ರಾಜ್ಯೋತ್ಸವ ಪ್ರಶಸ್ತಿಗೆ ಇನ್ನು ಅರ್ಜಿ ಹಾಕುವಂತಿಲ್ಲ: ಸುನೀಲ್ ಕುಮಾರ್

 ರಾಜ್ಯೋತ್ಸವ ಪ್ರಶಸ್ತಿಗೆ ಇನ್ನು ಅರ್ಜಿ ಹಾಕುವಂತಿಲ್ಲ: ಸುನೀಲ್ ಕುಮಾರ್
Share this post

ಮಂಗಳೂರು. ಫೆ.5, 2022: ಮುಂದಿನ ವರ್ಷದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿಗಳನ್ನು ಪಡೆಯದೆ, ಆಯ್ಕೆ ಸಮಿತಿಯನ್ನು ರಚಿಸಿ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಸುನೀಲ್ ಕುಮಾರ್ ತಿಳಿಸಿದ್ದಾರೆ.

ಅವರು ಶನಿವಾರ ನಗರದ ಕೊಡಿಯಾಲ್ ಬೈಲ್‍ನ ಶಾರದಾ ವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಮಹಾಲಿಂಗ ನಾಯ್ಕ ಅವರನ್ನು ಸನ್ಮಾನಿಸಿ ಮಾತನಾಡಿದರು.

ಪ್ರಶಸ್ತಿಗಾಗಿ ನಾವು ಎಂದು ಹುಡುಕಿಕೊಂಡು ಹೋಗಬಾರದು. ಪ್ರಶಸ್ತಿ ಸಾಧಕರನ್ನು ಗುರುತಿಸಿ ನೀಡುವಂತಾಗಬೇಕು. ಆ ನಿಟ್ಟಿನಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹ ಸಾಧಕರ ಆಯ್ಕೆ ನಡೆಯಲಿದೆ ಎಂದು ಅವರು ಹೇಳಿದರು.

ನಾಡಿನೆಲ್ಲಡೆ ನೀರಿಗಾಗಿ ಗಲಾಟೆ, ಸಂಘರ್ಷ, ನ್ಯಾಯಾಲಯದ ಮೆಟ್ಟಿಲೇರುವ ಈ ಸಂದರ್ಭದಲ್ಲಿ ಮಹಾಲಿಂಗ ನಾಯ್ಕರ ಸಾಧನೆ ಯುವ ಪೀಳಿಗೆಗೆ ಪ್ರೇರಣೆಯಾಗಿದೆ. ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ದೇಶದ ಜನರನ್ನು ಕಣ್ತೆರೆಸುವಲ್ಲಿ ಈ ಪ್ರಶಸ್ತಿ ಅರ್ಹವಾಗಿಯೇ ಮಹಾಲಿಂಗ ನಾಯ್ಕರನ್ನು ಹುಡುಕಿಕೊಂಡು ಬಂದಿದೆ ಎಂದು ಅವರು ಹೇಳಿದರು.

ಸನ್ಮಾನ ಸ್ವೀಕರಿಸಿ ಮತನಾಡಿದ ಮಹಾಲಿಂಗ ನಾಯ್ಕ ಅವರು ಇಂದು ನೀರಿಗಾಗಿ ಸಮಸ್ಯೆಗಳು ಹೆಚ್ಚಾಗುತ್ತಿರುವಂತೆಯೇ ಮುಂದಿನ ದಿನಗಳಲ್ಲಿ ನೀರು ಬಂಗಾರಕ್ಕಿಂತಲೂ ಹೆಚ್ಚು ಬೆಲೆಬಾಳಲಿದೆ. ಅದಕ್ಕಾಗಿ ನೀರಿನ ಮಹತ್ವವನ್ನು ಅರಿತು ಸಾರ್ವಜನಿಕರು ಮಿತವಾಗಿ ಉಪಯೋಗಿಸಬೇಕು ಎಂದು ತಿಳಿಸಿದರು.

ಸಮಾರಂಭದಲ್ಲಿ ಶಾಸಕ ವೇದವ್ಯಾಸ ಕಾಮತ್, ಶಾರದಾ ವಿದ್ಯಾಲಯದ ಮುಖ್ಯಸ್ಥ ಎಂ.ಬಿ. ಪುರಾಣಿಕ್, ಮೇಯರ್ ಪ್ರೇಮಾನಂದ ಶೆಟ್ಟಿ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಸುಧಾಕರ ರಾವ್ ಪೇಜಾವರ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಾಜೇಶ್ ಸ್ವಾಗತಿಸಿದರು. ಶಾರದಾ ವಿದ್ಯಾಲಯದ ಉಪ ಪ್ರಾಂಶುಪಾಲ ದಯಾನಂದ ಕಟೀಲು ಕಾರ್ಯಕ್ರಮ ನಿರೂಪಿಸಿದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!