ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಮಂಡಲ: ಭೀಷ್ಮಾಷ್ಟಮಿ-ಮಧ್ವನವಮಿ ಸಂದರ್ಭದಲ್ಲಿ ಅಧಿಕಾರ ಹಸ್ತಾಂತರ
ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಮಂಡಲ (ತುಶಿಮಾಮ) ಉಡುಪಿಯ ಕಛೇರಿಯಲ್ಲಿ ಮಧ್ವ ನವಮಿ ಪ್ರಯುಕ್ತ ಮಧ್ವಾಚಾರ್ಯರ ಮೂರ್ತಿಗೆ ತುಶಿಮಾಮ ವತಿಯಿಂದ ಬುಧವಾರ ಸಂಜೆ ಪುಷ್ಪಾರ್ಚನೆ ಸಲ್ಲಿಸಿ ಆರತಿ ಬೆಳಗಿ ಗುರು ಶ್ರೇಷ್ಟರಿಗೆ ಗೌರವ ಸಲ್ಲಿಸಲಾಯಿತು.
ಹಲವು ವರ್ಷಗಳಿಂದ ಸಂಸ್ಥೆಯ ಧ್ಯೇಯ ಉದ್ದೇಶಗಳನ್ನು ಎತ್ತಿಹಿಡಿದು ಕೆಲವೊಂದು ಸಂದಿಗ್ದದ ಸಮಯದಲ್ಲೂ ಕಟು ಹಾಗೂ ಧೃಡ ನಿರ್ಧಾರಗಳ ಮೂಲಕ ವ್ಯವಹರಿಸುತ್ತ 18 ವರ್ಷ ತುಂಬಿದ ಸಂಸ್ಥೆಯನ್ನು ಮುನ್ನಡೆಸುತ್ತಾ ಬಂದಿರುವ ಜ್ಞಾನ ವೃದ್ಧ ಶ್ರೀ ಅರವಿಂದ ಆಚಾರ್ಯರವರು ಅವರ ಜೊತೆ ಸಂಸ್ಥೆಯ ಕಾರ್ಯದರ್ಶಿಯಾಗಿದ್ದು ಅಧ್ಯಕ್ಷರಿಗೆ ಬೆನ್ನೆಲುಬಾಗಿ ನಿಂತು ಸಂಪೂರ್ಣ ಸಹಕಾರ ನೀಡುತ್ತ ಬಂದಿದ್ದ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯ ಯಾಗಿ ಕಾರ್ಯನಿರ್ವಹಿಸುತ್ತಿರುವ ಬಹು ಚಟುವಟಿಕೆಯ ವ್ಯಕ್ತಿ ನೂತನ ಅಧ್ಯಕ್ಷ ರವಿಪ್ರಕಾಶ್ ಭಟ್ ಅಂಬಲಪಾಡಿ ಯವರಿಗೆ ಸಂಸ್ಥೆಯ ಬೈ-ಲಾ ಹಾಗೂ ನಿಯಮಾವಳಿಗಳ ಪ್ರತಿಗಳನ್ನು ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.
ಅದೇ ರೀತಿ ಜಯರಾಮ ಆಚಾರ್ಯ ಬೈಲೂರು ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ರವೀಂದ್ರ ಆಚಾರ್ಯ ಕೊರಂಗ್ರಪಾಡಿ ಕೋಶಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ವಿದ್ವಾಂಸ ಬಾಲಾಜಿ ರಾಘವೇಂದ್ರ ಆಚಾರ್ಯರವರು ಭೀಷ್ಮಾಷ್ಟಮಿ ಹಾಗೂ ಮಧ್ವನವಮಿಯ ದಿನ ವಿಶೇಷ ದ ಬಗ್ಗೆ ಹಾಗೂ ವ್ಯಕ್ತಿ ವಿಶೇಷತೆಯ ಅಂದರೆ ಜ್ಞಾನ ಸಾಗರರಾಗಿದ್ದ ಭೀಷ್ಮಾಚಾರ್ಯರ ಹಾಗೂ ಆಚಾರ್ಯ ಮಧ್ವರ ವ್ಯಕ್ತಿತ್ವದ ಬಗ್ಗೆ ಬಹಳಷ್ಟು ವಿಚಾರಗಳನ್ನು ಹಂಚಿಕೊಂಡರು. ಶರಶಯ್ಯೆಯಲ್ಲಿ ಮಲಗಿ ರಕ್ತ ಸ್ರಾವದಿಂದ ದೈಹಿಕವಾಗಿ ಮಾನಸಿಕವಾಗಿ ಕುಗ್ಗಿದ್ದ ಅಳಿವಿನಂಚಿನಲ್ಲಿದ್ದ ಜ್ಞಾನ ಕೋಶ ಭೀಷ್ಮರು ವಿಷ್ಣುವಿನ ಪ್ರತಿರೂಪನಾಗಿದ್ದ ಶ್ರೀಕೃಷ್ಣ ದಿವ್ಯ ದರುಶನವನ್ನಿತ್ತಾಗ ಆನಂದ ಬಾಷ್ಪಗಳನ್ನು ಸೂಸುತ್ತಿರಲು ಬಳಲಿದ್ದ ಇಚ್ಚಾಮರಣಿಯ ನಾಲಿಗೆಯಲ್ಲಿ ಶಕ್ತಿಯಾಗಿ ಕುಳಿತು ವಿಷ್ಣುವಿನ ಸಹಸ್ರನಾಮಗಳ ಗುಣಗಾನ ಮಾಡುವಲ್ಲಿ ನೆರವಾದ ಶ್ರೇಷ್ಟ ದಿನ ಭೀಷ್ಮಾಷ್ಟಮಿ. ಮತ್ತು ಅದೇ ರೀತಿ ಮಧ್ವಾಚಾರ್ಯರು ವಿಷ್ಣು ಸಹಸ್ರನಾಮಗಳ ಪ್ರತಿಯೊಂದು ನಾಮಕ್ಕೆ ನೂರಕ್ಕೂ ಮಿಕ್ಕಿದ ಅರ್ಥಗಳನ್ನು ಸಾತ್ವಿಕ ಬಂಧುಗಳಿಗೆ ಮನದಟ್ಟು ಮಾಡಿದವರು. ದ್ವೈತ ಸಿದ್ಧಾಂತದ ಮೂಲಕ ಪರಮಾತ್ಮನ ಸಾಕ್ಷಾತ್ಕಾರವನ್ನು ಪಡೆಯುವ ಸುಲಭಮಾರ್ಗ ವನ್ನು ಭೋದಿಸಿ, ಬದರಿಯಲ್ಲಿ ದೇವತೆಗಳಿಂದ ಆದ ಪುಷ್ಪ ವೃಷ್ಟಿಯಲ್ಲಿ ಅದೃಶ್ಯರಾಗಿ ವೇದ ಪುರುಷನಾಗಿ ಜ್ಞಾನಿಗಳ ಹೃದಯದಲ್ಲಿ ಇಂದಿಗೂ ನೆಲೆ ನಿಂತವರು ಆಚಾರ್ಯ ಮಧ್ವರು ಎಂದು ತನ್ನ ಅನುಭವ ಧಾರೆಯನ್ನು ಬಿಚ್ಚಿಡುತ್ತ ಉಡುಪಿಯ ಜ್ಞಾನಕೋಶ ಬನ್ನಂಜೆ ಗೋವಿಂದಾಚಾರ್ಯರ ಜೊತೆಗಿನ ತನ್ನ ಒಡನಾಟವನ್ನು ನೆನಪಿಸಿಕೊಂಡರು.
ಜೊತೆಗೆ ನೂತನ ಅಧ್ಯಕ್ಷ ಹಾಗೂ ಎಲ್ಲಾ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾಗಿ ನೇಮಕಗೊಂಡ ಅರವಿಂದಾಚಾರ್ಯರಿಗೆ ಅವರ ನಿಷ್ಟೆಯ ಸೇವೆಗಾಗಿ ಶಾಲು ಹೊದಿಸಿ ಫಲಪುಷ್ಪ ನೀಡಿ
ಕೃತಜ್ಞತೆ ಸಲ್ಲಿಸಲಾಯಿತು.
ಹಿರಿಯರ ಮಾರ್ಗದರ್ಶನದೊಂದಿಗೆ ಲೋಕಹಿತಕ್ಕಾಗಿ ಕೆಲಸ ಮಾಡಿ ಪಡೆದ ಪದವಿಗೆ ನ್ಯಾಯ ಒದಗಿಸುತ್ತೇನೆ ಎಂದು ನೂತನ ಅಧ್ಯಕ್ಷ ರವಿ ಪ್ರಕಾಶ್ ಭಟ್ ತನ್ನ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು. ಬೈಲೂರು ಜಯರಾಮ ಆಚಾರ್ಯರು ಕಾರ್ಯಕ್ರಮ ನಿವ೯ಹಣೆಯ ಜೊತೆ ಬಂದ ಎಲ್ಲ ಅತಿಥಿ ಅಭ್ಯಾಗತರಿಗೆ ವಂದನೆಯನ್ನು ಸಲ್ಲಿಸಿದರು. ಸಭೆಯ ಪ್ರಾರಂಭದಲ್ಲಿ ಸಂಸ್ಥೆಯ ಮಹಿಳಾ ಸದಸ್ಯರು ಭೀಷ್ಮಾಷ್ಟಮಿಯ ಹಾಗೂ ಮಧ್ವನವಮಿಯ ಅಂಗವಾಗಿ ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಬರಹ: ರಾಜೇಶ್ ಭಟ್ ಪಣಿಯಾಡಿ .