ಕೋವಿಡ್ ಸಮಯದಲ್ಲಿ ಭೂಮಿ ಪೂಜೆ, ಉದ್ಘಾಟನೆ ಕಾರ್ಯಕ್ರಮ ಸ್ಥಗಿತಗೊಳಿಸಿ

 ಕೋವಿಡ್ ಸಮಯದಲ್ಲಿ ಭೂಮಿ ಪೂಜೆ, ಉದ್ಘಾಟನೆ ಕಾರ್ಯಕ್ರಮ ಸ್ಥಗಿತಗೊಳಿಸಿ
Share this post

ಕೋವಿಡ್–19 ಎಂಬ ಮಹಾಮಾರಿ ವ್ಯಾಪಕವಾಗಿ ಹರಡುತ್ತಿರುವುದನ್ನು ತಡೆಯಲು ಸರಕಾರ ಕಟ್ಟುನಿಟ್ಟಿನ ನಿಯಮಾವಳಿ ರೂಪಿಸಿರುವುದು ಸ್ವಾಗತಾರ್ಹ. ಸೋಂಕಿನ ಸರಪಳಿ (ವೈರಸ್ ಚೈನ್) ತುಂಡರಿಸಲು ಲಾಕ್‍ಡೌನ್ ಜಾರಿಗೊಳಿಸಿದ್ದಲ್ಲದೆ, ಜನರು ಸೇರದಂತೆ ನಿಯಮ ಹೊರಡಿಸಲಾಗಿದೆ. 20 ಜನ ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಿದ್ದ ಮದುವೆ ಸಮಾರಂಭವನ್ನೂ ಈಗ ರದ್ದು‍ಪಡಿಸಲಾಗಿದೆ. ಅಂತ್ಯಸಂಸ್ಕಾರದಲ್ಲಿ ಗರಿಷ್ಠ 5 ಜನ ಮಾತ್ರ ಪಾಲ್ಗೊಳ್ಳಬಹುದು ಎಂಬ ನಿಯಮ ಹೇರಲಾಗಿದೆ.

Madhav Nayak
ಮಾಧವ ಬಿ.ನಾಯಕ

ಇವೆಲ್ಲವನ್ನೂ ಜವಾಬ್ದಾರಿಯುತ ನಾಗರಿಕರಾಗಿ ಒಪ್ಪಿಕೊಳ್ಳಬೇಕು ಮತ್ತು ನಿಯಮಗಳ ಪಾಲನೆ ಮಾಡಲೇಬೇಕು. ಆದರೆ, ಸಂವಿಧಾನ ರೂಪಿಸುವ ಮತ್ತು ಅದರ ಪಾಲನೆಗೆ ಕೆಲಸ ಮಾಡುವ ಜನಪ್ರತಿನಿಧಿಗಳು ಈ ನಿಯಮಗಳಿಂದ ಅತೀತರೆ? ಅಥವಾ ನಿಯಮಗಳನ್ನು ಪಾಲಿಸುವ ಅಗತ್ಯ ಅವರಿಗಿಲ್ಲವೆ ಎಂಬ ಪ್ರಶ್ನೆ ಮೂಡುವುದು ಸಹಜವಾಗಿದೆ. ಏಕೆಂದರೆ ಸ್ಥಳೀಯ ಶಾಸಕರಾದಿಯಾಗಿ ಜಿಲ್ಲೆ ಮತ್ತು ರಾಜ್ಯದ ಹಲವೆಡೆ ಈಗಲೂ ಜನಪ್ರತಿನಿಧಿಗಳು ಸರಕಾರಿ ಕಾಮಗಾರಿಗಳ ಭೂಮಿಪೂಜೆ ನಡೆಸುತ್ತಿದ್ದಾರೆ. ಉದ್ಘಾಟನಾ ಕಾರ್ಯಕ್ರಮಗಳು ನಡೆಯುತ್ತಿವೆ. ಈ ವೇಳೆ ಜನರು ದೈಹಿಕ ಅಂತರ ಮರೆತು ಸೇರುತ್ತಿರುವುದು ನಿಜಕ್ಕೂ ಆಘಾತಕಾರಿ ಬೆಳವಣಿಗೆ.

ಕೆಲ ದಿನಗಳ ಹಿಂದೆ ಪಶ್ಚಿಮ ಬಂಗಾಳ ಚುನಾವಣೆ ವೇಳೆ ಪ್ರಧಾನ ಮಂತ್ರಿಯವರೇ ಸಮಾವೇಶದಲ್ಲಿ ಲಕ್ಷಾಂತರ ಜನರು ಸೇರಿದ್ದಕ್ಕೆ ಬಹಿರಂಗವಾಗಿ ಖುಷಿಪಟ್ಟಿದ್ದರು. ಬೆಳಗಾವಿಯಲ್ಲೀ ರಾಜಕೀಯ ಸಮಾವೇಶದಲ್ಲಿ ಲಕ್ಷಾಂತರ ಜನರು ಸೇರಿದ್ದರು. ಇವೆಲ್ಲವನ್ನೂ ಜವಾಬ್ದಾರಿಯುತ ಸ್ಥಾನದಲ್ಲಿರುವವರೇ ಮುಂದೆ ನಿಂತು ಆಯೋಜಿಸಿದ್ದು ನಿಜಕ್ಕೂ ಸಮಾಜಕ್ಕೊಂದು ಕೆಟ್ಟ ಸಂದೇಶ ಸಾರಿದಂತಾಗಿತ್ತು.

ಈ ಕಾರಣಕ್ಕೆ ಕೋವಿಡ್ ಸಾಂಕ್ರಾಮಿಕ ನಿಯಂತ್ರಣದ ದೃಷ್ಟಿಯಿಂದ ಜನರು ಗುಂಪುಗೂಡಲು ಅವಕಾಶ ನೀಡದಂತೆ ಕಟ್ಟುನಿಟ್ಟಿನ ಕ್ರಮವಾಗಬೇಕಿದೆ.

ಗ್ರಾಮ ