ಚಲನಚಿತ್ರ ಕ್ಷೇತ್ರದ ದಿಗ್ಗಜ ಗಿರೀಶ್ ಕಾಸರವಳ್ಳಿಯವರಿಗೆ ವಿಶ್ವ ಪ್ರಭಾ ಪುರಸ್ಕಾರ

 ಚಲನಚಿತ್ರ ಕ್ಷೇತ್ರದ ದಿಗ್ಗಜ ಗಿರೀಶ್ ಕಾಸರವಳ್ಳಿಯವರಿಗೆ ವಿಶ್ವ ಪ್ರಭಾ ಪುರಸ್ಕಾರ
Share this post

ಡಾ. ಗಿರೀಶ್ ಕಾಸರವಳ್ಳಿ … ಕರುನಾಡು ಕಂಡ ಬಲು ಹೆಮ್ಮೆಯ ಕನ್ನಡಿಗ. ನಮ್ಮ ನೆಲ ಕಲೆ, ನುಡಿ ಹಾಗೂ ಸಂಸ್ಕೃತಿಯ ಸೊಗಡನ್ನು ಅರಿತು ಅದನ್ನು ಚಿತ್ರೀಕರಣದ ಮೂಲಕ ದಾಖಲೆಯಾಗಿಸಿಟ್ಟ ಶ್ರೇಷ್ಟ ಚಲನಚಿತ್ರ ನಿರ್ಧೇಶಕ. ಇವರು ಮುಟ್ಟಿದ್ದೆಲ್ಲವೂ ಬೆಳ್ಳಿ ಬಂಗಾರ.

ಗಿರೀಶ್ ಕಾಸರವಳ್ಳಿಯವರ ಬಯೋಗ್ರಫಿಯನ್ನು ಪುಸ್ತಕಗಳಿಂದ ಪುಟಗಳಿಗೆ ಬಟ್ಟಿ ಇಳಿಸಿ ಬರೆಯುವುದು ಅದರಲ್ಲೂ ಪುಟಗಳೆರಡಕ್ಕೆ ಇಳಿಸುವುದು ಸುಲಭ ಸಾಧ್ಯದ ಮಾತಲ್ಲ.

ಶಿವಮೊಗ್ಗದ ಒಂದು ಸುಂದರ ಗಿರಿವನಗಳ ತಾಣ ತೀರ್ಥಹಳ್ಳಿಯ ಸಮೀಪದ ಪುಟ್ಟ ಊರು ಕೆಸಲೂರು. ಅದೇ ಕಾಸರವಳ್ಳಿಯವರ ತವರೂರು. ಕಳೆದ ಡಿಸೆಂಬರ್ 3ರಂದಷ್ಟೇ ಜೀವನ ಪಯಣದ 72ನೇ ಮೆಟ್ಟಿಲಿಗೆ ಪಾದಾರ್ಪಣೆ ಮಾಡಿದ್ದು. ಗಿರೀಶ್ ತನ್ನ ಪ್ರಾಥಮಿಕ ಹಾಗೂ ಪ್ರೌಢ ವಿದ್ಯಾಭ್ಯಾಸವನ್ನು ತನ್ನೂರು ಕೆಸಲೂರು ಹಾಗೂ ಕಮ್ಮರಡಿಯಲ್ಲ ಮುಗಿಸಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಪದವಿಯನ್ನು ಮುಗಿಸಿದರು.

ಇವರ ತಾಯಿ ಲಕ್ಷ್ಮೀದೇವಿ. ತಂದೆ ಗಣೇಶ್ ರಾವ್ ಯಕ್ಷಗಾನ ಪ್ರೇಮಿಗಳೂ ಕಲಾವಿದರೂ ಹೌದು. ಜೊತೆಗೆ ಸ್ವಾತಂತ್ರ್ಯ ಸಮರದಲ್ಲಿ ತಾಯ್ನಾಡಿಗಾಗಿ ಸೇವೆಗೈದವರು. ಹಾಗಾಗಿ ಬಾಲ್ಯದಿಂದಲೂ ಕಾಸರವಳ್ಳಿಯವರಿಗೆ ಸುತ್ತಲಿನ ಪರಿಸರ, ಜನಜೀವನ, ಕಲೆ, ಸಂಸ್ಕೃತಿಯ ಬಗ್ಗೆ ಒಂದಷ್ಟು ಒಲವು ಮೂಡತೊಡಗಿತ್ತು. ಅವರಿಗೆ ಬಾಲ್ಯದಲ್ಲಿ ಅವರ ಕನಸುಗಳಿಗೆ ಪ್ರೇರಕ ಶಕ್ತಿಯಾಗಿ ನಿಂತವರು ಕಾಲೇಜು ಜೀವನದ ಪ್ರೊಫೆಸರ್ ಜಿ. ಎಸ್.ಶಿವರುದ್ರಪ್ಪನವರು ಹಾಗೂ ಶ್ರೇಷ್ಟ ನಟ, ನಾಟಕಕಾರ, ನೀನಾಸಂ ರಂಗ ಶಾಲೆಯ ಸಂಸ್ಥಾಪಕ ಮತ್ತು ಸಂಬಂಧಿ ಕೆ.ವಿ ಸುಬ್ಬಣ್ಣ.

ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮಣಿಪಾಲದ ಫಾರ್ಮಸಿ ಕಾಲೇಜಲ್ಲಿ ಬಿ-ಫಾರ್ಮಾಕ್ಕೆ ಸೇರಿದ ಸಂದರ್ಭದಲ್ಲಿ ಸಾಂಸ್ಕೃತಿಕ ರಂಗದ ಅವರ ಆಸಕ್ತಿಗೆ ಒಂದಷ್ಟು ಪುಷ್ಟಿ ದೊರೆತರೂ ತಾನು ಕಲಿಯಬೇಕಾದ್ದು ಇನ್ನೇನೋ ಇದೆ ಎಂದು ನೇರವಾಗಿ ಪುಣೆಯತ್ತ ಹೆಜ್ಜೆ ಹಾಕಿದರು. ಅಲ್ಲಿ ರಾಷ್ಟ್ರೀಯ ಚಲನಚಿತ್ರ ತರಬೇತಿ (FTII) ಸಂಸ್ಥೆಯ ನಿರ್ದೇಶನ ವಿಭಾಗದಲ್ಲಿ ಪರಿಣತಿಯನ್ನು ಪಡೆದು ಬಂಗಾರದ ಪದಕದೊಂದಿಗೆ ಡಿಪ್ಲೊಮಾ ಮುಗಿಸಿದರು. ಆ ಪದವಿಗಾಗಿ ಅಂದು ರಚಿಸಿದ ಕಿರುಚಿತ್ರ “ಅವಶೇಷ ” ಪ್ರಥಮಬಾರಿಗೆ ರಾಷ್ಟ್ರಪತಿಗಳ ಕೈಯಿಂದ ರಜತ ಕಮಲ ಪ್ರಶಸ್ತಿ ಪಡೆಯುವಂತಾಯ್ತು.

ಆದರೆ ಅವರಿಗೆ ಜೀವನದಲ್ಲಿ ಅದೃಷ್ಟದ ತಿರುವು ನೀಡಿದ ಅವರ ಪ್ರಥಮ ಚಲನಚಿತ್ರ “ಘಟಶ್ರಾದ್ಧ ” ಇದರೊಂದಿಗೆ ತನ್ನ 28ನೇ ವರ್ಷದಲ್ಲಿ ರಾಷ್ಟ್ರಪತಿಗಳ ಕೈಯಿಂದ ಸ್ವರ್ಣ ಕಮಲ ಪ್ರಶಸ್ತಿ ಪಡೆದ ಅತಿ ಕಿರಿಯ ನಿರ್ಧೇಶಕ ನೆಂಬ ಹೆಗ್ಗಳಿಕೆಗೆ ಪಾತ್ರರಾದವರು ಇವರು. ಭಾರತೀಯ ಸಿನೇಮಾದ 100 ವರ್ಷದ ಇತಿಹಾಸದಲ್ಲಿ ಮೂಡಿ ಬಂದ 20 ಶ್ರೇಷ್ಟ ಅತ್ಯುತ್ತಮ ಚಿತ್ರಗಳಲ್ಲಿ ಇದೂ ಒಂದು. ಕಳೆದ 4 ದಶಕಗಳಲ್ಲಿ ಇವರಿಂದ ಜನ್ಮತಳೆದ 16 ಚಲನಚಿತ್ರಗಳ ಪೈಕಿ ಘಟಶ್ರಾದ್ಧದ ನಂತರ ಇವರ ತಬರನ ಕಥೆ, ತಾಯಿ ಸಾಹೇಬ ಮತ್ತು ದ್ವೀಪ …. ಸ್ವರ್ಣ ಕಮಲ ರಾಷ್ಟ್ರ ಪ್ರಶಸ್ತಿ ಪಡೆದರೆ ಇನ್ನುಳಿದ 7 ಚಿತ್ರಗಳು ರಜತ ಕಮಲ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿವೆ.

