ದ್ರವತಾಜ್ಯದ ವೈಜ್ಞಾನಿಕ ನಿರ್ವಹಣೆಗೆ ಜಿಲ್ಲಾ ಪಂಚಾಯತ್ ಸಿಇಓ ಸೂಚನೆ
ಮಂಗಳೂರು ಆ.27, 2021: ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ದ್ರವತ್ಯಾಜ್ಯ ನಿರ್ವಹಣೆಯನ್ನು ವೈಜ್ಞಾನಿಕವಾಗಿ ಹಾಗೂ ಪರಿಣಾಮಕಾರಿಯಾಗಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ. ಕುಮಾರ್ ಅವರು ಕರೆ ನೀಡಿದರು.
ಅವರು ಶುಕ್ರವಾರ ನಗರದ ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ದ್ರವತ್ಯಾಜ್ಯ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಗ್ರಾಮೀಣ ಕುಡಿಯುವ ನೀರು, ಪಂಚಾಯತ್ ರಾಜ್ ಎಂಜಿನಿಯರಿಂಗ್ ಹಾಗೂ ಎಂಜಿ ನರೇಗಾ ಯೋಜನೆಯ ಎಂಜಿನಿಯರುಗಳಿಗಾಗಿ ಆಯೋಜಿಸಲಾಗಿದ್ದ “3 ದಿನದ ಅಡ್ವಾನ್ಸ್ ಮಾಡ್ಯೂಲ್ ಕಾರ್ಯಾಗಾರ” ಉದ್ಘಾಟಿಸಿ ಮಾತನಾಡಿದರು.
ಸ್ವಚ್ಛ ಭಾರತ್ ಮಿಷನ್ನ ಯೋಜನೆಯಡಿ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯನ್ನು ಬಯಲು ಮುಕ್ತ ಬಹಿರ್ದೆಸೆ ಎಂದು ಘೋಷಿಸಲಾಗಿದ್ದು, ಸ್ವಚ್ಛ ಭಾರತ್ ಮಿಷನ್ ಯೋಜನೆಯ 2ನೇ ಹಂತವೂ ಜಾರಿಯಲ್ಲಿದೆ, ಆದ ಕಾರಣ ಬಯಲು ಬಹಿರ್ದೆಸೆ ಮುಕ್ತ ಸುಸ್ಥಿರತೆಯನ್ನು ಕಾಪಾಡಲು ಓಡಿಎಫ್ ಪ್ಲಸ್ ಚಟುಚಟಿಕೆಗಳನ್ನು ಅನುಷ್ಠಾನಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸೂಚಿಸಿದರು.
15 ನೇ ಹಣಕಾಸು, ಸ್ವಚ್ಛ ಭಾರತ್ ಮಿಷನ್ ಹಾಗೂ ನರೇಗಾ ಯೋಜನೆಯ ಅನುದಾನವನ್ನು ನಿಯಮಿತವಾಗಿ ವಿನಿಯೋಗಿಸಿಕೊಂಡು ವೈಯಕ್ತಿಕ ಶೌಚಾಲಯ, ಘನತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯ, ಬೂದು ನೀರು ಮತ್ತು ಮಲತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಿದ್ದಲ್ಲಿ ಶೀಘ್ರವೇ ಓಡಿಎಫ್ ಗುರಿಯನ್ನು ಮುಟ್ಟಬಹುದು, ಬೂದು ಹಾಗೂ ಕಪ್ಪು ಬಣ್ಣದ ದ್ರವತ್ಯಾಜ್ಯವನ್ನು ನೇರವಾಗಿ ವಾತಾವರಣಕ್ಕೆ ಬಿಡುವುದರಿಂದ ಮಾರಣಾಂತಿಕ ಕಾಯಿಲೆಗಳು ಬರುವ ಸಾಧ್ಯಗಳಿವೆ. ಆದ್ದರಿಂದ ದ್ರವತ್ಯಾಜ್ಯ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಪ್ರತಿ ಮನೆಗಳಲ್ಲೂ ಹಿಂಗುಗುಂಡಿಗಳ ನಿರ್ಮಾಣವಾಗಬೇಕಿದೆ ಎಂದರು.
ಜಿಲ್ಲೆಯಲ್ಲಿ ಬೂದು ಬಣ್ಣದ ದ್ರವತ್ಯಾಜ್ಯ ನಿರ್ವಹಣೆಗೆ 29.26 ಕೋಟಿ ರೂ.ಗಳ ಅನುದಾನ ಮಂಜೂರಾಗಿದ್ದು, ಅದರಲ್ಲಿ 7.31 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ, ಬಂಟ್ವಾಳದ ಗೋಲ್ತಮಜಲು ಮತ್ತು ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಪ್ಪು ನೀರು ನಿರ್ವಹಣೆಗಾಗಿ ಎಫ್.ಎಸ್.ಎಂ ಘಟಕ ನಿರ್ಮಿಸಲಾಗುತ್ತಿದೆ, ಅದರ ನಿರ್ವಹಣೆಗೆ ಪ್ರತಿ ವ್ಯಕ್ತಿಗೆ 230 ರೂ.ಗಳಂತೆ ಅನುದಾನ ಲಭ್ಯವಿರುತ್ತದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಆನಂದ ಕುಮಾರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಾದ ನರೇಂದ್ರ ಬಾಬು, ಸಿಡಿಡಿ ಸಂಸ್ಥೆಯ ಮ್ಯಾನೇಜರ್ ಸಂಧ್ಯಾ ಹರಿಬಲ್ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಸ್ವಚ್ಛ ಭಾರತ್ ಮಿಷನ್ನ ಸಿಬ್ಬಂದಿಗಳಿದ್ದರು.