ಕಿರು ಆಹಾರ ಉದ್ದಿಮೆಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಜಿ.ಪಂ. ಸಿಇಓ ಸೂಚನೆ

 ಕಿರು ಆಹಾರ ಉದ್ದಿಮೆಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಜಿ.ಪಂ. ಸಿಇಓ ಸೂಚನೆ
Share this post

ಮಂಗಳೂರು,ಫೆ.17, 2022: ಜಿಲ್ಲೆಯಲ್ಲಿ ಕಿರು ಆಹಾರ ಉದ್ದಿಮೆ ಪ್ರೋತ್ಸಾಹಕ್ಕೆ ಬ್ಯಾಂಕ್ ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಅಗತ್ಯ ನೆರವು ಹಾಗೂ ಮಾರ್ಗದರ್ಶನ ನೀಡುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ತಾಕೀತು ಮಾಡಿದರು.

ಅವರು ನಗರದ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಫೆ.16ರ ಬುಧವಾರ ಕಿರು ಆಹಾರ ಉದ್ದಿಮೆ ಪ್ರೋತ್ಸಾಹಕ್ಕೆ ಸಂಬಂಧಿಸಿದಂತೆ ಬ್ಯಾಂಕರ್ಸ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಿರು ಆಹಾರ ಉದ್ದಿಮೆ ನಡೆಸಲು ಇಚ್ಛಿಸುವ ಜಿಲ್ಲೆಯ ಆಸಕ್ತರಿಗೆ ಅರಿವು-ನೆರವಿನ ಅಗತ್ಯವಿದೆ. ಈ ದಿಸೆಯಲ್ಲಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು, ಆ ಮೂಲಕ ಹೆಚ್ಚು ಸಂಖ್ಯೆಯಲ್ಲಿ ಕಿರು ಆಹಾರ ಉದ್ಯಮಿಗಳು ಈ ಯೋಜನೆಯ ಲಾಭಪಡೆಯುವಂತೆ ಬ್ಯಾಂಕ್ ಅಧಿಕಾರಿಗಳು ಹಾಗೂ ಇಲಾಖೆಗಳು ಗಮನ ಹರಿಸಬೇಕು. ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ (ಪಿ.ಎಂ.ಎಫ್.ಎಂ.ಇ) ಯಡಿ ಕೃಷಿ ಚಟುವಟಿಕೆಗಳು, ತೋಟಗಾರಿಕೆ ಹಾಗೂ ಮೀನುಗಾರಿಕೆಗೆ ಸಂಬಂಧಿಸಿದ ಕಿರು ಉದ್ದಿಮೆ ನಡೆಸಲು ಆಸಕ್ತರಿಗೆ ಉತ್ತೇಜನ ನೀಡಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಮೀನುಗಾರಿಕೆಗೆ ಹೆಚ್ಚಿನ ಆದ್ಯತೆ ಇದೆ, ಮೀನಿನ ವಿವಿಧ ಬಗೆಯ ಆಹಾರ ಉತ್ಪನ್ನಗಳಿಗೆ ಹೆಚ್ಚಿನ ಒತ್ತು ನೀಡಬಹುದಾಗಿದೆ, ಕಿರು ಆಹಾರ ಉದ್ದಿಮೆದಾರರು ಒಣ ಮೀನು, ಉಪ್ಪಿನಕಾಯಿ, ಚಿಪ್ಸ್, ಮೀನಿನ ಎಣ್ಣೆ, ಜ್ಯೂಸ್, ಮಾತ್ರೆ, ಮೀನಿನ ಚಟ್ನಿ ಪುಡಿ ಇನ್ನಿತರ ಉತ್ಪನ್ನಗಳನ್ನು ತಯಾರಿಸುವ ಬಗ್ಗೆ ಯೋಜನಾ ವರದಿಯನ್ನು ತಯಾರಿಸಿ ಬ್ಯಾಂಕ್‍ಗಳಿಗೆ ಸಲ್ಲಿಸಿದ್ದಲ್ಲೀ, ಅದರ ಆಧಾರದಲ್ಲಿ ಬ್ಯಾಂಕುಗಳು ಸಾಲಸೌಲಭ್ಯ ನೀಡುತ್ತವೆ, ಈ ಯೋಜನೆಯಡಿ ಮುಖ್ಯವಾಗಿ ಗರಿಷ್ಠ 10 ಲಕ್ಷ ರೂ.ಗಳ ಸಾಲ ಸೌಲಭ್ಯವನ್ನು ಹಾಗೂ ಶೇ.50ರಷ್ಟು ಸಬ್ಸಿಡಿ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಕಿರು ಆಹಾರ ಉದ್ದಿಮೆಯಡಿ ಯುವಕರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯತೆಯ ಬಗ್ಗೆ ತಿಳಿಸಿದ ಡಾ. ಕುಮಾರ್ ಅವರು, ಈಗಾಗಲೇ ಸಂಬಂಧಪಟ್ಟ ಇಲಾಖೆಗಳಿಗೆ ಹಾಗೂ ಬ್ಯಾಂಕ್‍ಗಳಿಗೆ ಕಿರು ಆಹಾರ ಉದ್ದಿಮೆಯಡಿ ಅಗತ್ಯ ನೆರವು ನೀಡಲು ಗುರಿಯನ್ನು ನಿಗದಿ ಪಡಿಸಲಾಗಿದೆ, ಆಸಕ್ತರು ಸಲ್ಲಿಸುವ ಯಾವುದೇ ಅರ್ಜಿಯನ್ನು ತಿರಸ್ಕರಿಸುವಂತಿಲ್ಲ, ಸಲ್ಲಿಸಿರುವ ಅರ್ಜಿಯಲ್ಲಿ ಯಾವುದೇ ಲೋಪದೋಷಗಳಿದ್ದಲ್ಲೀ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರುವಂತೆ ಸೂಚಿಸಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಸೀತಾ ಎಂ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಎಚ್.ಆರ್. ನಾಯಕ್, ನಬಾರ್ಡ್‍ನ ಸಹಾಯಕ ಜನರಲ್ ಮ್ಯಾನೇಜರ್ ಸಂಗೀತಾ, ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರವೀಣ್ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು, ವಿವಿಧ ಬ್ಯಾಂಕುಗಳ ಮ್ಯಾನೇಜರ್‍ಗಳು ಹಾಗೂ ಇತರರು ಸಭೆಯಲ್ಲಿದ್ದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!