ಅತಿಥಿ ಉಪನ್ಯಾಸಕರ ಮೂಗಿಗೆ ತುಪ್ಪ ಸವರುವ ಕೆಲಸ ಬೇಡ: ಮಾಧವ ನಾಯಕ
ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಸರ್ಕಾರ ಎಲ್ಲ ಹಂತದಲ್ಲೂ ಕಡೆಗಣಿಸುತ್ತಿರುವದು ಖಂಡನೀಯ. ಸೇವಾ ಭದ್ರತೆಗೆ ಒತ್ತಾಯಿಸಿ ಕಳೆದ ಹಲವು ದಿನಗಳಿಂದ ಅತಿಥಿ ಉಪನ್ಯಾಸಕರು ಪ್ರತಿಭಟನೆಯಲ್ಲಿ ತೊಡಗಿದ್ದರು. ಸರ್ಕಾರ ಅವರ ಬೇಡಿಕೆ ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡದೆ ಕೇವಲ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ.
ಉನ್ನತ ಶಿಕ್ಷಣ ಇಲಾಖೆ ಅತಿಥಿ ಉಪನ್ಯಾಸಕರ ವೇತನವನ್ನು 13 ಸಾವಿರ ರೂಪಾಯಿಯಿಂದ 32 ಸಾವಿರ ರೂಪಾಯಿಗೆ ಏರಿಕೆ ಮಾಡಿ ತಾನು ಉಪನ್ಯಾಸಕರಿಗೆ ಸಂಕ್ರಾಂತಿ ಉಡುಗೊರೆ ನೀಡಿರುವುದಾಗಿ ಬಿಂಬಿಸಿಕೊಳ್ಳಲು ಹೊರಟಿದೆ. ವೇತನ ಹೆಚ್ಚಳ ಆದೇಶದಲ್ಲಿ ಉಪನ್ಯಾಸಕರಿಗೆ ಈ ಹಿಂದೆ ಇದ್ದ 8 ರಿಂದ 10 ತಾಸುಗಳ ಕಾರ್ಯಭಾರವನ್ನು 15 ತಾಸು ಹೆಚ್ಚಳ ಮಾಡಿದ ವಿಷಯ ನಗಣ್ಯವಾಗಿಸಲಾಗಿದೆ.
ವೇತನ ಎರಡು ಪಟ್ಟು ಹೆಚ್ಚಳ ಮಾಡಿದ್ದರ ಜೊತೆಯಲ್ಲಿಯೇ ಕಾರ್ಯಭಾರವನ್ನೂ ಎರಡುಪಟ್ಟು ಹೆಚ್ಚು ಮಾಡಲಾಗಿದ್ದನ್ನು ಗಮನಿಸಬೇಕಾಗಿದೆ. ಸರ್ಕಾರ ಉಪನ್ಯಾಸಕರ ಸಮಸ್ಯೆ ಪರಿಹರಿಸುವ ಬದಲು ಕೆಲಸ ಹೆಚ್ಚು ಮಾಡಿಸಿಕೊಂಡು ಅದಕ್ಕೆ ಮೊದಲಿದ್ದಂತೆ ವೇತನ ನೀಡಲು ಹೊರಟಿರುವದು ಸ್ಪಷ್ಟವಾಗಿದೆ. ಸೇವಾ ಭದ್ರತೆ ಒದಗಿಸಬೇಕು ಎಂಬ ಅವರ ಬೇಡಿಕೆಗೆ ಮನ್ನಣೆ ನೀಡಿಲ್ಲ.
ಉತ್ತರ ಕನ್ನಡವೂ ಸೇರಿದಂತೆ ರಾಜ್ಯದ ಎಲ್ಲ ಸರ್ಕಾರಿ ಪದವಿ ಕಾಲೇಜುಗಳು ಅತಿಥಿ ಉಪನ್ಯಾಸಕರ ಅವಲಂಬನೆಯಿಂದ ನಡೆಯುತ್ತಿವೆ. ಲಕ್ಷಾಂತರ ವಿದ್ಯಾರ್ಥಿಗಳು ಪಾಠ ಬೋಧನೆ ಇಲ್ಲದೆ ಅತಂತ್ರರಾಗಿ ಕುಳಿತಿದ್ದಾರೆ. ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಮತ್ತು ಉಪನ್ಯಾಸಕರ ಜೀವನದ ಜೊತೆಗೆ ಚೆಲ್ಲಾಟವಾಡದೆ ಅತಿಥಿ ಉಪನ್ಯಾಸಕರ ಬೇಡಿಕೆಯನ್ನು ನ್ಯಾಯಯುತವಾಗಿ ಈಡೇರಿಸಬೇಕು.
ಮಾಧವ ನಾಯಕ
ಅಧ್ಯಕ್ಷರು
ಜನಶಕ್ತಿ ವೇದಿಕೆ- ಕಾರವಾರ