ಕಾರವಾರ: ಪ್ರತ್ಯೇಕ ಟೆಂಡರ್ ಆಹ್ವಾನಿಸಲು ಆಗ್ರಹಿಸಿದ ಗುತ್ತಿಗೆದಾರರ ಸಂಘ
ಕಾರವಾರ, ಜುಲೈ 03, 2021: ಕಾರವಾರ ತಾಲೂಕು ಸಿವಿಲ್ ಗುತ್ತಿಗೆದಾರರ ಸಂಘದ ಸಭೆ ಶುಕ್ರವಾರ ನಡೆಯಿತು. ಈ ವೇಳೆ ಇತ್ತೀಚೆಗೆ ಸಣ್ಣ ಸಣ್ಣ ಕಾಮಗಾರಿಗಳನ್ನು ಒಗ್ಗೂಡಿಸಿ ಪ್ಯಾಕೇಜ್ ಟೆಂಡರ್ ವ್ಯವಸ್ಥೆ ರೂಪಿಸಿದ್ದರ ಬಗ್ಗೆ ಆಕ್ಷೇಪ ವ್ಯಕ್ತವಾಯಿತು. ಪ್ರತಿ ಕಾಮಗಾರಿಗೂ ಪ್ರತ್ಯೇಕ ಟೆಂಡರ್ ಕರೆಯುವಂತೆ ಒತ್ತಾಯಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ನಗರಸಭೆಯೂ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕಾಮಗಾರಿಗಳನ್ನು ಟೆಂಡರ್ ಮೂಲಕ ಹಂಚಿಕೆ ಮಾಡದೆ ಮುಂಚಿತವಾಗಿ ಕೆಲಸ ಮಾಡಿಸಿ, ಬಳಿಕ ಪ್ಯಾಕೇಜ್ ಟೆಂಡರ್ ಕರೆಯುತ್ತಿರುವುದು ಸರಿಯಲ್ಲ ಎಂದು ಸಂಘದ ಅಧ್ಯಕ್ಷ ಮಾಧವ ನಾಯಕ ಸೇರಿದಂತೆ ಹಲವರು ಆಕ್ಷೇಪಿಸಿದರು. ಮಂಗಳವಾರ ಈ ಕುರಿತು ನಗರಸಭೆ ಅಧ್ಯಕ್ಷ ಹಾಗೂ ಪೌರಾಯುಕ್ತರೊಂದಿಗೆ ಚರ್ಚಿಸಲು ನಿರ್ಣಯಿಸಲಾಯಿತು.
ಸ್ಥಳೀಯ ಗುತ್ತಿಗೆದಾರರನ್ನು ಕಡೆಗಣಿಸಿ ಹೊರಗಿನ ಗುತ್ತಿಗೆದಾರರಿಗೆ ಕಾಮಗಾರಿ ಹಂಚಿಕೆ ಮಾಡುವ ಹುನ್ನಾರದ ವಿರುದ್ಧವೂ ಖಂಡನೆ ವ್ಯಕ್ತವಾಯಿತು. ಕಾಮಗಾರಿಗಳ ಟೆಂಡರ್ ಕರೆಯುವಾಗ ಸ್ಥಳೀಯ ಗುತ್ತಿಗೆದಾರರನ್ನೂ ವಿಶ್ವಾಸಕ್ಕೆ ಪಡೆಯುವಂತೆ ಮನವಿ ಮಾಡಲು ತೀರ್ಮಾನಿಸಲಾಯಿತು.
ಕಾರವಾರದ ಸುಭಾಷ ಸರ್ಕಲ್ ಸಮೀಪ ಪ್ರತಿದಿನ ನೂರಾರು ಸಂಖ್ಯೆಯ ಕಾರ್ಮಿಕರು ಕೆಲಸಕ್ಕೆ ಕಾದು ಕುಳತಿರುತ್ತಿದ್ದು ಅವರು ಗುತ್ತಿಗೆದಾರರ ಬಳಿ ಮನಬಂದಂತೆ ದಿನಗೂಲಿ ಬೇಡಿಕೆ ಇಡುತ್ತಿದ್ದಾರೆ. ಇದರಿಂದ ಕೆಲಸ ನಿರ್ವಹಣೆಯೇ ಕಷ್ಟವಾಗಿದೆ. ಈ ಕಾರಣಕ್ಕೆ ಕಾರ್ಮಿಕರಿಗೆ ನಿಗದಿತ ದಿನಗೂಲಿ ವೆಚ್ಚ ನಿಗದಿಪಡಿಸಿದರೆ ಉತ್ತಮ ಎಂಬ ಸಲಹೆ ವ್ಯಕ್ತವಾಯಿತು.
ಸಭೆ ಪ್ರಾರಂಭಿಸುವ ಪೂರ್ವದಲ್ಲಿ ಕೋವಿಡ್ ಸಂದರ್ಭದಲ್ಲಿ ಅಗಲಿದ ಗುತ್ತಿಗೆದಾರರಿಗೆ ಮೌನಾಚಾರಣೆ ಮಾಡಿ ಸಂತಾಪ ಸೂಚಿಸಲಾಯಿತು,
ಸಭೆಯಲ್ಲಿ ಸಂಘದ ಅಧ್ಯಕ್ಷ ಮಾಧವ ನಾಯಕ, ಉಪಾಧ್ಯಕ್ಷ ಸಂತೋಷ ಸೈಲ, ಕಾರ್ಯದರ್ಶಿ ಅನಿಲಕುಮಾರ್ ಮಾಳ್ಸೇಕರ್, ಜಂಟಿ ಕಾರ್ಯದರ್ಶಿ ಸುಮಿತ ಅಸ್ನೋಟಿಕರ್, ಖಜಾಂಚಿ ರಾಜೇಶ ಶೇಟ್, ಸದಸ್ಯರಾದ ಡಿ.ಕೆ.ನಾಯ್ಕ, ಪ್ರಸಾದ ಕಾಣೇಕರ, ಜಯಪ್ರಕಾಶ ಜಿ ಕೆ, ಮುರಳಿ ಗೋವೇಕರ್,ಛತ್ರಪತಿ ಮಾಲ್ಸೇಕರ್, ಬಿಲಿಯೇ,ಉದಯ ನಾಯ್ಕ, ಕೇರ್ಕರ್, ವಿಜಯ್ ದೇಸಾಯಿ, ಉದಯ್ ಕಲ್ಗುಟ್ಕರ್, ಶಶಿಧರ ನಾಯ್ಕ ಇನ್ನಿತರರು ಇದ್ದರು.