ಯುವ ಜನತೆಯಿಂದ ಜನಪರ ಕಾರ್ಯಕ್ರಮಗಳು ಜೀವಂತ: ಸಾಧು ಪಾಣರ

 ಯುವ ಜನತೆಯಿಂದ ಜನಪರ ಕಾರ್ಯಕ್ರಮಗಳು ಜೀವಂತ: ಸಾಧು ಪಾಣರ
Share this post

ಉಡುಪಿ, ಫೆ 9, 2022: ಯುವಜನತೆ ಜನಪರ ಮೌಲ್ಯಗಳನ್ನು ಅರಿತು, ಸಮಾಜದಲ್ಲಿ ಮುಂದಿನ ಪೀಳಿಗೆಗಳಿಗೆ ಜನಪರ ಕಾರ್ಯಕ್ರಮಗಳನ್ನು ಜೀವಂತವಾಗಿರಿಸಲು ಸಹಕರಿಸುವಂತೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಧು ಪಾಣರ ಹೇಳಿದರು.

ಅವರು  ಮಂಗಳವಾರ ಅಲೆವೂರು ಪ್ರಗತಿನಗರದ ಡಾ. ಶಿವರಾಮ ಕಾರಂತ ಕಲಾಗ್ರಾಮದ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಸಭಾಂಗಣದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ವತಿಯಿಂದ ನಡೆದ ವಿಶೇಷ ಘಟಕ ಯೋಜನೆಯಡಿ ಜನಪರ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಗದ ಜನರು ಆಚರಿಸಿಕೊಂಡು ಬಂದಿರುವ ಜನಪದ ಕಾರ್ಯಕ್ರಮಗಳು ಇತ್ತೀಚಿನ ದಿನಗಳಲ್ಲಿ ಕಾಲಕ್ರಮೇಣ ಮರೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂತಹ ಜನಪರ ಉತ್ಸವ ಕಾರ್ಯಕ್ರಮಗಳು ಅನಿವಾರ್ಯವಾಗಿದ್ದು, ಜಾನಪದ ಮೌಲ್ಯಗಳ ಉಳಿವಿಗೆ ನಾವೆಲ್ಲ ನೆರವಾಗಬೇಕು ಎಂದರು.

ಕರ್ನಾಟಕ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಕನ್ನಡ ಸಾಹಿತ್ಯ, ಸಂಸ್ಕೃತಿಯ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಕೆಲಸ ಮಾಡಬೇಕು. ಜಾನಪದ ಪರಂಪರೆಯ ಉಳಿವಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಇನ್ನಷ್ಟು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಯುವ ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ಯುವ ಕಲಾವಿದರಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದರು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನಪದ ಎಂದರೆ ಜನರಿಂದ-ಜನರಿಗೆ, ಜ್ಞಾನದಿಂದ- ಜ್ಞಾನಕ್ಕೆ, ಅಂದರೆ ಗ್ರಾಮೀಣ ಭಾಗದ ಜನರು ಕೃಷಿ ಕೆಲಸ ಮಾಡುವಾಗ ಬಾಯಿಯಿಂದ ಬರುವ ಪದ್ಯ. ಅದು ಅಲ್ಲೇ ಹುಟ್ಟುವಂತದ್ದು. ಈ ಜಾನಪದವನ್ನು ಉಳಿಸುವಂತಹ ಪ್ರಯತ್ನವಾಗಬೇಕು. ಜನಪದ ಕಾರ್ಯಕ್ರಮಗಳನ್ನು ಮಾಡುವುದರಿಂದ ಯುವಜನರನ್ನು ಮತ್ತು ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವಂತಹ ಕೆಲಸವಾಗುತ್ತದೆ ಎಂದರು.

ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಜಾನಪದ ಕಲಾವಿದ ರಮೇಶ್ ಕಲ್ಮಾಡಿ, ಜನಪದ ಪರಿಷತ್ತಿನ ಕಾರ್ಯದರ್ಶಿ ರವಿರಾಜ್ ನಾಯಕ್, ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು, ಪ್ರದೀಪ್ ಡಿ.ಎಮ್. ಹಾವಂಜೆ ನಿರೂಪಿಸಿ, ರಾಮು ವಂದಿಸಿದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!