ವೈದ್ಯಕೀಯ ಆಮ್ಲಜನಕದ ಎರಡು ಘಟಕಗಳ ಲೋಕಾರ್ಪಣೆ
ಮಂಗಳೂರು, ಅ 07, 2021: ಕೋವಿಡ್-19 ಮೂರನೇ ಅಲೆ ಎದುರಾದರೂ ಅದನ್ನು ಸಮರ್ಥವಾಗಿ ನಿಭಾಯಿಸಲು ಅಗತ್ಯ ರೀತಿಯ ವೈದ್ಯಕೀಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಅವರು ಹೇಳಿದರು.
ಅವರು ಗುರುವಾರ ನಗರದ ವೆನ್‍ಲಾಕ್ ಆಸ್ಪತ್ರೆಯ ಆವರಣದಲ್ಲಿ ಪ್ರತಿ ನಿಮಿಷಕ್ಕೆ ಒಂದು ಸಾವಿರ ಲೀಟರ್ ಹಾಗೂ 930 ಲೀಟರ್ ವೈದ್ಯಕೀಯ ಆಮ್ಲಜನಕ ಉತ್ಪಾದನೆ ಮಾಡುವ ಎರಡು ಘಟಕಗಳನ್ನು ಲೋಕಾರ್ಪಣೆ ಮಾಡಿ, ವರದಿಗಾರರೊಂದಿಗೆ ಮಾತನಾಡಿದರು.
ಕೋವಿಡ್ ಮೊದಲ ಅಲೆ ಎದುರಾದ ಸಂದರ್ಭದಲ್ಲಿ ಕೆಲವೊಂದು ವೈದ್ಯಕೀಯ ಅವಶ್ಯಕತೆಗಳು ಕಂಡುಬಂದಿತ್ತು. ಎರಡನೇ ಅಲೆಯಲ್ಲಿ ಜಿಲ್ಲೆಯ ವೆನ್‍ಲಾಕ್, ಲೇಡಿಗೋಷನ್ ಸೇರಿದಂತೆ ಎಲ್ಲ ತಾಲೂಕುಗಳ ಆಸ್ಪತ್ರೆ ಸಮುದಾಯ ಆಸ್ಪತ್ರೆಗಳಿಗೆ ಅವಶ್ಯಕವಾದ ಆಕ್ಸಿಜನ್ ಪ್ಲಾಂಟ್‍ಗಳನ್ನು ಸಿದ್ಧಡಿಸಲು ಕ್ರಮ ಕೈಗೊಳ್ಳಲಾಯಿತು. ಇದರಿಂದಾಗಿ ದೂರದ ಕೊಚ್ಚಿನ್ ಹಾಗೂ ಬಳ್ಳಾರಿಯಿಂದ ವೈದ್ಯಕೀಯ ಆಮ್ಲಜನಕದ ಪೂರೈಕೆಯ ಅವಲಂಬನೆಯಿಂದ ಹೊರಬರುವುದು ಸಾಧ್ಯವಾಯಿತು. ಜಿಲ್ಲೆಯಲ್ಲಿ ಒಟ್ಟಾರೆ 16 ಆಮ್ಲಜನಕ ಘಟಕಗಳ ಪೈಕಿ 12 ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಉಳಿದವು ಶೀಘ್ರದಲ್ಲೇ ಆಮ್ಲಜಕವನ್ನು ಉತ್ಪಾದಿಸಲಿವೆ ಎಂದು ತಿಳಿಸಿದರು.
ಪ್ರಧಾನಮಂತ್ರಿ ಕೇರ್ ನಿಧಿ ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಧಿಯಡಿ ಹಾಗೂ ಎಂ ಆರ್ ಪಿ ಎಲ್ ಸಿಎಸ್‍ಆರ್ ನಿಧಿಯಡಿ ವೆನ್ಲಾ ಕ್ ನಲ್ಲಿ ಎರಡು ಪ್ಲಾಂಟ್ ನಿರ್ಮಿಸಲಾಗಿದೆ. ಕೊರೋನಾ ವೇಳೆ ತಲೆದೋರಿದ್ದ ಆಸ್ಪತ್ರೆ ಬೆಡ್, ವೆಂಟಿಲೇಟರ್, ಆಕ್ಸಿಜನ್ ಸಮಸ್ಯೆಯನ್ನು ದೂರ ಮಾಡಲಾಗಿದೆ. ಕ್ರೆಡೈನಿಂದ ಇನ್ನೊಂದು ಆಕ್ಸಿಜನ್ ಪ್ಲಾಂಟ್ ಕೊಡುಗೆ ಇಲ್ಲಿಗೆ ಸಿಗಲಿದೆ. ವಿವಿಧ ಕಂಪನಿಗಳ ಸಿಎಸ್‍ಆರ್ ನಿಧಿಯಿಂದ ಆಕ್ಸಿಜನ್ ಪ್ಲಾಂಟ್‍ಗಳನ್ನು ಜಿಲ್ಲಾದ್ಯಂತ ನಿರ್ಮಾಣವಾಗುತ್ತಿದೆ. ಖಾಸಗಿ ಆಸ್ಪತ್ರೆಗಿಂತ ಹೆಚ್ಚಿನ ಗುಣಮಟ್ಟದ ಸೌಲಭ್ಯಗಳು ಈಗ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಾಗುತ್ತಿದೆ ಎಂದರು.
