ಜನವರಿ 26 ರಂದು ವಿವಿಧ ಸಂಘಟನೆಗಳಿಂದ ನಾರಾಯಣ ಗುರುಗಳ ಭಾವಚಿತ್ರದ ಮೆರವಣಿಗೆ
ಮಂಗಳೂರು, ಜ 23, 2022: ನಾರಾಯಣ ಗುರುಗಳ ಸ್ತಬ್ದಚಿತ್ರಕ್ಕೆ ಗಣರಾಜ್ಯೋತ್ಸವ ಪರೇಡ್ ನಲ್ಲಿ ಅವಕಾಶ ನೀಡದ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಜನವರಿ 26 ರಂದು ಸಂಜೆ 3ಕ್ಕೆ ಮಂಗಳೂರಿನ ಕ್ಲಾಕ್ ಟವರ್ ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ನಾರಾಯಣ ಗುರುಗಳ ಭಾವಚಿತ್ರದ ಮೆರವಣಿಗೆ ಯನ್ನು ಎಡ, ಜಾತ್ಯಾತೀತ ಪಕ್ಷಗಳು ಹಾಗು ವಿವಿಧ ಸಂಘಟನೆಗಳು ಜಂಟಿಯಾಗಿ ಹಮ್ಮಿಕೊಂಡಿವೆ.
ನಾರಾಯಣ ಗುರುಗಳು ಜಾತಿ ತಾರತಮ್ಯ, ಅಸಮಾನತೆಯ ವಿರುದ್ದದ ಚಳವಳಿಯನ್ನು ನಡೆಸಿ ಯಶಸ್ವಿಯಾದ ಆಧುನಿಕ ಕಾಲದ ಮಹಾನ್ ಸಂತ. ಮಹಿಳಾ ಸಮಾನತೆಗೆ ಅವರ ಕೊಡುಗೆ ಅನನ್ಯ. ಜಾತಿ ಹೆಸರಿನ ಅವಮಾನಗಳು ಸಹಜ ಎಂಬಂತೆ ಸ್ವೀಕರಿಸಲ್ಪಡುತ್ತಿದ್ದ ಕಾಲಘಟ್ಟದಲ್ಲಿ ಅದರ ವಿರುದ್ದ ಜಾಗೃತಿಯನ್ನು ಬಡಿದೆಬ್ಬಿಸಿದ ಗುರುಗಳ ಮಹಾನ್ ಕಾರ್ಯವನ್ನು ಮನುಕುಲ ಸದಾ ಸ್ಮರಿಸುತ್ತದೆ. ಅಂತಹ ಮಹಾನ್ ಸಂತನಿಗೆ ಸೈದ್ದಾಂತಿಕ ಕಾರಣಗಳಿಗಾಗಿ ಕೇಂದ್ರದ ಬಿಜೆಪಿ ಸರಕಾರ ಅಗೌರವ ತೋರಿಸಿರುವುದು ಯಾವ ಕಾರಣಕ್ಕೂ ಮಾನ್ಯವಲ್ಲ. ನಾರಾಯಣ ಗುರುಗಳಿಗೆ ಕೇಂದ್ರ ಸರಕಾರದಿಂದ ಆಗಿರುವ ಈ ಅವಮಾನ ಜಾತಿ, ವರ್ಗ ಮೀರಿ ಜನಸಾಮಾನ್ಯರಲ್ಲಿ ಆಕ್ರೋಶವನ್ನು ಮೂಡಿಸಿದೆ ಎಂದು ಎಡ ಜಾತ್ಯಾತೀತ ಪಕ್ಷಗಳ ಹಾಗೂ ಸಂಘಟನೆಗಳ ಜಂಟಿ ಸಮಿತಿ ಪರವಾಗಿ ಸುನಿಲ್ ಕುಮಾರ್ ಬಜಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸಮಾನ ಮನಸ್ಕ ಎಡ, ಜಾತ್ಯಾತೀತ ಪಕ್ಷಗಳು ಹಾಗೂ ಸಂಘಟನೆಗಳು ಕೇಂದ್ರ ಸರಕಾರದ ಈ ನಡೆಯನ್ನು ತೀವ್ರವಾಗಿ ಖಂಡಿಸುತ್ತದೆ. ಗಣರಾಜ್ಯೋತ್ಸವದ ದಿನ ಸಂಜೆ 3ಕ್ಕೆ ಕ್ಲಾಕ್ ಟವರ್ ನಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ನಾರಾಯಣ ಗುರುಗಳ ಭಾವಚಿತ್ರದ ಮೆರವಣಿಗೆಯನ್ನು ನಡೆಸಿ ಸಾರ್ವಜನಿಕ ಗೌರವ ಸಲ್ಲಿಸಲು ನಿರ್ಧರಿಸಿದೆ.
ಸಾರ್ವಜನಿಕರು ಅಂದು ಎಲ್ಲೆಡೆ ನಾರಾಯಣ ಗುರುಗಳಿಗೆ ಗೌರವ ಸಲ್ಲಿಸುವ ಮೂಲಕ ಸಮಾನತೆಯ ಸಮಾಜ ನಿರ್ಮಾಣದ ಬದ್ದತೆಯನ್ನು ಎತ್ತಿ ಹಿಡಿಯಬೇಕು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಎಡ, ಜಾತ್ಯಾತೀತ ಪಕ್ಷಗಳು, ದಲಿತ, ಮಹಿಳಾ, ವಿದ್ಯಾರ್ಥಿ, ಯುವಜನ,ರೈತ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಪ್ರಕಟಣೆ ತಿಳಿಸಿದೆ.