ಮಹಿಳಾ ಸಬಲೀಕರಣ ಯೋಜನೆಗಳ ಲಾಭ ಪಡೆಯಲು ಜಿ.ಪಂ. ಸಿಇಒ ಕರೆ

 ಮಹಿಳಾ ಸಬಲೀಕರಣ ಯೋಜನೆಗಳ ಲಾಭ ಪಡೆಯಲು ಜಿ.ಪಂ. ಸಿಇಒ ಕರೆ
Share this post

ಮಂಗಳೂರು,ಫೆ.23, 2022: ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸ್ತ್ರೀಯರು ಆರ್ಥಿಕವಾಗಿ ಸ್ವಾವಲಂಭಿಗಳಾಗಬೇಕು ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಡಾ. ಕುಮಾರ್ ಅವರು ಅಭಿಪ್ರಾಯಪಟ್ಟರು.

ಅವರು ಬುಧವಾರ ಸ್ವಚ್ಚ ಭಾರತ್ ಮಿಷನ್ ವತಿಯಿಂದ ಬೆಂಗಳೂರಿನ ಸಾಹಸ್ ಸಂಸ್ಥೆ, ಸಂಜೀವಿನಿ-ಕೆ.ಎಸ್.ಆರ್.ಎಲ್.ಪಿ.ಎಸ್ (ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ) ಸಹಯೋಗದಲ್ಲಿ ನಗರದ  ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಸಂಜೀವಿನಿ ಒಕ್ಕೂಟದ ಮಹಿಳಾ ಸದಸ್ಯರಿಗೆ ಮನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದಿಂದ ಪರಿಸರ ಸ್ನೇಹಿ ಉತ್ಪನ್ನಗಳ ತಯಾರಿಕೆ ಕುರಿತ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ಸಂಜೀವಿನಿ ಒಕ್ಕೂಟವನ್ನು ಬಳಸಿಕೊಳ್ಳುವ ಮೂಲಕ ಮಹಿಳೆಯರು ಸ್ವಾವಲಂಬಿಗಳಾಗಿ, ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬಹುದಾಗಿದೆ, ಅದಕ್ಕಾಗಿ ವಿಭಿನ್ನವಾಗಿ, ಕ್ರಿಯಾತ್ಮಕವಾಗಿ ಆಲೋಚಿಸಿ, ಅವುಗಳನ್ನು ಅನುಷ್ಠಾನಗೊಳಿಸಬೇಕು, ಆ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಅದರೊಂದಿಗೆ ಸರ್ಕಾರದ ಯೋಜನೆಗಳನ್ನು ಬಳಸಿಕೊಳ್ಳುವ ಮೂಲಕ ಜಿಲ್ಲೆಗೆ ಕೀರ್ತಿ ತರಬಹುದಾಗಿದೆ ಎಂದು ಹೇಳಿದರು.

ಮಹಿಳಾ ಸಬಲೀಕರಣ ಎಂಬ ದ್ಯೇಯವನ್ನಿಟ್ಟುಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರ ಸೊತ್ತು ನಿಧಿ, ಸಮುದಾಯ ಬಂಡವಾಳ, ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಘಟಕ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಮತ್ತು ಸಾಲ ಸೌಲಭ್ಯಗಳನ್ನು ಜಾರಿಗೊಳಿಸಲಾಗಿದೆ, ಸಂಜೀವಿನಿ ಒಕ್ಕೂಟದ ಮಹಿಳೆಯರು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು, ಜಿಲ್ಲೆಯಲ್ಲಿರುವ ಸುಮಾರು 5 ಸಾವಿರ ಸ್ವಸಹಾಯ ಗುಂಪುಗಳ 55 ಸಾವಿರ ಮಹಿಳಾ ಸದಸ್ಯರು ಈ ಎಲ್ಲ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದ ಅವರು, ತ್ಯಾಜ್ಯವನ್ನು ಆದಾಯದ ಮೂಲಗಳಾಗಿ ನೋಡಬೇಕು, ಕಸದಿಂದ ರಸ ಎಂಬ ಪರಿಕಲ್ಪನೆಯನ್ನು ಮೈಗೂಡಿಸಿಕೊಂಡು ವಿವಿಧ ರೀತಿಯ ಉತ್ಪನ್ನ ತಯಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು, ಜಿಲ್ಲಾ ಪಂಚಾಯತ್‍ನಲ್ಲಿ ಮಹಿಳಾ ಸಬಲೀಕರಣದ ಉದ್ದೇಶಕ್ಕಾಗಿ ನೂತನವಾಗಿ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಎಂಬ ಘಟಕ ತೆರೆಯಲಾಗಿದೆ, ಅದರ ಉಪಯೋಗ ಪಡೆದುಕೊಳ್ಳುವಂತೆ ಅವರು ಹೇಳಿದರು.

 ವೇದಿಕೆ ಕಾರ್ಯಕ್ರಮದ ನಂತರ ತ್ಯಾಜ್ಯದಿಂದ ಜೈವಿಕ ಗೊಬ್ಬರ ತಯಾರಿಕೆ, ಕೈ ತೋಟ ನಿರ್ಮಾಣ, ಸಾವಯವ ತರಕಾರಿ ಬೆಳೆ, ಅಣಬೆ ಬೇಸಾಯ, ತ್ಯಾಜ್ಯದಿಂದ ಜೈವಿಕ ಕಿಣ್ವ, ಸಾಬೂನು ತಯಾರಿಕೆ, ಬಟ್ಟೆಚೀಲ, ಬಟ್ಟೆ ಪ್ಯಾಡ್ ತಯಾರಿಕೆಗಳ ಬಗ್ಗೆ ತೋಟಗಾರಿಕಾ ಇಲಾಖೆಯ ಹಿರಿಯ ಸಹಯಕ ನಿರ್ದೇಶಕರಾದ ಪ್ರವೀಣ್ ಮತ್ತು ಸ್ವಚ್ಚ ಭಾರತ್ ಮಿಷನ್‍ನ ಸಂಯೋಜಕರಾದ ನವೀನ್ ಅವರು ತರಬೇತಿಯಲ್ಲಿ ಮಾಹಿತಿ ನೀಡಿದರು.

ಸ್ವಚ್ಚ ಭಾರತ್ ಮಿಷನ್‍ನ ನೋಡಲ್ ಅಧಿಕಾರಿ ಆನಂದ ಕುಮಾರ್, ಸಹಾಯಕ ಯೋಜನಾಧಿಕಾರಿ ಫೆಲಿಕ್ಸ್ ಡಿಮೆಲ್ಲೊ, ಉಪ ಸಹಾಯಕ ಯೋಜನಾಧಿಕಾರಿ ಸರೋಜಿನಿ, ಸಾಹಸ್ ಸಂಸ್ಥೆಯ ಯೋಜನಾ ನಿರ್ವಾಹಕ ಸುದೇಶ್ ಕುಮಾರ್, ಸ್ವಚ್ಚ ಭಾರತ್ ಮಿಷನ್‍ನ ಯೋಜನಾಧಿಕಾರಿಗಳಾದ ಪವನ್ ಕೆ, ದೊಂಬಯ್ಯ, ಮಂಗಳೂರು ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ನಾಗರಾಜ್ ಮತ್ತು ವಿವಿಧ ಸಂಜೀವಿನಿ ಒಕ್ಕೂಟದ ಮಹಿಳಾ ಸದಸ್ಯರುಗಳು ಉಪಸ್ಥಿತರಿದ್ದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!