ವಿಧಾನ ಪರಿಷತ್ ಚುನಾವಣೆ: ಉತ್ತರ ಕನ್ನಡದಲ್ಲಿ ಸಕಲ ಸಿದ್ಧತೆ


ಕಾರವಾರ ನ.11, 2021: ಕರ್ನಾಟಕ ವಿಧಾನ ಪರಿಷತ್ತಿಗೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆಯುವ ದ್ವೈವಾರ್ಷಿಕ ಚುನಾವಣೆ-2021 ಘೋಷಣೆಯಾಗಿದ್ದು, ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ, ಕರ್ನಾಟಕ ವಿಧಾನ ಪರಿಷತ್ತಿಗೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆಯುವ ದ್ವೈವಾರ್ಷಿಕ ಚುನಾವಣೆ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ನ. 16 ರಂದು ಅಧಿಸೂಚನೆ ಹೊರಡಿಸಲಾಗುವುದು, ನಾಮಪತ್ರಗಳನ್ನು ಸಲ್ಲಿಸಲು 23 ಕೊನೆಯ ದಿನವಾದರೆ, ನ. 24 ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಗಿರುತ್ತದೆ . ಡಿಸೆಂಬರ್ 10 ರಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, 14 ರಂದು ಮತಗಳ ಎಣಿಕೆ ಕಾರ್ಯ ನಡೆಯಲಿದೆ. 16 ರಂದು ಸಂಪೂರ್ಣವಾಗಿ ಚುನಾವಣೆ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಲಾಗುವುದು ಎಂದರು.
ಚುನಾವಣಾ ನೀತಿ ಸಂಹಿತೆಯು ಡಿಸೆಂಬರ್ 16 ರವರೆಗೂ ಜಾರಿಯಲ್ಲಿರುತ್ತದೆ. ಕಳೆದ ಲೋಕಸಭೆ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ಇರುವ ನಿಯಮಗಳು ಹಾಗೂ ವ್ಯವಸ್ಥೆ ಈ ಚುನಾವಣೆಯಲ್ಲೂ ಚಾಲ್ತಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 227 ಗ್ರಾಮ ಪಂಚಾಯತಿ ಮತ್ತು 11 ಸ್ಥಳೀಯ ಸಂಸ್ಥೆಗಳಲ್ಲಿ ಚುನಾವಣಾ ನಡೆಯಲಿದ್ದು, ಗ್ರಾಮ ಪಂಚಾಯತಿಯ 2662 ಮತದಾರರು ಮತ್ತು ಸ್ಥಳೀಯ ಸಂಸ್ಥೆಯ 228 ಮತದಾರರು ಸೇರಿ 2890 ಕರಡು ಮತದಾರರು ಇದ್ದು, ಒಟ್ಟು 238 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ ಎಂದರು.
ಚುನಾವಣೆಯನ್ನು ಶಿಸ್ತುಬದ್ದ ಹಾಗೂ ಸೂಸುತ್ರವಾಗಿ ನಡೆಸಲು ತಾಲೂಕಾ ಮಟ್ಟದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ತಂಡ ಮತ್ತು ಸ್ಟಾಟಿಕ್ ಸರ್ವೇಲೆನ್ಸ್ ಟೀಮ್ ರಚಿಸಲಾಗಿದೆ. ಎಂ ಸಿ ಎಂ ಸಿ ತಂಡ ಕೂಡಾ ರಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಎಚ್ ಕೆ ಕೃಷ್ಣಮೂರ್ತಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶರದ್ ನಾಯಕ ಉಪಸ್ಥಿತರಿದ್ದರು.