ಕೋವಿಡ್ 3ನೇ ಅಲೆ ಎದುರಿಸಲು ಮಕ್ಕಳ ಸಮಾಲೋಚಕರಿಗೆ ತರಬೇತಿ: ಜಿಲ್ಲಾಧಿಕಾರಿ ಜಿ.ಜಗದೀಶ್
ಉಡುಪಿ, ಜು 24, 2021: ಕೋವಿಡ್ 3ನೇ ಅಲೆಯು ಮಕ್ಕಳನ್ನು ಬಾಧಿಸಬಹುದಾದ ಹಿನ್ನಲೆಯಲ್ಲಿ, ಮಕ್ಕಳೊಂದಿಗೆ ಮಕ್ಕಳ ಸ್ನೇಹಿಯಾಗಿ ಬೆರೆತು , ಅವರೊಂದಿಗೆ ಆಪ್ತ ಸಮಾಲೋಚನೆ ನಡೆಸಿ, ಕೋವಿಡ್ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ , ಮಕ್ಕಳ ಸಮಾಲೋಚಕರಿಗೆ ಅಗತ್ಯ ತರಬೇತಿ ಕಾರ್ಯಕ್ರಮಗಳನ್ನು ಆದ್ಯತೆಯ ಮೇರೆಗೆ ಆಯೋಜಿಸಿ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದರು.
ಅವರು ಶುಕ್ರವಾರ, ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ನಡೆದ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವಿವಿಧ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಎಲ್ಲಾ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಸಹ ಮಕ್ಕಳ ಸಮಾಲೋಚಕರನ್ನು ನೇಮಿಸಿ. ಮಕ್ಕಳ ಸಮಾಲೋಚಕರಾಗಿ ಕಾರ್ಯನಿರ್ವಹಿಸಲು ಆಸಕ್ತರಿರುವ ಎಂ.ಎಸ್.ಡಬ್ಯೂ ಮತ್ತು ಮನ:ಶಾಸ್ತ್ರದ ವಿದ್ಯಾರ್ಥಿಗಳಿಗೆ,ಕೋವಿಡ್ ಬಾಧಿತರಾದ ಮಕ್ಕಳೊಂದಿಗೆ ಬೆರೆತು, ಮಕ್ಕಳು ಕೋವಿಡ್ ಮಾರ್ಗಸೂಚಿಗಳ ಪಾಲನೆ ಮತ್ತು ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸುವಂತೆ ಮನವೊಲಿಸುವ ವಿಧಾನಗಳ ಬಗ್ಗೆ ಸೂಕ್ತ ತರಬೇತಿ ನೀಡಿ, ಅವರನ್ನು ಕೋವಿಡ್ ಕಾಲ್ ಸೆಂಟರ್ ಹಾಗೂ ಟೆಲಿ ಕೌನ್ಸಿಲಿಂಗ್ ಸೇವೆಗಳಿಗೆ ಸಹ ನಿಯೋಜಿಸಿ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.
ಮಕ್ಕಳ ಸಹಾಯವಾಣಿ ಸಂಖ್ಯೆ 1098 ಬಗ್ಗೆ ಜಿಲ್ಲೆಯಾದ್ಯಂತ ವ್ಯಾಪಕವಾಗಿ ಅರಿವು ಮೂಡಿಸಿ. ಪಿಡಿಓಗಳು, ಆಶಾ ಕಾರ್ಯಕತೆಯರು, ಹಿರಿಯ ಆರೋಗ್ಯ ಸಹಾಯಕಿಯರಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿ. ಶಾಲೆಗಳು ಆರಂಭವಾದ ಕೂಡಲೇ ಶಾಲಾ ಮುಖ್ಯೋಪಧ್ಯಾಯರಿಗೆ ಸಹ ತರಬೇತಿ ಆಯೋಜಿಸಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಬಾಲನ್ಯಾಯ ಮಂಡಳಿಯಲ್ಲಿ 2021 ರ ಜೂನ್ ಅಂತ್ಯದವರೆಗೆ ಬಾಕಿ ಇದ್ದ 23 ಪ್ರಕರಣಗಳಲ್ಲಿ 1 ಪ್ರಕರಣ ಇತ್ಯರ್ಥಗೊಂಡಿದ್ದು, ಪೊಕ್ಸೋ 8, ಅಪಘಾತ 3 ಸೇರಿದಂತೆ ಇತರೆ ಒಟ್ಟು 22 ಪ್ರಕರಣ ಬಾಕಿ ಇವೆ, ಮಕ್ಕಳ ಕಲ್ಯಾಣ ಸಮಿತಿಯ ಮುಂದೆ 26 ಪ್ರಕರಣಗಳು ಬಂದಿದ್ದು, 15 ನ್ನು ಮಕ್ಕಳ ಪಾ¯ನಾ ಸಂಸ್ಥೆಗಳಿಗೆ, 2 ಬೇರೆ ಜಿಲ್ಲೆಗೆ, 9 ಪೋಷಕರ ವಶಕ್ಕೆ ಬಿಡುಗಡೆ ಮಾಡಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 28 ಮಕ್ಕಳ ಪಾಲಾನ ಸಂಸ್ಥೆಗಳಲ್ಲಿ 132 ಮಕ್ಕಳಿದ್ದಾರೆ , ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕ ಶೇಷಪ್ಪ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ವಿವಿಧ ಜಿಲ್ಲಾ ಮಟ್ದದ ಅಧಿಕಾರಿಗಳು ಹಾಗೂ ಮಕ್ಕಳ ರಕ್ಷಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.