ಡಾ| ಪಾರ್ವತಿ ಜಿ. ಐತಾಳರಿಗೆ ಮಲಬಾರ್ ವಿಶ್ವರಂಗ ಪುರಸ್ಕಾರ -2022

 ಡಾ| ಪಾರ್ವತಿ ಜಿ. ಐತಾಳರಿಗೆ ಮಲಬಾರ್ ವಿಶ್ವರಂಗ ಪುರಸ್ಕಾರ -2022
Share this post

ಹಳ್ಳಿಯಲ್ಲಿ ಮೊಳೆತು ಪಟ್ಟಣಕ್ಕೆ ಹಬ್ಬಿ ಹೂ ಹಣ್ಣು ಬಿಟ್ಟು ಎಲ್ಲರ ಗಮನ ಸೆಳೆಯುತ್ತಿರುವ ಪಚ್ಚೆ ಸಿರಿ ಬಳ್ಳಿ ಡಾ| ಪಾರ್ವತಿ ಜಿ. ಐತಾಳ್. ಕಾಸರಗೋಡು ಜಿಲ್ಲೆಗೆ ಸೇರಿದ ಒಂದು ಪುಟ್ಟ ಹಳ್ಳಿ ಧರ್ಮತ್ತಡ್ಕ . ಬಾಳಿಕೆ ಆ ಗ್ರಾಮೀಣ ಪ್ರದೇಶದ ಒಂದು ಸುಸಂಸ್ಕೃತ ಮನೆತನ. ಅಲ್ಲಿ ಚಿಗುರಿದ ಈ ಬಳ್ಳಿ ಇಂದು ಸಾಹಿತ್ಯ ಲೋಕದಲ್ಲೆಲ್ಲ ಹರಡಿ ತನ್ನ ಬೀಳು ಬಿಟ್ಟಿದೆ. ಎ ಯು . ಪಿ. ಶಾಲೆ, ವಿಠಲ ಬಾಲಿಕಾ ಪ್ರೌಢ ಶಾಲೆ, ಸರಕಾರಿ ಕಾಲೇಜು ಕಾಸರಗೋಡು ಇವೆಲ್ಲ ಪಾಂಡಿತ್ಯ ಕಲಿಸಿದ ಇವರ ವಿದ್ಯಾ ತಾಣ. ಮಾನಸ ಗಂಗೋತ್ರಿ, ಮೈಸೂರುಗಳಿಗೆ ಉನ್ನತ ವ್ಯಾಸಂಗಕ್ಕಾಗಿ ಪಯಣ. ತದ ನಂತರ ವೃತ್ತಿ ಜೀವನದ ಮೆಟ್ಟಿಲು ಹತ್ತಿದ್ದು ಮುಲ್ಕಿಯ ವಿಜಯಾ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕಿಯಾಗಿ . ಅಲ್ಲಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸುತ್ತಲೇ ಕಂಕಣ ಭಾಗ್ಯ ಕೂಡಿ ಬಂತು. ಕೈಹಿಡಿದ ಬಾಳ ಸಂಗಾತಿ ಗಂಗಾಧರ ಐತಾಳರು ಕುಂದಾಪುರಕ್ಕೆ ಕರೆದೊಯ್ದರು. ಮತ್ತೆ ಅಲ್ಲಿಯ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ವೃತ್ತಿ ಜೀವನದ ದ್ವಿತೀಯ ಇನ್ನಿಂಗ್ಸ್ ಪ್ರಾರಂಭವಾಯ್ತು. ಮನೆಯವರ ಪ್ರೋತ್ಸಾಹ ಅವರ ಹವ್ಯಾಸಗಳಿಗೆ ಕೆಂಪು ಹಾಸು ಹಾಸಿತು. ಅದಾಗಲೇ ಅನೇಕ ಲೇಖನಗಳನ್ನೂ ಹಿಂದಿ, ಇಂಗ್ಲಿಷ್, ಮತ್ತು ಮಲಯಾಳಗಳಿಂದ ಅನೇಕ ಕಥೆಗಳನ್ನು ಅನುವಾದಿಸಿ ಪತ್ರಿಕೆಗಳಲ್ಲಿ ಪ್ರಕಟಿಸುತ್ತ ಬಂದಿದ್ದ ಇವರು ಕೌಟುಂಬಿಕ ಬದುಕಿನಲ್ಲಿ ನೆಲೆಯೂರಿದ ಬಳಿಕ ಪುಸ್ತಕ ರಚನೆಗೆ ಮನ ಮಾಡಿ ಅನೇಕ ಕೃತಿಗಳನ್ನು ರಚಿಸಿದರು.

