ಮಾ. 5 ರಂದು ಅಂತ್ಯೋದಯ ಕಾರ್ಯಕ್ರಮ

 ಮಾ. 5 ರಂದು ಅಂತ್ಯೋದಯ ಕಾರ್ಯಕ್ರಮ
Share this post

ಕಾರವಾರ ಮಾ. 2, 2022: ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಉತ್ತರ ಕನ್ನಡ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 05 ರ ಶನಿವಾರ ಬೆಳಿಗ್ಗೆ 9.30ಕ್ಕೆ ನಗರದ ಮಯೂರವರ್ಮ ವೇದಿಕೆ, ರವೀಂದ್ರನಾಥ ಠಾಗೋರ ಕಡಲತೀರದಲ್ಲಿ . “ಅಂತ್ಯೋದಯ” ಹಮ್ಮಿಕೊಳ್ಳಲಾಗಿದೆ.

ತ್ರಿಸ್ತರದ ಪಂಚಾಯತ್ ರಾಜ್ ಪ್ರತಿನಿಧಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ಇಲಾಖೆ ಹಾಗೂ ನಿಗಮ ಮಂಡಳಿಗಳ ವಿವಿಧ ಯೋಜನೆಗಳ ಕುರಿತು ಅರಿವು ಮೂಡಿಸಲು ರಾಜ್ಯ ಮಟ್ಟದ ಮಾಹಿತಿ ಕಾರ್ಯಾಗಾರವು ಅಂದು ನಡೆಯಲಿದೆ.

ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಸಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ. ನಾರಾಯಣ ಸ್ವಾಮಿ ಅವರು ಉದ್ಘಾಟಿಸುವರು. ಶಾಸಕಿ ರೂಪಾಲಿ ನಾಯ್ಕ ಅಧ್ಯಕ್ಷತೆ ವಹಿಸುವರು. ವಿಧಾನ ಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾಪತಿ ಬಸವರಾಜ ಹೊರಟ್ಟಿ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ, ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಖಾತೆ ಸಚಿವ ಶ್ರೀರಾಮುಲು, ಜಿಲ್ಲೆಯ ಲೋಕಸಭಾ ಸದಸ್ಯ ಅನಂತಕುಮಾರ ಹೆಗಡೆ, ಜಿಲ್ಲೆಯ ಎಲ್ಲ ಶಾಸಕರು, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು, ಇಲಾಖೆಯ ರಾಜ್ಯಮಟ್ಟದ ಪ್ರಧಾನ ಕಾರ್ಯದರ್ಶಿಗಳು, ಆಯುಕ್ತರು, ವ್ಯವಸ್ಥಾಪಕ ನಿರ್ದೇಶಕರು, ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ದೇಶದ ಶ್ರೇಷ್ಠ ರಾಜಕಾರಣಿ, ಪಂಡಿತ್ ದಿನ ದಯಾಳ್ ಉಪಾಧ್ಯಯರವರ ಪರಿಕಲ್ಪನೆಯಾದ “ಅಂತ್ಯೋದಯದ” ತಾತ್ಪರ್ಯ, ಸಮಾಜದಲ್ಲಿನ ಬಡವರಲ್ಲಿ ಕಡು ಬಡವರು, ಸೌಲಭ್ಯವಂಚಿತ ಸಮಾಜದ ಕಟ್ಟಕಡೆಯ ವ್ಯಯಕ್ತಿಯನ್ನು ಮೇಲೆತ್ತುವ ಮೂಲಕ ಅಂತ್ಯದಲ್ಲಿ ಉದಯ ಕಾಣುವುದೇ “ಅಂತ್ಯೋದಯ”ವಾಗಿದೆ.

ಈ ನಿಟ್ಟಿನಲ್ಲಿ ತಳಮಟ್ಟದಲ್ಲಿ ಜನರೊಂದಿಗೆ ನೇರ ಸಂಪರ್ಕದಲ್ಲಿರುವ ಗ್ರಾಮ ಪಂಚಾಯತ್ ಸದಸ್ಯರು, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಪ್ರತಿನಿಧಿಗಳಿಗೆ ಹಾಗೂ ಪಟ್ಟಣ ಪಂಚಾಯತ್ ಪುರಸಭೆ, ನಗರಸಭೆ ಜನಪ್ರತಿನಿಧಿಗಳಿಗೆ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಮಗ್ರ ಮಾಹಿತಿ ನೀಡುವುದು, ನಿಗಮ ಮಂಡಳಿಗಳ ಮೂಲಕ ಅನುಷ್ಠಾನವಾಗುವ ವಿವಿಧ ಕಾರ್ಯಕ್ರಮಗಳ ಮಾಹಿತಿ, ಫಲಾನುಭವಿಗಳ ಅರ್ಹತೆ ಮತ್ತು ಆಯ್ಕೆ ಪ್ರಕ್ರಿಯೆಯ ಮಾನದಂಡಗಳ ವಿವರ ಸವಿಸ್ತಾರವಾಗಿ ನೀಡುವ ಮೂಲಕ ಇಲಾಖೆಯ ಯೋಜನೆಗಳು ಸಮಾಜದ ಕಟ್ಟಕಡೆಯ ಅರ್ಹ ವ್ಯಯಕ್ತಿಗೆ ಯಾವುದೇ ಮಧ್ಯವರ್ತಿಯ ಹಾವಳಿ ಇಲ್ಲದೇ, ತಲುಪಿಸುವಲ್ಲಿ ಸಹಕಾರಿ ಆಗಲು ಈ ರಾಜ್ಯಮಟ್ಟದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

ಜಿಲ್ಲೆಯ ಪ್ರತಿಯೊಬ್ಬ ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಪಟ್ಟಣ ಪಂಚಾಯತ್, ಪುರಸಭೆ, ನಗರ ಸಭೆ ಜನಪ್ರತಿನಿಧಿಗಳು ಮಾರ್ಚ್ 05 ರ ಶನಿವಾರ ನಡೆಯುವ “ಅಂತ್ಯೋದಯ” ಕಾರ್ಯಾಗಾರದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶ್ವಸಿಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು ಕೋರಿರುತ್ತಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!