ಯುವ ಬ್ರಾಹ್ಮಣ ಪರಿಷತ್ ನಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಐಕ್ಯಮತ್ಯ ಹೋಮ

 ಯುವ ಬ್ರಾಹ್ಮಣ ಪರಿಷತ್ ನಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಐಕ್ಯಮತ್ಯ ಹೋಮ
Share this post

ಉಡುಪಿ, ಫೆ 15, 2022: ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ (ರಿ) ಉಡುಪಿ ಸಂಸ್ಥೆಯ ವತಿಯಿಂದ ಭಾನುವಾರದಂದು ಲೋಕ ಕಲ್ಯಾಣಾರ್ಥವಾಗಿ 24 ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆಯು ನೂತನವಾಗಿ ನಿರ್ಮಿಸಲ್ಪಟ್ಟ ಬ್ರಾಹ್ಮೀ ಸಭಾ ಭವನದಲ್ಲಿ ವೇದಮೂರ್ತಿ ಮೂಡುಬೆಟ್ಟು ಶ್ರೀ ರಮೇಶ ಭಟ್ ರವರ ನೇತೃತ್ವದಲ್ಲಿ ಚಂಡೆ ವಾದನ, ಜಾಗಟೆ, ವಿಷ್ಣು ಸಹಸ್ರನಾಮ ಪಾರಾಯಣ, ಬ್ರಾಹ್ಮಣ ಸುಹಾಸಿನಿ ಆರಾಧನೆ, ವಿಪ್ರ ಮಹಿಳೆಯರಿಂದ ಭಜನೆ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಬಹಳ ವಿಜ್ರಂಭಣೆಯಿಂದ ಸುಸಂಪನ್ನಗೊಂಡಿತು.

ಪಾದೆಬೆಟ್ಟು ವಿಷ್ಣು ಅವರ ತಂಡದ ಹೂವಿನ ಅಲಂಕಾರ ಹಾಗೂ ರಾಜೇಶ್ ಭಟ್ ಪಣಿಯಾಡಿಯವರು ಬಿಡಿಸಿದ ಪುಷ್ಟ ರಂಗವಲ್ಲಿ ಎಲ್ಲರ ಗಮನ ಸೆಳೆಯಿತು.

ಸಂಸ್ಥೆಯ ಅಧ್ಯಕ್ಷ ಚೈತನ್ಯ ಎಂ.ಜಿ. ದಂಪತಿಗಳ ಸುಪರ್ದಿಯಲ್ಲಿ ನಡೆದ ಈ ಪೂಜಾ ಕೈಂಕರ್ಯದ ಕೊನೆಯಲ್ಲಿ ಸೇವೆ ನೀಡಿದ ದಾನಿಗಳನ್ನು ಗೌರವಿಸಲಾಯಿತು. ನಂತರ ಈ ಪುಣ್ಯ ಕೈಂಕರ್ಯದಲ್ಲಿ ಪಾಲ್ಗೊಂಡ ನೂರಾರು ಜನ ಭಕ್ತಿ ಶ್ರದ್ಧೆಯಿಂದ ಪೂಜಿಸಿದ ಶ್ರೀ ಸತ್ಯನಾರಾಯಣ ದೇವರ ಅಷ್ಟ ಲಕ್ಷ್ಮಿಯರ ಕೆತ್ತನೆಯಿರುವ ಪುಣ್ಯೋಪೇತ ರಜತ ಕಲಶವನ್ನು ಸಂಪ್ರೇಕ್ಷಣೆಯ ನಂತರ ಏಲಂ ಮಾಡಲಾಗಿ ಅದನ್ನು ಪೂರ್ವಾಧ್ಯಕ್ಷರಾದ ಶ್ರೀ ರಂಜನ ಕಲ್ಕೂರ ದಂಪತಿಗಳು ಉತ್ತಮ ಬೆಲೆಗೆ ಸ್ವೀಕರಿಸುವ ಮೂಲಕ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾದರು. ಇದರಿಂದ ಬರುವ ಹಣವನ್ನು ಅನೇಕ ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

ಈ ಸಂದರ್ಭದಲ್ಲಿ ಆರೋಗ್ಯ ಇತ್ಯಾದಿ ಸಮಸ್ಯೆಗಳಿಂದ ಬಳಲುತ್ತಿದ್ದ , ನೊಂದ 3 ಜನ ಸಮಾಜ ಭಾಂಧವರಿಗೆ ಧನ ಸಹಾಯವನ್ನು ಮಾಡಲಾಯಿತು.

ವಿಪ್ರ ಬಾಂಧವರಲ್ಲಿ ಐಕ್ಯಮತ್ಯ ವೃದ್ಧಿಗಾಗಿ ಅದೇ ದಿನ ಮುಂಜಾನೆ ದೇವತಾ ಪ್ರಾರ್ಥನೆಯ ನಂತರ ಐಕ್ಯಮತ್ಯ ಹೋಮ ಹಾಗೂ ಭಾಗ್ಯ ಸೂಕ್ತ ಹೋಮ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ವಿಷ್ಣು ಪಾಡಿಗಾರ್ ರವರ ಮುತುವರ್ಜಿಯಲ್ಲಿ ನಡೆಯಿತು. ಮಾಜಿ ಅಧ್ಯಕ್ಷ ಉದ್ಯಮಿ ಕೆ. ಎಮ್. ಉಡುಪ ರ ಪ್ರಾಯೋಜಕತ್ವದಲ್ಲಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ಬರಹ: ರಾಜೇಶ್ ಭಟ್ ಪಣಿಯಾಡಿ

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!