ದೀಪಾವಳಿ ಆಚರಣೆಯ ಮಹತ್ವ ವಿವರಿಸಿದ ಕಟೀಲು ಆಸ್ರಣ್ಣರು
ಶುಭಂ ಭವತಿ ಕಲ್ಯಾಣಂ
ಆರೋಗ್ಯಂ ಧನ ಸಂಪದಾಂ
ಶತ್ರು ಬುಧ್ಧಿ ವಿನಾಶಾಯ
ದೀಪ ಜ್ಯೋತಿ ನಮೋಸ್ತುತೆ||
ಶತ್ರು ಬುಧ್ಧಿವಿನಾಶವಾಗಿ ಆರೋಗ್ಯ ಧನ ಸಂಪತ್ತು ವೃದ್ಧಿಯಾಗಿ ಅವರವರ ಮನೋಭೀಷ್ಟ ವೃದ್ಧಿಯಾಗಿ ಎಲ್ಲರಿಗೂ ಕಲ್ಯಾಣ ವಾಗಿ ನೆಮ್ಮದಿ ಶಾಂತಿ ಲಭಿಸುವುದು.
ದೀಪಕ್ಕೆ ಎಣ್ಣೆ, ಬತ್ತಿ, ದೀಪ ಭಾಜನ ಹಾಗೆಯೆ ದೀಪ , ದೀಪ ಬೆಳಗಿಸಿದವರು ಹೀಗೆ ಐದರ ಸಂಯೋಜನೆ ಏನನ್ನು ಸಾರುವುದೆಂದರೆ ನಾವೆಲ್ಲಾ ಪರಸ್ಪರ ಪ್ರೀತಿ ವಿಶ್ವಾಸ ರಿಂದ ಅನ್ಯೋನ್ಯತೆಯಿಂದ ಬಾಳಿ ಬದುಕಬೇಕು. ಈ ಐಕ್ಯತೆ ಜೀವನದಲ್ಲಿ ಶ್ರೇಯಸ್ಸು ನೆಮ್ಮದಿಯನ್ನು ನೀಡುತ್ತದೆ. ಅದಕ್ಕೆ ಎರಡು ಅಥವಾ ಐದು ಅದಕ್ಕಿಂತ ಮೇಲ್ಪಟ್ಟು ಒಂದು ಲಕ್ಷದ ವರೆಗೆ ದೀಪ ಹಚ್ಚಿದ್ದಲ್ಲಿ ಕಷ್ಟ ಪರಿಹಾರ ವಾಗಿ ನೆಮ್ಮದಿ ಸಿದ್ಧಿಸುವುದು. ಭವಿಷ್ಯದಲ್ಲಿ ಶುಭವಾಗುವುದು.
ನಮ್ಮ ಆರಾಧ್ಯ ಮೂರ್ತಿ ಕಟೀಲಮ್ಮ. ಈ ದೀಪಾವಳಿ ಶುಭ ಸಂದರ್ಭದಿ ಆಯುರಾರೋಗ್ಯ ಸಕಲ ಕಾರ್ಯ ಸಿ ದ್ಧಿಯಾಗಲಿ. ವ್ಯಾಪಾರ ವಹಿವಾಟು ಉತ್ತರೋತ್ತರ ಅಭಿವೃದ್ಧಿ ಹೊಂದಲಿ. ಉದ್ಯೋಗಾದಿ ಶ್ರೇಯಸ್ಸು ಲಭಿಸಲಿ. ಸನ್ಮಂಗಲವನ್ನು ಭಕ್ತಜನರಿಗೆ ಸಕಲ ಕಾರ್ಯದಿ ನೆಮ್ಮದಿ ಕರುಣಿಸಲೆಂದು ಪ್ರಾರ್ಥಿಸುವುದರೊಂದಿಗೆ ದೀಪಾವಳಿಯ ಶುಭಾಶಯಗಳು.
ಅನಂತ ಪದ್ಮನಾಭ ಆಸ್ರಣ್ಣ
ಅನುವಂಶೀಯ ಅರ್ಚಕರು
ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನ ಕಟೀಲು, ದ.ಕ ಜಿಲ್ಲೆ
ಅಗ್ನಿ ಎಂದರೆ ತೇಜಸ್ತತ್ತ್ವ. ತೇಜಸ್ಸು ಎನ್ನುವುದು ಪಂಚಭೂತಗಳಲ್ಲಿ ಒಂದು. ಕಣ್ಣು ಕಾಣುವುದಕ್ಕೂ ಅದರಲ್ಲಿರುವ ತೇಜಸ್ತತ್ತ್ವವೇ ಕಾರಣ. ಕಣ್ಣಿನಿಂಂದ ಸೆರೆಹಿಡಿಯಲ್ಪಟ್ಟ ವಸ್ತು ಮೆದುಳಿನಲ್ಲಿ ಗೋಚರವಾಗುವುದಕ್ಕೂ ತೇಜಸ್ತತ್ತ್ವವೇ ಕಾರಣ. ಗೋಚರವಾದದ್ದು ಹಾಳಾಗದಂತೆ ನೆನಪೆಂಬ ಪೆಟ್ಟಿಗೆಯಲ್ಲಿ ಭದ್ರವಾಗುವುದಕ್ಕೂ ತೇಜಸ್ತತ್ತ್ವವೇ ಕಾರಣ. ನೆನಪಿನ ನೈರಂತರ್ಯದಿಂದ ಪ್ರಾಪ್ತವಾದ ಅನುಭವದಿಂದ ನಮ್ಮ ಒಳಗಣ್ಣು ಎಂಬ ಪೆಟ್ಟಿಗೆ ತೆರದು ಅದು ತುಂಬಲೂ ತೇಜಸ್ತತ್ತ್ವವೇ ಕಾರಣ.
ಅದಕ್ಕೆ ವೇದ ಹೇಳುತ್ತದೆ, ಅಗ್ನೇ ನಯ ಸುಪಥಾ ರಾಯೇ ಅಸ್ಮಾನ್ ವಿಶ್ವಾನಿ ದೇವ ವಯುನಾನಿ ವಿದ್ವಾನ್ . ಯುಯೋಧ್ಯ ಅಸ್ಮಜ್ಜುಹುರಾಣಮೇನೋ ಭೂಯಿಷ್ಟಾಂತೇ ನಮ ಉಕ್ತಿಂ ವಿಧೇಮ. ( ಓ ಅಗ್ನಿಯೇ ನೀನು ನಮ್ಮನ್ನು ಸನ್ಮಾರ್ಗದತ್ತ ಕೊಂಡುಹೋಗು. ಹೋಗುವ ದಾರಿಯಲ್ಲಿ ನಮ್ಮನ್ನು ದ್ವೇಷಿಸುವ ಪಾಪಗಳನ್ನು ಕುರಿತಾಗಿ ಹೋರಾಡು. ನಿನಗೆ ಕೊನೆಗೊಮ್ಮೆ ನಮಸ್ಕರಿಸುತ್ತೇವೆ).
ಅದೇ ಅಗ್ನಿಯ ಆರಾಧನಾ ಪರ್ವವಾದ ದೀಪಾವಳಿಯಲ್ಲಿ ದೀಪದಲ್ಲಿ ಬೆಳಗುವ ಅಗ್ನಿಯು ನಮಗೆ ಸುಂದರವಾದದ್ದನ್ನೇ ಕಾಣಲು ಒಳ್ಳೆಯ ದಾರಿ ತೋರಿಸಲಿ, ನಡೆಯಲು ಕಲಿಸಲಿ, ಅದರಿಂದ ಒಳಗಣ್ಣು ತೆರೆಸಲಿ ಅದುವೇ ಎಲ್ಲರಿಗೂ ಮಂಗಲವನ್ನುಂಟುಮಾಡಲಿ ಎಂದು ಹಾರೈಸುತ್ತೇನೆ.
ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.
ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣ
ಅನುವಂಶೀಯ ಅರ್ಚಕರು
ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನ ಕಟೀಲು, ದ.ಕ ಜಿಲ್ಲೆ