ಉಡುಪಿ ಜಿಲ್ಲೆಯಲ್ಲಿ ನೈಟ್‌ಕರ್ಫ್ಯೂ ಕಟ್ಟುನಿಟ್ಟಾಗಿ ಆನುಷ್ಠಾನ: ಜಿಲ್ಲಾಧಿಕಾರಿ

 ಉಡುಪಿ ಜಿಲ್ಲೆಯಲ್ಲಿ ನೈಟ್‌ಕರ್ಫ್ಯೂ  ಕಟ್ಟುನಿಟ್ಟಾಗಿ ಆನುಷ್ಠಾನ: ಜಿಲ್ಲಾಧಿಕಾರಿ
Share this post

ಉಡುಪಿ, ಡಿ 27, 2021: ಓಮಿಕ್ರಾನ್ ನಿಯಂತ್ರಣ ಕುರಿತಂತೆ ರಾಜ್ಯ ಸರ್ಕಾರ  ಜಾರಿಗೊಳಿಸಿರುವ ನೈಟ್‌ಕರ್ಫ್ಯೂ ಮತ್ತು ಹೊಸ ವರ್ಷಾಚರಣೆ ಕುರಿತ ಮಾರ್ಗಸೂಚಿಗಳನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಆನುಷ್ಠಾನಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.  ಅವರು ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಜಿಲ್ಲೆಯಾದ್ಯಂತ ಡಿಸೆಂಬರ್ 28 ರಿಂದ ಜನವರಿ 7 ರ ವರಗೆ, ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್‌ಕರ್ಫ್ಯೂ ಜಾರಿಗೊಳಿಸಲಾಗುತ್ತಿದ್ದು, ಈ ಅವಧಿಯಲ್ಲಿ ಅಗತ್ಯ ಚಟುವಟಿಕೆ ಹೊರತುಪಡಿಸಿ ಸಾರ್ವಜನಿಕರ ಓಡಾಟವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ವೈದ್ಯಕೀಯ ಮತ್ತು ತುರ್ತು ಸೇವೆಗಳು ಯಥಾ ಪ್ರಕಾರ ಮುಂದುವರೆಯಲಿದ್ದು, ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವ ಕೈಗಾರಿಕೆ/ ಕಂಪೆನಿಗಳಿಗೆ ಅನುಮತಿ ನೀಡಿದ್ದು, ಅಲ್ಲಿನ ನೌಕರರು ಸೂಕ್ತ ಗುರುತಿನ ಚೀಟಿ ಸಲ್ಲಿಸುವ ಮೂಲಕ ಸಂಚರಿಸಬಹುದು. ಬಸ್, ರೈಲು ಮತ್ತು ವಿಮಾನ ಪ್ರಯಾಣ ಅನುಮತಿಸಲಾಗಿದ್ದು, ಪ್ರಯಾಣಿಕರು ಸೂಕ್ತ ಪ್ರಯಾಣದ ದಾಖಲೆಗಳು ಸಲ್ಲಿಸುವುದು ಕಡ್ಡಾಯವಾಗಿದೆ. ಎಲ್ಲಾ ತರಹದ ಸರಕು ಸಾಗಾಟ ವಾಹನಗಳ ಓಡಾಟಕ್ಕೆ ಅನುಮತಿ ನೀಡಲಾಗಿದ್ದು, ಇ-ಕಾಮರ್ಸ್ ಮತ್ತು ಹೋಮ್ ಡೆಲಿವರಿ ಕೆಲಸ ಮುಂದುವರೆಸಲು ಅನುಮತಿ ನೀಡಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದರು.

