ಪ್ರಗತಿಯಲಿದ್ದು, ಕಾಮಗಾರಿಗಳನ್ನು ಪೂರ್ಣಗೊಳಿಸುವಲ್ಲಿ ಅಧಿಕಾರಿಗಳು ಎಚ್ಚರವಹಿಸಬೇಕೆಂದು ಅವರು ತಿಳಿಸಿದರು.

ಶಾಸಕರಾದ ವೇದವ್ಯಾಸ್ ಕಾಮತ್, ಡಾ. ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮ (ಕೆ.ಎಸ್.ಟಿ.ಡಿ.ಸಿ) ದ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಾಣಿಕ್ಯ, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ವೆಂಕಟೇಶ್, ಅರಣ್ಯ ಸಂರಕ್ಷಣಾಧಿಕಾರಿ ದಿನೇಶ್ ಹಾಗೂ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಯಶವಂತ್ ಮಾತನಾಡಿದರು.
ಅರಣ್ಯ ಮತ್ತು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿದ್ದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!