ಕೋವಿಡ್ ಕಾರಣದಿಂದ ಮಕ್ಕಳು ಬಾಲಕಾರ್ಮಿಕರಾಗುವ ಸಾಧ್ಯತೆ ಹೆಚ್ಚಿದ್ದು, ತಡೆಗೆ ವಿಶೇಷ ಆದ್ಯತೆ ನೀಡಬೇಕು: ಜಿಲ್ಲಾಧಿಕಾರಿ
ಉಡುಪಿ ಜೂನ್ 11, 2021: ಕೋವಿಡ್-19 ಪರಿಣಾಮವಾಗಿ ಆರ್ಥಿಕ ಮತ್ತು ಕಾರ್ಮಿಕ ಮಾರುಕಟ್ಟೆಯ ಆಘಾತವು ಜನರಜೀವನ ಹಾಗೂ ಜೀವನೋಪಾಯದ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ಈ ಬಿಕ್ಕಟ್ಟು ಸಾವಿರಾರು ದುರ್ಬಲ ಮಕ್ಕಳನ್ನು ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ಪದ್ಧತಿಗೆ ತಳ್ಳುವ ಸಾಧ್ಯತೆ ಇದೆ. ಮಕ್ಕಳನ್ನು ಕೋವಿಡ್-19 ಕಾರಣದಿಂದಾಗಿ ಬಾಲಕಾರ್ಮಿಕತೆಯಿಂದ ರಕ್ಷಿಸಲು ಹಿಂದಿ ಗಿಂತಲೂ ಹೆಚ್ಚು ಶ್ರಮಿಸಬೇಕಾದ ಅಗತ್ಯವಿದೆ ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.
“ಹದಿನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಯಾವುದೇ ವೃತ್ತಿ ಮತ್ತು ಪ್ರಕ್ರಿಯೆಗಳಲ್ಲಿ ಕೆಲಸಕ್ಕೆ ನೇಮಕ ಮಾಡಿಕೊಳ್ಳುವುದು ಮತ್ತು ಅವಕಾಶ ಕಲ್ಪಿಸಿಕೊಡುವುದು ನಿಷೇಧಿಸಲ್ಪಟ್ಟಿದೆ. 14 ರಿಂದ 18 ವರ್ಷದೊಳಗಿನ ಕಿಶೋರಾವಸ್ಥೆಯ ಕಾರ್ಮಿಕರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ನೇಮಿಸಿಕೊಳ್ಳುವುದನ್ನು ನಿಷೇಧಿಸಲ್ಪಟ್ಟಿದೆ, ಕೆಲಸಕ್ಕೆ ನೇಮಿಸಿಕೊಂಡಲ್ಲಿ ಮಾಲೀಕರಿಗೆ 6 ತಿಂಗಳುಗಳಿಗೆ ಕಡಿಮೆ ಇಲ್ಲದಂತೆ 2 ವರ್ಷದವರೆಗೆಜೈಲು ಶಿಕ್ಷೆ, ಕನಿಷ್ಠ ₹ 20,000 ದಿಂದ ಗರಿಷ್ಠ ₹ 50,000 ವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿರುತ್ತದೆ.
“ಆದ್ದರಿಂದ ಜಿಲ್ಲೆಯ ಎಲ್ಲಾ ಉದ್ದಿಮೆದಾರರು ನಾಗರೀಕರು, ಕಾರ್ಮಿಕ ಸಂಘದ ಪದಾಧಿಕಾರಿಗಳು, ಜಿಲ್ಲಯ ಮಕ್ಕಳನ್ನು ಬಾಲಕಾರ್ಮಿಕದಿಂದ ರಕ್ಷಿಸಿ , ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಬೇಕು,” ಎಂದು ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.