ಡಯಾಲಿಸಿಸ್ ಘಟಕ ಆರಂಭ:
ಸಂಸದರ ನಿಧಿಯಿಂದ 1 ಕೋಟಿ ರೂ. ಗಳನ್ನು ವೆನ್ಲಾಕ್ ಆಸ್ಪತ್ರೆಗೆ ವೆಂಟಿಲೇಟರ್ ಖರೀದಿಗೆ ನೀಡಲಾಗಿತ್ತು. ಕಳೆದ ವರ್ಷ 2.50 ಕೋಟಿ ರೂ. ನೀಡಿದ್ದು, ಆ ಮೊತ್ತದಲ್ಲಿ ವೆನ್ಲಾಕ್ ಹೊಸ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ ಆರಂಭಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಮಾತನಾಡಿ, ಆಸ್ಪತ್ರೆಗಳಿಗೆ ತುರ್ತು ಬೇಕಾದ ಆಮ್ಲಜನಕ ಉತ್ಪಾದನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸ್ವಾವಲಂಬಿಯಾಗಿದೆ. ಕೊರೋನಾ ಮೂರನೇ ಅಲೆ ಬಂದರೂ ಅದನ್ನು ಶಕ್ತವಾಗಿ ಎದುರಿಸಲು ಜಿಲ್ಲೆಯ ವೈದ್ಯಕೀಯ ವ್ಯವಸ್ಥೆ ಸರ್ವಸನ್ನದ್ಧಗೊಂಡಿದೆ ಎಂದರು.
ಆಮ್ಲಜನಕ ಉತ್ಪಾದನಾ ಘಟಕಗಳ ಸ್ಥಾಪನೆಯಿಂದಾಗಿ ಕೊರೋನಾ ಎರಡನೇ ಅಲೆ ವೇಳೆ ಆಕ್ಸಿಜನ್ ಕೊರತೆ ಕಂಡುಬಂದಿಲ್ಲ. ವೆನ್‍ಲಾಕ್ ಆಸ್ಪತ್ರೆಯಲ್ಲಿ 32 ಬೆಡ್‍ನ ಐಸಿಯು ಇದೆ. ವೆನ್ಲಾಕ್‍ನಲ್ಲಿ 3, ಲೇಡಿಗೋಷನ್‍ನಲ್ಲಿ 1, ನಾಲ್ಕು ತಾಲೂಕು ಆಸ್ಪತ್ರೆ, ಕಡಬ, ಉಳ್ಳಾಲ ತಾಲೂಕು ಸೇರಿ ಒಟ್ಟು 16 ಕಡೆಗಳಲ್ಲಿ ಆಕ್ಸಿಜನ್ ಪ್ಲಾಂಟ್ ಹೊಂದುವ ನಿರೀಕ್ಷೆ ಇದೆ. ಈಗ 12 ಪ್ಲಾಂಟ್ ಆಗಿದ್ದು, 3 ಪ್ಲಾಂಟ್ ತಯಾರಾಗಿದೆ. ಒಂದು ಪ್ಲಾಂಟ್ ಪೂರ್ಣಗೊಳ್ಳಲು ಬಾಕಿ ಇದೆ ಎಂದರು.
ಕೊರೋನಾ ಎರಡನೇ ಅಲೆ ಇನ್ನೂ ಹೋಗಿಲ್ಲ. ಈ ನಡುವೆಯೇ ನವರಾತ್ರಿ, ದಸರಾ ಹಬ್ಬ ಬಂದಿದೆ. ಈ ಹಬ್ಬದಲ್ಲಿ ಯಾರೂ ಮೈಮರೆಯಬಾರದು. ಮುಖಕ್ಕೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಅಲ್ಲದೆ ಕೋವಿಡ್ ನಿಯಮ ಪಾಲಿಸಲೇ ಬೇಕು ಎಂದು ಜಿಲ್ಲಾಧಿಕಾರಿಯವರು ಕರೆ ನೀಡಿದರು.
ಕೋವಿಡ್ ಲಸಿಕೆ ಪಡೆದುಕೊಳ್ಳಲು ಆದ್ಯತೆ ನೀಡಬೇಕು. ಮನೆಯಲ್ಲೇ ಹಬ್ಬ ಆಚರಿಸುವ ಮೂಲಕ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಲು ನೆರವಾಗಬೇಕು ಎಂದು ಅವರು ಸಾರ್ವಜನಿಕರಲ್ಲಿ ವಿನಂತಿಸಿದರು.
ಈ ಸಂದರ್ಭ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್, ವೆನ್ಲಾಕ್ ಆಸ್ಪತ್ರೆ ಅಧೀಕ್ಷಕ ಡಾ. ಸದಾಶಿವ ಶಾನುಭೋಗ್, ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು.