ಅಂಬರೀಶ್ ಸ್ಮಾರಕಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಶಂಕುಸ್ಥಾಪನೆ
ಬೆಂಗಳೂರು, ಫೆ 27, 2022: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಕಂಠೀರವ ಸ್ಟುಡಿಯೋ ಆವರಣದಲ್ಲಿ ಡಾI ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.
“ಅಂಬರೀಶ್ ಅವರನ್ನು ಯಾವಾಗಲೂ ಅಂಬರೀಶ್ ಎಂದೇ ಸಂಬೋಧಿಸುತ್ತಿದ್ದೆ. ಈಗಲೂ ಹಾಗೆಯೇ ಕರೆಯುತ್ತೇನೆ. ನಮ್ಮದು 40 ವರ್ಷಗಳಿಗೂ ಮಿಗಿಲಾದ ಸ್ನೇಹ. ಒಟ್ಟಿಗೆ ಓಡಾಡಿ, ಸಮಯ ಕಳೆದಿದ್ದೇವೆ.ಊಟ ಮಾಡಿದ್ದೇವೆ. ಕರ್ನಾಟಕದಾದ್ಯಂತ ಸುತ್ತಿದ್ದೇವೆ” ಅಂಬರೀಶ್ ಅವರೊಂದಿಗಿನ ಒಡನಾಟವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಮರಿಸಿದ ಬಗೆ ಇದು.
“ಅಂಬರೀಶ್ ತೆರೆದ ಪುಸ್ತಕವಿದ್ದಂತೆ. ಯಾವುದನ್ನೂ ಮುಚ್ಚಿಡುತ್ತಿರಲಿಲ್ಲ. ನಮ್ಮ ಆತ್ಮಸಾಕ್ಷಿಯಂತೆ ನಡೆದುಕೊಳ್ಳುವುದು ಎಷ್ಟು ಕಷ್ಟಸಾಧ್ಯವೆಂದು ಎಲ್ಲರಿಗೂ ಗೊತ್ತಿದೆ. ಆದರೆ ಅಂಬರೀಶ್ ಮಾತ್ರ ಏನೇ ಬಂದರೂ ಆತ್ಮಸಾಕ್ಷಿಗೆ ವಿರುದ್ಧವಾಗಿ ಒಂದು ದಿನವೂ ಬದುಕಲಿಲ್ಲ. ತನ್ನ ಸ್ವಂತ ಇಚ್ಚಾಶಕ್ತಿಯ ಮೇಲೆ ಬದುಕಿದಂತಹ ಒಬ್ಬ ಮೇರು ನಟ. ಇದು ದೈವದತ್ತ ಕೊಡುಗೆ. ಅವನ ಬಾಯಲ್ಲಿ ‘ಲೇ.’ಎಂದು ಕರೆಸಿಕೊಳ್ಳುವ ಬಯಕೆ ಅವರ ಸ್ನೇಹಿತರಲ್ಲಿತ್ತು. ಅವರು ಗೌರವ ನೀಡಿ ಮಾತನಾಡಿದರೆ ಆ ವ್ಯಕ್ತಿ ಆತ್ಮೀಯರಲ್ಲವೆಂದು ಅನಿಸುತ್ತಿತ್ತು ಎಂದರು.
ಸ್ನೇಹ ಜೀವಿ
ಸ್ನೇಹಕ್ಕೆ ಬಹಳ ಬೆಲೆ ನೀಡಿ, ಅದಕ್ಕಾಗಿ ಏನು ಬೇಕಾದರೂ ಮಾಡುತ್ತಿದ್ದ ವ್ಯಕ್ತಿ ಅವರು. ಬೆಂಗಳೂರಿನಲ್ಲಿ ಶೂಟಿಂಗ್ ಮಾಡುವಾಗ ನಾಲ್ಕೈದು ಜನ ಸ್ನೇಹಿತರು ಕಾರಿನ ಹಾರ್ನ್ ಹೊಡೆದರೆ ಸಾಕು ಹೇಗಿದ್ದರೂ ಬಿಟ್ಟು ಬರುತ್ತಿದ್ದರು. ನಿರ್ಮಾಪಕರು ಮನೆಗೆ ಬಂದು ಚಿತ್ರೀಕರಣದ ವೇಳೆ ದಯಮಾಡಿ ಬರಬೇಡಿ ಎಂದು ಹೇಳಿ ಹೋದ ಪ್ರಸಂಗವನ್ನು ಮುಖ್ಯ ಮಂತ್ರಿಗಳು ಸ್ಮರಿಸಿದರು.
ಅಧಿಕಾರ ಧಿಕ್ಕರಿಸಿ ರಾಜಕಾರಣ
ಬಡವರಿಗೆ, ರೈತರಿಗಾಗಿ ಹೃದಯ ಮಿಡಿಯುತ್ತಿತ್ತು. ಕರ್ನಾಟಕವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕೆಂಬ ತುಡಿತ ಅವರಲ್ಲಿತ್ತು. ಆದರೆ ಅಧಿಕಾರಕ್ಕೆ ಅಂಟಿಕೊಳ್ಳುವ ಗುಣವಿರಲಿಲ್ಲ. ಅಧಿಕಾರವಿರಲಿ, ಇಲ್ಲದಿರಲಿ ಅದನ್ನು ಧಿಕ್ಕರಿಸಿಯೇ ರಾಜಕಾರಣ ಮಾಡಿದವರು. ಅಂತಹ ವ್ಯಕ್ತಿ ಗಳು ಬಹಳ ಕಡಿಮೆ. ಕೇಂದ್ರ ಸಚಿವರಿದ್ದಾಗ ಕಾವೇರಿ ವಿವಾದ ಎದುರಾದಾಗ ಒಂದು ಕ್ಷಣವೆಯೂ ಯೋಚಿಸದೆ, ಅವರು ರಾಜಿನಾಮೆಯನ್ನು ಬಿಸಾಡಿ ಬಂದವರು. ಕಾವೇರಿ ಹೋರಾಟದಲ್ಲಿ ಅಧಿಕಾರ ತ್ಯಾಗ ಮಾಡಿದ್ದು ಅಂಬರೀಶ್ ಮಾತ್ರ ಎಂದರು.
ಮಂಡ್ಯ ಪ್ರೀತಿ
ಮಂಡ್ಯ ಅಂದರೆ ಅವರಿಗೆ ಪಂಚಪ್ರಾಣ. ಮಂಡ್ಯದವರು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಮಾತನಾಡಿಸಿ ಪರಿಹಾರ ಕಲ್ಪಿಸುತ್ತಿದ್ದರು. ಅವರಿದ್ದಲ್ಲಿ ಜೀವಂತಿಕೆ ಇರುತ್ತಿತ್ತು. ವಿದ್ಯುತ್ ಸಂಚಾರವಾದಂಥ ಪರಿಣಾಮ ಇರುತ್ತಿತ್ತು ಎಂದರು.
ಅಂಬರೀಶ್ ಗುಣಧರ್ಮಗಳನ್ನು ಸುಮಲತಾ ಅವರು ರೂಢಿಸಿಕೊಂಡಿದ್ದಾರೆ. ಅವರ ಪುತ್ರ ಅಭಿಷೇಕ್ ಸಹ ಅವರ ತಂದೆಯ ಗುಣಗಳನ್ನು ಪಡೆದು ಆದಷ್ಟು ಬೇಗ ಮತ್ತೊಮ್ಮೆ ಅಂಬರೀಶ್ ಅವರನ್ನು ಪರಿಚಯಿಸುತ್ತಾರೆ ಎಂಬ ನಿರೀಕ್ಷೆ ಇದೆ ಎಂದರು.
ಪುನೀತ್ ಸ್ಮಾರಕ
ಡಾ: ರಾಜ್ ಕುಮಾರ್, ವಿಷ್ಣುವರ್ಧನ್,ಶಂಕರ್ ನಾಗ್, ಪುನೀತ್ ರಾಜ್ ಕುಮಾರ್, ಮೇರು ನಟರನ್ನು ನಾಡು ಕಳೆದುಕೊಂಡಿದೆ. ಪುನೀತ್ ಅವರ ಸ್ಮಾರಕ ವನ್ನು ಸದ್ಯದಲ್ಲಿಯೇ ನಿರ್ಮಿಸಲಾಗುವುದು ಹಾಗೂ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ದಿನಾಂಕವನ್ನೂ ಘೋಷಿಸಲಾಗುವುದು ಎಂದರು.
ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಅಡಿಗಲ್ಲು ಹಾಕುವ ಸಣ್ಣ ಕೃತಜ್ಞತೆ ಹೇಳುವ ಭಾಗ್ಯ ನನಗೆ ದೊರೆತಿದೆ. ಅವರು ಎಲ್ಲೇ ಇದ್ದರೂ ಅವರು ನಮ್ಮನ್ನು ನೆನೆಸಿಕೊಳ್ಳುತ್ತಾರೆ ಎಂದರು.