ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಪ್ರಾಂಶುಪಾಲರಿಗೆ ತರಬೇತಿ
ಮಂಗಳೂರು ಡಿ.15, 2021: ಜನವರಿ 1, 2022 ಕ್ಕೆ 18 ವರ್ಷ ಪೂರ್ಣಗೊಳ್ಳುವವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಅನುಕೂಲವಾಗುವಂತೆ ಡಿ.23ರಂದು ಜಿಲ್ಲೆಯ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರಿಗೆ ಒಂದು ದಿನದ ತರಬೇತಿ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಕುರಿತು ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಯುತ್ತಿದೆ. ನವಮತದಾರರ ನೋಂದಣಿಗೆ ಜಿಲ್ಲಾಡಳಿತದಿಂದ ವಿಶೇಷ ಅಭಿಯಾನವನ್ನು ಕೈಗೊಳ್ಳಲಾಗುತ್ತಿದೆ. ಈ ದಿಸೆಯಲ್ಲಿ ಜಿಲ್ಲೆಯ ಶೈಕ್ಷಣಿಕ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 18 ವರ್ಷ ಪೂರ್ಣಗೊಂಡು, ಮತದಾರ ಪಟ್ಟಿಯಲ್ಲಿ ಹೆಸರು ನೋಂದಾಯಿಸದೇ ಇರುವವರ ಪಟ್ಟಿಯನ್ನು ಎಲ್ಲಾ ಸಂಸ್ಥೆಗಳ ಮುಖ್ಯಸ್ಥರು ಸಿದ್ದ ಪಡಿಸಿಟ್ಟುಕೊಳ್ಳುವಂತೆ ಅವರು ನಿರ್ದೇಶನ ನೀಡಿದರು.
ಈ ಪ್ರಕ್ರಿಯೆಯಲ್ಲಿ ಎಲ್ಲಾ ಸಂಸ್ಥೆಗಳ ಪ್ರಾಂಶುಪಾಲರು ಮೇಲುಸ್ತುವಾರಿ ವಹಿಸಬೇಕು. ತಮಗೆ ಸಂಬಂಧಿಸಿದ ವಿದ್ಯಾಸಂಸ್ಥೆಗಳಲ್ಲಿ 2022ರ ಜನವರಿ 1ಕ್ಕೆ 18 ವರ್ಷ ಪೂರ್ಣಗೊಳ್ಳುವ ಎಲ್ಲಾ ವಿದ್ಯಾರ್ಥಿಗಳು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ತಪ್ಪದೇ ಆನ್ ಲೈನ್ ಮೂಲಕವೇ ನೋಂದಾಯಿಸುವಂತೆ ಅವರು ಕ್ರಮವಹಿಸಬೇಕು. ಅದಕ್ಕಾಗಿ ಡಿ. 23 ರಂದು ಜಿಲ್ಲೆಯ ಎಲ್ಲಾ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರಿಗೆ ಒಂದು ದಿನದ ತರಬೇತಿಯನ್ನು ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಜಿಲ್ಲೆಯ ಅನುದಾನರಹಿತ ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಯಲ್ಲಿ ಹೆಸರನ್ನು ದಾಖಲಿಸಲು ಮಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ಕಿಶೋರ್, ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿಗಳ ನೋಂದಣಿಯ ಮೇಲುಸ್ತುವಾರಿಗಾಗಿ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯ ವಿಶೇಷಾಧಿಕಾರಿ ದೇವಿಪ್ರಸಾದ್, ಎಲ್ಲಾ ಇಂಜಿನಿಯರಿಂಗ್ ಕಾಲೇಜುಗಳು ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಈ ಪ್ರಕ್ರಿಯೆಯನ್ನು ಮೇಲುಸ್ತುವಾರಿ ಮಾಡಲು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಕಚೇರಿಯ ವಿಶೇಷಾಧಿಕಾರಿ ಜಯಕರ ಭಂಡಾರಿ ಹಾಗೂ ಜಿಲ್ಲೆಯ ಎಲ್ಲಾ ಪಾಲಿಟೆಕ್ನಿಕ್ ಹಾಗೂ ಐ.ಟಿ.ಐ ಸಂಸ್ಥೆಗಳಲ್ಲಿ ಈ ಪ್ರಕ್ರಿಯೆಯನ್ನು ಮೇಲುಸ್ತುವಾರಿ ಮಾಡಲು ಕರ್ನಾಟಕ ಪಾಲಿಟೆಕ್ನಿಕ್ನ ಪ್ರಾಂಶುಪಾಲರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಡಿ.23ರಂದು ಹಮ್ಮಿಕೊಳ್ಳಲಾಗುತ್ತಿರುವ ತರಬೇತಿಯಲ್ಲಿ ಎಲ್ಲಾ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರು ಕಡ್ಡಾಯವಾಗಿ ಭಾಗವಹಿಸಬೇಕು. ಈ ಬಗ್ಗೆ ನೇಮಕ ಮಾಡಲಾದ ನೋಡಲ್ ಅಧಿಕಾರಿಗಳು ಸೂಕ್ತ ಪೂರ್ವತಯಾರಿ ನಡೆಸುವಂತೆ ತಿಳಿಸಿದ ಅವರು ಎಲ್ಲಾ ವಿದ್ಯಾಸಂಸ್ಥೆಯವರು ತಮ್ಮಲ್ಲಿ 18 ವರ್ಷ ಪೂರ್ಣಗೊಳಿಸಿ ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸದ ವಿದ್ಯಾರ್ಥಿಗಳ ವಿವರವನ್ನು ಸಂಗ್ರಹಿಸಿ ನೋಡಲ್ ಅಧಿಕಾರಿಯವರಿಗೆ ತಪ್ಪದೇ ನೀಡಬೇಕು. ಈ ಅಭಿಯಾನದ ಮೂಲಕ ಜಿಲ್ಲೆಯಲ್ಲಿ 25,000 ಕ್ಕೂ ಹೆಚ್ಚಿನ ನವಮತದಾರರನ್ನು ನೋಂದಾಯಿಸುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಮಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್, ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರು ಸಭೆಯಲ್ಲಿದ್ದರು.