ವೀಕೆಂಡ್ ಕರ್ಫ್ಯೂ ಪ್ರಸ್ತಾಪ ದಲಿತ ವಿರೋಧಿ: ಸುನಿಲ್ ಕುಮಾರ್ ಬಜಾಲ್
ಮಂಗಳೂರು, ಜ 10, 2022: ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರಗಳು ಮತ್ತೊಮ್ಮೆ ಅನಗತ್ಯವಾಗಿ ರಾತ್ರಿ ಕರ್ಫ್ಯೂ, ವಾರಾಂತ್ಯ ಕರ್ಫ್ಯೂ ಹೇರಿಕೆಯ ಮೂಲಕ ಮುಂದುವರಿದ ಭಾಗವಾಗಿ ಲಾಕ್ ಡೌನ್ ಹೇರುವ ತಯಾರಿಯಲ್ಲಿದೆ. ಇದು ದಲಿತ ಮತ್ತು ಆದಿವಾಸಿ ವಿರೋಧಿ ಧೊರಣೆ ಎಂದು ಸಿ.ಐ.ಟಿ.ಯು. ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಹೇಳಿದರು.
ಅವರು ನಗರದಲ್ಲಿಂದು ಆದಿವಾಸಿ ಹಕ್ಕುಗಳ ಸಮಿತಿ ಹಾಗೂ ದಲಿತ ಹಕ್ಕುಗಳ ಸಮಿತಿಗಳ ಜಂಟಿ ನೇತ್ರತ್ವದಲ್ಲಿ ವೀಕೆಂಡ್ ಕರ್ಫ್ಯೂ ವಿರೋಧಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
“ಕಳೆದ ಎರಡೂ ವರ್ಷಗಳಲ್ಲಿ ವಿಧಿಸಿದ ಲಾಕ್ ಡೌನ್ ಕರ್ಫ್ಯೂಗಳಿಂದ ದೇಶದ ಕಾರ್ಪೋರೇಟ್ ರಂಗದ ಲಾಭಾಂಶ 35%ಕ್ಕೂ ಅಧಿಕವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಜನಸಮುದಾಯದ ಬದುಕು ಚಿಂತಾಜನಕವಾಗಿದ್ದು ಚೇತರಿಸಿಕೊಳ್ಳಲಾಗದೆ ಚಡಪಡಿಸುತ್ತಿದ್ದಾರೆ. ಮತ್ತೆ ಮೂರನೇ ಬಾರಿಗೆ ಲಾಕ್ ಡೌನ್ ಹೇರುವ ಮೂಲಕ ದುಡಿಯುವ ಶೋಷಿತ ವರ್ಗದ ಬದುಕನ್ನು ನುಚ್ವುನೂರು ಮಾಡಲಾಗುತ್ತಿದೆ,” ಎಂದು ಹೇಳಿದರು.
ಪ್ರತಿಭಟನೆಯನ್ನುದ್ದೇಶಿಸಿ ಆದಿವಾಸಿ ಹಕ್ಕುಗಳ ಸಮಿತಿಯ ರಾಜ್ಯ ಸಹಸಂಚಾಲಕರಾದ ಡಾ.ಕ್ರಷ್ಣಪ್ಪ ಕೊಂಚಾಡಿ, ಪ್ರಗತಿಪರ ಚಿಂತಕರೂ, ನಿವ್ರತ್ತ ಪ್ರಾಧ್ಯಾಪಕರಾದ ಪಟ್ಟಾಬಿರಾಮ ಸೊಮಯಾಜಿ, ದಲಿತ ಹಕ್ಕುಗಳ ಸಮಿತಿಯ ಮುಖಂಡರಾದ ಯೋಗೀಶ್ ಜಪ್ಪಿನಮೊಗರುರವರು ಮಾತನಾಡಿದರು.
ಪ್ರತಿಭಟನೆಯಲ್ಲಿ ಡಿ.ವೈ.ಎಫ್.ಐ. ಜಿಲ್ಲಾ ನಾಯಕರಾದ ಬಿ.ಕೆ.ಇಮ್ತಿಯಾಜ್, ಸಂತೋಷ್ ಬಜಾಲ್,ನಿತಿನ್ ಬಂಗೇರ, ಜೆ.ಎಂ.ಎಸ್ ಮುಖಂಡರಾದ ಭಾರತಿ ಬೋಳಾರ, ಸಾಮಾಜಿಕ ಚಿಂತಕರಾದ ಅಸುಂತ ಡಿಸೋಜರವರು ಹಾಜರಿದ್ದರು.
ಪ್ರತಿಭಟನೆ ನೇತೃತ್ವವನ್ನು ದಲಿತ ಹಕ್ಕುಗಳ ಸಮಿತಿಯ ಮುಖಂಡರಾದ ತಿಮ್ಮಯ್ಯ ಕೊಂಚಾಡಿ, ಕೃಷ್ಣ ತಣ್ಷೀರುಬಾವಿ, ರಘುವೀರ್, ಸುಧಾಕರ್, ಚಂದ್ರಶೇಖರ, ಸುರೇಶ್ ಬಿಜೈ, ಪ್ರವೀಣ್ ಕೊಂಚಾಡಿ, ಮನೋಜ್ ಉರ್ವಾಸ್ಟೋರ್, ಆದಿವಾಸಿ ಹಕ್ಕುಗಳ ಸಮಿತಿ ನಾಯಕರಾದ ಶಶಿಕಲಾ ನಂತೂರು,ಕಿಶನ್, ವಸಂತಿ, ಅಶ್ವಿನಿ, ಮೊದಲಾದವರು ವಹಿಸಿದ್ದರು.