ನಾಲ್ಕು ಸ್ವರ್ಣ ಕಮಲ ಪ್ರಶಸ್ತಿ ಪಡೆದ ರಾಷ್ಟ್ರದ ನಾಲ್ಕನೇ ಶ್ರೇಷ್ಟ ನಿರ್ದೇಶಕರೆಂಬ ಗೌರವವೂ ಇವರ ಪಾಲಿಗಿದೆ. ಗೃಹಭಂಗ ಎಂಬ ಟಿ.ವಿ ಧಾರವಾಹಿ ಮತ್ತು ಕೆಲವು ಟೆಲಿ ಚಿತ್ರಗಳು ಕೂಡ ದಾಖಲೆಯನ್ನು ಬರೆದಿವೆ. ಒಟ್ಟಾರೆ ಇವರ 16 ಚಿತ್ರಗಳು ಈ ವರೆಗೆ 25ಕ್ಕೂ ಮಿಕ್ಕಿದ ರಾಷ್ಟ್ರೀಯ ಪ್ರಶಸ್ತಿ, ನಲ್ವತ್ತೈದಕ್ಕೂ ಹೆಚ್ಚು ರಾಜ್ಯ ಪ್ರಶಸ್ತಿ ಹಾಗೂ 21 ಕ್ಕೂ ಮಿಕ್ಕಿದ ಅಂತರ್ ರಾಷ್ಟ್ರೀಯ ಪ್ರಶಸ್ತಿಗಳು ಅವರ ಬದ್ದತೆ ಹಾಗೂ ವೃತ್ತಿ ನಿಷ್ಟೆಗೆ ಸಂದ ಗೌರವ. ಕಾಸರವಳ್ಳಿಯವರ ಹಾಗೂ ಅವರ ಚಿತ್ರಗಳ ಬಗ್ಗೆ ಶ್ರೀ ಶಕ್ತಿ ಸೇನ್ ಗುಪ್ತಾ, ಜಾನ್ ವುಡ್, ಓ ಪಿ ಶ್ರೀವಾಸ್ತವರಂತಹ ಲೇಖಕರು ಕೃತಿಗಳನ್ನು ರಚಿಸಿದ್ದಾರೆ.

ಮಾಸ್ಕೋ, ಐಸೋಲಾ, ಏಷ್ಯಾನ್ ಫೆಸಿಫಿಕ್, ಬಾರ್ಸಿಲೋನಾ, ಮೋಮಿ ಓಸ್ಯನ್ ಫಿಲ್ಮ್ ಫೆಸ್ಟಿವಲ್ ಗಳಲ್ಲಿ ಇವರ ಚಿತ್ರಗಳು ವಿವಿಧ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿವೆ. ಮನೆ, ಬಣ್ಣದ ವೇಷ, ಕ್ರೌರ್ಯ, ದ್ವೀಪ, ಹಸೀನಾ, ಗುಲಾಬಿ ಟಾಕೀಸ್, ಕೂರ್ಮಾವತಾರ ಇತ್ಯಾದಿ ಚಲನಚಿತ್ರಗಳು ಒಂದಲ್ಲ ಒಂದು ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡು ತನ್ನ ಮೆರುಗನ್ನು ಧೃಢಪಡಿಸಿಕೊಂಡಿವೆ.

ಕಾಸರವಳ್ಳಿಯವರು ಫಿಲ್ಮ್ ಸ್ಕೂಲ್ ನ ಪ್ರಾಂಶುಪಾಲರಾಗಿ 8 ವರ್ಷ ದುಡಿದರು. ಚಿತ್ರ ಸಮೂಹದ ಸ್ಥಾಪಕ ಅಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿದರು. ಪ್ರಸ್ತುತ ಕೆ.ಆರ್ ನಾರಾಯಣನ್ ಫಿಲ್ಮ್ ಇನ್ಸ್ಟಿಟ್ಯೂಟ್ ಎಕಾಡೆಮಿ ಕೌನ್ಸಿಲ್ ನ ಚೇರ್ಮನ್ ಆಗಿ ವ್ರತ್ತಿ ಜೀವನ ನಡೆಸುತ್ತಿದ್ದಾರೆ.

2009ರಲ್ಲಿ ದಕ್ಷಿಣ ಏಷ್ಯಾ ಫೆಡರೇಶನ್ ಕ್ರಿಸ್ಟಲ್ ಗ್ಲೋಬ್ ಪ್ರಶಸ್ತಿ, 2011 ರಲ್ಲಿ ಪ್ರತಿಷ್ಟಿತ ಪದ್ಮಶ್ರೀ ಪ್ರಶಸ್ತಿ, ಕುವೆಂಪು ವಿಶ್ವವಿದ್ಯಾಲಯ ನೀಡಿದ ಗೌರವ ಡಾಕ್ಟರೇಟ್ ಡಿಗ್ರಿ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಇತ್ಯಾದಿ ಪ್ರಶಸ್ತಿ ಪುರಸ್ಕಾರಗಳು ಇವರ ಸಾಧನೆಗೆ ಹಿಡಿದ ಕೈಗನ್ನಡಿಯಾದವು.

ಇನ್ನು ಗಿರೀಶ್ ಕಾಸರವಳ್ಳಿಯವರ ಸಂಸಾರದ ಬಗ್ಗೆ ಹೇಳಬೇಕಾದರೆ ಇವರ ಪತ್ನಿ ವೈಶಾಲಿ ಕಾಸರವಳ್ಳಿ ಕೂಡ ಸಮಾಜಕ್ಕೆ ಅನುಪಮ ಸೇವೆ ನೀಡಿದವರು. ಉತ್ತಮ ನಟಿ, ನಿರ್ದೇಶಕಿ, ಲೇಖಕಿ, ವಸ್ತ್ರವಿನ್ಯಾಸಕಿ ಹೀಗೆ ಬಹುಮುಖ ಪ್ರತಿಭೆಯ ಖನಿಯಾಗಿ ಮೆರೆದು ಮರೆಯಾದವರು.

ಇನ್ನು ಇಬ್ಬರು ಮಕ್ಕಳು ತಂದೆಯ ಪಾಲಿಗೆ ಮಿನುಗು ನಕ್ಷತ್ರಗಳು. ಚಲನ ಚಿತ್ರಕ್ಕೆ ಸಂಬಂಧಪಟ್ಟಂತೆ ಪದವಿ ಪಡೆದು ಹಲವಾರು ಚಿತ್ರಗಳಲ್ಲಿ, ಟಿ.ವಿ. ಧಾರವಾಹಿಗಳಲ್ಲಿ ಅಭಿನಯ, ಚಿತ್ರಕಥೆ, ವಸ್ತ್ರವಿನ್ಯಾಸ, ಲೇಖನ ಹೀಗೆ ತಂದೆ ತಾಯಿಯರ ಜಾಡನ್ನು ಹಿಡಿದು ವೃತ್ತಿನಿರತರಾಗಿ ಶ್ರೇಷ್ಟತೆಯನ್ನು ಸಂಪಾದಿಸಿ ಕೊಂಡಿರುವುದು ತಂದೆಗೂ ಹೆಮ್ಮೆಯ ವಿಷಯ.

ಹೀಗೆ ನಮ್ಮ ನಾಡು ನುಡಿ ಸಂಸ್ಕೃತಿಯನ್ನು ಎತ್ತಿಹಿಡಿದು ಚಲನಚಿತ್ರ ಕ್ಷೇತ್ರದಲ್ಲಿ ಕ್ರಾಂತಿ ಎಬ್ಬಿಸಿದ – ಅಪಾರ ಕೊಡುಗೆ ನೀಡಿದ ರಾಷ್ಟ್ರದ ಶ್ರೇಷ್ಟ ನಿರ್ದೇಶಕರಲ್ಲೊಬ್ಬರಾದ, ಮೌಲ್ಯಯುತ ಚಲನಚಿತ್ರಗಳನ್ನು ಸಮಾಜಕ್ಕೆ ನೀಡಿದ ಗಿರೀಶ್ ಕಾಸರವಳ್ಳಿ ಯವರಿಗೆ ಸಂಸ್ಕೃತಿ ವಿಶ್ವಪ್ರತಿಷ್ಠಾನ (ರಿ) ಉಡುಪಿ ಸಂಸ್ಕೃತಿ ಉತ್ಸವದ ಸಂದರ್ಭದಲ್ಲಿ ಪ್ರಭಾವಿಶ್ವನಾಥ ಶೆಣೈ ಪ್ರಾಯೋಜಿತ ಒಂದು ಲಕ್ಷ ಮೊತ್ತದೊಂದಿಗೆ “ವಿಶ್ವ ಪ್ರಭಾ ಪುರಸ್ಕಾರ – 2022. ” ನ್ನು ಜನವರಿ 31, 2022 ರಂದು ನೀಡಿ ಗೌರವಿಸಲಿದೆ.

ಲೇಖನ: ರಾಜೇಶ್ ಭಟ್ ಪಣಿಯಾಡಿ

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!