ಇವರ ಕೃತಿಗಳ ಆಕರ್ಷಕ ನಿರೂಪಣಾ ಶೈಲಿ ಹಾಗೂ ಗುಣಮಟ್ಟದ ಬರವಣಿಗೆ ಬೇರೆಯವರಿಗಿಂತ ಭಿನ್ನವಾಗಿದ್ದುದು ಇವರ ವೈಶಿಷ್ಟ್ಯ. ಹಾಗಾಗಿ ಕರ್ನಾಟಕ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ, ಕುವೆಂಪು ಭಾಷಾ ಭಾರತಿ ಮುಂತಾದ ಸಂಘ ಸಂಸ್ಥೆಗಳು ಮತ್ತು ಹೆಸರಾಂತ ಪ್ರಕಾಶಕರ ಗಮನ ಸೆಳೆದು ಪ್ರತೀ ಕೃತಿಗಳು ಅಂದರೆ ಇವರೆಲ್ಲ ಕೃತಿಗಳು ಹೊರಬರುತ್ತಲೇ ಪ್ರಕಟಗೊಳ್ಳುವಂತಾಯ್ತು. ಹಾಗಾಗಿ ಹಲವಾರು ಕಥೆ, ಕಾದಂಬರಿ, ನಾಟಕಗಳನ್ನೊಳಗೊಂಡ ಸುಮಾರು 41 ಅನುವಾದಿತ ಕೃತಿಗಳು, 25 ಸ್ವತಂತ್ರ ಕೃತಿಗಳು ಹಾಗೂ ಸಂಪಾದಿತ ಕೃತಿಗಳೂ ಪ್ರಕಟಗೊಂಡಿವೆ.

ಡಾ| ಪಾರ್ವತಿ ಐತಾಳ್ ಒಬ್ಬ ಪಂಚಭಾಷಾ ಪ್ರವೀಣೆ. ಹಾಗಾಗಿ ಅನ್ಯಭಾಷೆಗಳಿಂದ ಕನ್ನಡಕ್ಕೆ ಅದೇ ರೀತಿ ಕನ್ನಡದಿಂದ ಅನ್ಯಭಾಷೆಗಳಿಗೆ ಅತೀ ಹೆಚ್ಚು ಕೃತಿಗಳನ್ನು ತರ್ಜುಮೆ ಮಾಡಿದ ಇವರ ನೈಪುಣ್ಯತೆಗೆ ಕುವೆಂಪು ಭಾಷಾ ಭಾರತಿ 2011ರಲ್ಲಿ ಶ್ರೇಷ್ಟ ಅನುವಾದಕಿ ಎಂಬ ಪ್ರಶಸ್ತಿ ನೀಡಿ ಗೌರವಿಸಿತು. ಅಷ್ಟೇ ಅಲ್ಲದೆ ಇನ್ನೂ ಹತ್ತು ಹಲವು ಪ್ರಶಸ್ತಿಗಳನ್ನು ಇವರ ಈ ಪ್ರಕ್ರಿಯೆಗೆ ದೊರಕಿಸಿ ಕೊಟ್ಟಿತು. ಕೇರಳ ಸರ್ಕಾರದ ದಾಮೋದರನ್ ಸ್ಮಾರಕ ಪ್ರಶಸ್ತಿ, ಡಾ| ಶಿವರಾಮ ಕಾರಂತ ಸಾಹಿತ್ಯ ಪ್ರಶಸ್ತಿ, ಹೆಚ್. ವಿ. ಸಾವಿತ್ರಮ್ಮ ಪ್ರಶಸ್ತಿ, ಮಲ್ಲಿಕಾ ಪ್ರಶಸ್ತಿ, ವಸುದೇವ ಭೂಪಾಲಂ ಪ್ರಶಸ್ತಿ ಮತ್ತು ಅವರ ಸ್ವತಂತ್ರ ಕೃತಿ ”ಒಡಲ ಬೆಂಕಿ ” ಕಾದಂಬರಿಗಾಗಿ ವಿಶ್ವೇಶ್ವರಯ್ಯ ರಾಷ್ಟ್ರೀಯ ಪ್ರಶಸ್ತಿ, ಹೀಗೆ ಲೆಕ್ಕಕ್ಕೆ ಸಿಗದ ಪ್ರಶಸ್ತಿ ಪತ್ರ ಸನ್ಮಾನ ಪುರಸ್ಕಾರಗಳು ಇವರ ಮನೆಯಲ್ಲಿ ಮನೆ ಮಾಡಿಕೊಂಡಿವೆ. ಜ್ಞಾನಪೀಠ ಪ್ರಶಸ್ತಿ ವಿಜೇತ ಕಡಲ ತೀರದ ಭಾರ್ಗವ ಎಂದೇ ಹೆಸರಾದ ಶಿವರಾಮ ಕಾರಂತ ಮತ್ತು ತಕಳಿ ಶಿವಶಂಕರ ಪಿಳ್ಳೆಯವರ ಕಾದಂಬರಿಗಳ ತುಲನಾ ಅಧ್ಯಯನಕ್ಕಾಗಿ ಕಣ್ಣೂರು ವಿ.ವಿ. ಪಾರ್ವತಿಯವರಿಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಿರುವುದು ಅವರ ಜೀವನದ ಪರಮೋಚ್ಚ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.
ಇವರ ಪ್ರತಿಭೆ ಸಾಹಿತ್ಯ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರದೆ ಹಲವು ಕ್ಷೇತ್ರಗಳಲ್ಲಿ ಅವರು ತನ್ನನ್ನು ತಾನು ತೊಡಗಿಸಿ ಕೊಂಡಿದ್ದಾರೆ.

ರೂಪಕ, ಲಘು ಸಂಗೀತ ತರಬೇತಿ, ಲಲಿತ ಕಲಾ ಸಂಚಾಲಕಿಯಾಗಿ ಕಾರ್ಯನಿರ್ವಹಣೆ, ಸಂಪನ್ಮೂಲ ವ್ಯಕ್ತಿಯಾಗಿ, ತೀರ್ಪುಗಾರರಾಗಿ ಜೊತೆಗೆ ಆಕಾಶವಾಣಿ ನಾಟಕಗಳಲ್ಲಿ ಧ್ವನಿ ನೀಡುವ ಕಲಾವಿದೆಯಾಗಿ ತನ್ನ ವಿದ್ವತ್ತಿನ ಪರಿಚಯವನ್ನು ಪರಿಪರಿಯಾಗಿ ಪಸರಿಸಿದ್ದಾರೆ.

ವಿಚಾರ ಸಂಕಿರಣ, ಸಂಸ್ಮರಣಾ ಉಪನ್ಯಾಸ, ಪ್ರಬಂಧ ಮಂಡನೆ ಎಲ್ಲದಕ್ಕೂ ಸೈ… ಎಲ್ಲದಕ್ಕೂ ಜೈ..
ಹಲವಾರು ನಾಟಕಗಳನ್ನು ಬರೆದ ಇವರು ರಾಜ್ಯಮಟ್ಟದ ನಾಟಕ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿಯೂ ದುಡಿದಿದ್ದಾರೆ.

ವೃತ್ತಿಯಲ್ಲಿ ಇಂಗ್ಲಿಷ್ ಉಪನ್ಯಾಸಕಿಯಾದರೂ ಕನ್ನಡ ಭಾಷೆಯಲ್ಲಿ ಅತ್ಯಂತ ಪ್ರೌಢಿಮೆಯನ್ನು ಮೆರೆಯುತ್ತಿರುವುದರ ಜೊತೆಗೆ ಒಟ್ಟಾರೆ ಸಾಹಿತ್ಯ ಲೋಕದಲ್ಲಿ ಉತ್ತಮ ಕೃಷಿ ಮಾಡಿ ಒಳ್ಳೆಯ ಬೆಳೆ ಬೆಳೆದು ಎಲ್ಲರಿಗೂ ಉಣಬಡಿಸುತ್ತಿರುವ ಅಕ್ಕ ಡಾ| ಪಾರ್ವತಿ ಜಿ. ಐತಾಳರಿಗೆ ಸಂಸ್ಕೃತಿ ವಿಶ್ವಪ್ರತಿಷ್ಠಾನ ರಿ. ಉಡುಪಿ ಮತ್ತು ಮಲಬಾರ್ ಗೋಲ್ಡ್ & ಡೈಮಂಡ್ಸ್, ಉಡುಪಿ ಶಾಖೆ, ಉಡುಪಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಕಾರದೊಂದಿಗೆ ಪುರಸ್ಕರಿಸುತ್ತಿರುವ ಐದು ಜನ ಶ್ರೇಷ್ಟ ರಂಗ ಸಾಧಕರಲ್ಲಿ ನಾಟಕಕಾರರು ಮತ್ತು ವಿಮರ್ಶಕರು ಶೀರ್ಷಿಕೆಯಡಿಯಲ್ಲಿ ಕೊಡ ಮಾಡುತ್ತಿರುವ ಈ ಬಾರಿಯ ” ಮಲಬಾರ್ ವಿಶ್ವ ರಂಗ ಪುರಸ್ಕಾರ – 2022 ” ಕ್ಕೆ ಭಾಜನರಾಗಿದ್ದಾರೆ.

ಫೋಟೋ, ಬರಹ: ರಾಜೇಶ್ ಭಟ್ ಪಣಿಯಾಡಿ .

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!