ಹೊಸ ವರ್ಷಾಚರಣೆ ಅಂಗವಾಗಿ ಡಿಸೆಂಬರ್ 30 ರಿಂದ ಜನವರಿ 2 ರ ವರೆಗೆ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಕ್ಲಬ್/ಪಬ್/ರೆಸ್ಟೋರೆಂಟ್/ಹೋಟೆಲ್‌ಗಳು ಅಥವಾ ಖಾಸಗಿ ಸ್ಥಳಗಳಲ್ಲಿ ಡಿಜೆ/ಆರ್ಕೆಸ್ಟ್ರಾ/ಸಮೂಹ ನೃತ್ಯ ಮುಂತಾದ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ನಡೆಸಲು ಅವಕಾಶವಿರುವುದಿಲ್ಲ. ಹೊಸವರ್ಷ ಆಚರಿಸಲು ಸಾರ್ವಜನಿಕ ಸ್ಥಳಗಳು ಸೇರಿದಂತೆ ರಸ್ತೆಗಳು, ಉದ್ಯಾನವನಗಳು, ಆಟದ ಮೈದಾನಗಳು ಇತ್ಯಾದಿಗಳನ್ನು ಬಳಸುವಂತಿಲ್ಲ. ರೆಸ್ಟೋರೆಂಟ್‌ಗಳು/ ಹೋಟೆಲ್‌ಗಳು/ ಕ್ಲಬ್‌ಗಳು / ಪಬ್‌ಗಳು  ಕೋವಿಡ್-19 ಸಮುಚಿತ ವರ್ತನೆಯೊಂದಿಗೆ, ಸಿಬ್ಬಂದಿಗಳು ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ಮತ್ತು 2 ಡೋಸ್ ಕೋವಿಡ್ ಲಸಿಕೆಯನ್ನು ಕಡ್ಡಾಯವಾಗಿ ಪಡೆಯಬೇಕು. ಇಲ್ಲಿಗೆ ಆಗಮಿಸುವ ಸಾರ್ವಜನಿಕರು ಕಡ್ಡಾಯವಾಗಿ 2 ಡೋಸ್ ಕೋವಿಡ್ ಲಸಿಕೆ ಪಡೆದಿರುವ ಕುರಿತು ಪತ್ರವನ್ನು ಪ್ರದರ್ಶಿಸಿದ ನಂತರವೇ ಪ್ರವೇಶ ನೀಡಬೇಕು ಹಾಗೂ ಕೋವಿಡ್-19 ಸಮುಚಿತ ವರ್ತನೆಯೊಂದಿಗೆ ಶೇ.50 ರಷ್ಟು ಆಸನ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದರು.

ಡಿಸೆಂಬರ್ 28 ರಿಂದ ಜಿಲ್ಲೆಯಲ್ಲಿ ಎಲ್ಲಾ ಸಭೆ, ಸಮಾರಂಭ, ಸಮ್ಮೇಳನ, ಮದುವೆ ಇತ್ಯಾದಿಗಳಲ್ಲಿ ಭಾಗವಹಿಸುವವರ ಸಂಖ್ಯೆಯನ್ನು 300 ಕ್ಕೆ ಸೀಮಿತಗೊಳಿಸಿದ್ದು, ಈ ಕಾರ್ಯಕ್ರಮಗಳಲ್ಲಿ ಕೋವಿಡ್-19 ಸಮುಚಿತ ವರ್ತನೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಸಂಘಟಕರ/ವ್ಯವಸ್ಥಾಪಕರ ಜವಾಬ್ದಾರಿಯಾಗಿದೆ ಎಂದರು.

ಜಿಲ್ಲೆಯಲ್ಲಿ ಇದುವರೆಗೆ 96.03% ಜನರಿಗೆ ಪ್ರಥಮ ಡೋಸ್ ಹಾಗೂ 82.97% ಜನರಿಗೆ ಎರಡೂ ಡೋಸ್ ಕೋವಿಡ್-19 ಲಸಿಕೆ ನೀಡಿದ್ದು, 15-18 ವರ್ಷ ವಯಸ್ಸಿನವರಿಗೆ ಹಾಗೂ ಬೂಸ್ಟರ್ ಡೋಸ್  ನೀಡುವ ಕುರಿತಂತೆ ಕೇಂದ್ರ ಮತ್ತು ರಾಜ್ಯದ ಮಾರ್ಗಸೂಚಿ ಬಂದ ತಕ್ಷಣ ಕ್ರಮ ವಹಿಸಲಾಗುವುದು ಎಂದ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಜಿಲ್ಲೆಯಲ್ಲಿ ಪ್ರಸ್ತುತ 55 ಸಕ್ರಿಯ ಪ್ರಕರಣಗಳು ಮಾತ್ರ ಇದ್ದು, ಪಾಸಿಟಿವಿಟಿ ಪ್ರಮಾಣ 0.2% ಇದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಅಪರ ಜಿಲ್ಲಾಧಿಕಾರಿ  ಬಾಲಕೃಷ್ಣಪ್ಪ, ಎಎಸ್ಪಿ ಕುಮಾರ ಚಂದ್ರ ಉಪಸ್ಥಿತರಿದ್ದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!