ಕ್ಷುಲ್ಲಕ ವಿಚಾರಗಳನ್ನು ಮುಂದಿಟ್ಟುಕೊಂಡು ಸಮುದಾಯಗಳ ನಡುವೆ ಗಲಭೆಗೆ ಸಂಘಪರಿವಾರ ಸಂಚು ರೂಪಿಸುತ್ತಿದೆ: ಎಸ್‌ಡಿಪಿಐ

 ಕ್ಷುಲ್ಲಕ ವಿಚಾರಗಳನ್ನು ಮುಂದಿಟ್ಟುಕೊಂಡು ಸಮುದಾಯಗಳ ನಡುವೆ ಗಲಭೆಗೆ ಸಂಘಪರಿವಾರ ಸಂಚು ರೂಪಿಸುತ್ತಿದೆ: ಎಸ್‌ಡಿಪಿಐ
Share this post

ಬಂಟ್ವಾಳ. ಜ 13, 2022: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘಪರಿವಾರವು ಕಳೆದ ಹಲವಾರು ತಿಂಗಳುಗಳಿಂದ ಕ್ಷುಲ್ಲಕ ವಿಚಾರಗಳನ್ನು ಮುಂದಿಟ್ಟುಕೊಂಡು ಗಲಭೆಗೆ ಸಂಚು ರೂಪಿಸುತ್ತಿದೆ. ಇದರ ಮುಂದುವರಿದ ಭಾಗವಾಗಿ ಸಾಲೆತ್ತೂರು ಎಂಬಲ್ಲಿ ಮದುವೆಯ ಮನೆಯಲ್ಲಿ ನಡೆದ ಘಟನೆಯೊಂದನ್ನು ಮುಂದಿಟ್ಟುಕೊಂಡು ಕೊರಗ ಸಮುದಾಯ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಹಾಗೂ ಹಿಂದೂ ಸಮುದಾಯದ ಭಾವನೆಗಳನ್ನು ಎಳೆದು ತಂದು ಸಮಾಜದಲ್ಲಿ ದ್ವೇಷವನ್ನು ಸೃಷ್ಟಿಸಿ ಜಿಲ್ಲೆಯಲ್ಲಿ ಅಶಾಂತಿ ಉಂಟು ಮಾಡುತ್ತಿದ್ದಾರೆ ಎಂದು ಎಸ್‌ಡಿಪಿಐ ಆರೋಪಿಸಿದೆ.

ಈ ಬಗ್ಗೆ ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ನರ್ ಸಾದತ್ ಬಜತ್ತೂರು ನಿರಂತರವಾಗಿ ದಲಿತ ಸಮುದಾಯವನ್ನು ಶೋಷಣೆಗೆ ಗುರಿಯಾಗಿಸುತ್ತಾ ಬಂದಿರುವ ಸಂಘಪರಿವಾರವು ಈ ಒಂದು ಘಟನೆಯ ವಿಚಾರವಾಗಿ ಕೊರಗ ಸಮುದಾಯದ ಪ್ರೀತಿ ಮೂಡಿಸಲು ಅನಗತ್ಯ ವಿಚಾರಗಳನ್ನು ಎತ್ತಿಕೊಂಡು ಜಿಲ್ಲೆಯಲ್ಲಿ ಗಲಭೆ ನಡೆಸಿ ತನ್ನ ರಾಜಕೀಯ ಬೇಳೆ ಬೇಯಿಸಲು ನಡೆಸುವ ಷಡ್ಯಂತ್ರ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಕೊರಗ ಸಮುದಾಯವನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟಿಕೊಂಡು ಜಿಲ್ಲೆಯ ಶಾಂತಿ ಸೌಹಾರ್ದತೆಗೆ ಧಕ್ಕೆ ತರುವ ರೀತಿಯ ಪ್ರಕ್ಷುಬ್ಧ ವಾತಾವರಣ ನಿರ್ಮಿಸುತ್ತಿದೆ ಎಂದರು.

ಮದುಮಗ ಹಾಕಿದ ಡ್ರೆಸ್‌ಗೂ ಕೊರಗ ಸಮುದಾಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಈಗಾಗಲೇ ಹಲವು ದಲಿತ ಸಮುದಾಯದ ಮುಖಂಡರು ಸ್ಪಷ್ಟವಾಗಿ ಹೇಳಿದ್ದಾರೆ. ಆದರೂ ಸಂಘಪರಿವಾರವು ಮದುಮಗ ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಕ್ತಿ ಎಂಬ ಏಕ ಮಾತ್ರ ಕಾರಣಕ್ಕೆ ಮುಸ್ಲಿಂ ಸಮುದಾಯವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಅಟ್ಟಹಾಸ ಮೆರೆಯುತ್ತಿದೆ. ಇದಕ್ಕೆಲ್ಲ ಇಲ್ಲಿನ ಪೋಲಿಸ್ ಇಲಾಖೆ ಬೆಂಗಾವಲಾಗಿ ನಿಂತುಕೊಂಡು ಅಮಾಯಕರ ಮೇಲೆ ಪ್ರಕರಣ ದಾಖಲಿಸಿಕೊಂಡು ಬಂಧಿಸುತ್ತಿರುವುದು ಖಂಡನೀಯ. ಅಲ್ಲದೆ ಮದುಮಗಳ ಮನೆಗೆ ಭಜರಂಗ ದಳ ಕಾರ್ಯಕರ್ತರು ನುಗ್ಗಲು ಪ್ರಯತ್ನಿಸಿರುವುದರ ವಿರುದ್ಧ ಪೋಲಿಸ್ ಇಲಾಖೆ ಸುಮೋಟೊ ಪ್ರಕರಣ ದಾಖಲಿಸದಿರುವುದು ಜನಸಾಮಾನ್ಯರ ನಡುವೆ ಗೊಂದಲ ಸೃಷ್ಟಿಸಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಹುಲ್ ಹಮೀದ್, ಕ್ಷೇತ್ರಾಧ್ಯಕ್ಷರು, ಎಸ್.ಡಿ.ಪಿ.ಐ ಬಂಟ್ವಾಳ, ಖಲಂದರ್ ಪರ್ತಿಪಾಡಿ ಕ್ಷೇತ್ರ ಉಪಾಧ್ಯಕ್ಷರು, ಎಸ್.ಡಿ.ಪಿ.ಐ ಬಂಟ್ವಾಳ, ಬಶೀರ್ ಕೊಳ್ನಾಡು ಬ್ಲಾಕ್ ಅಧ್ಯಕ್ಷರು, ಎಸ್.ಡಿ.ಪಿ.ಐ ಕೊಳ್ನಾಡು ಹಾಗೂ ಅನ್ವರ್ ಪೆರುವಾಯಿ ಕ್ಷೇತ್ರ ಜೊತೆ ಕಾರ್ಯದರ್ಶಿ ಎಸ್ ಡಿ ಪಿ ಐ ಪುತ್ತೂರು ಉಪಸ್ಥಿತರಿದ್ದರು.

Subscribe to our newsletter!

Other related posts

Leave a Reply

Your email address will not be published.

error: Content is protected !!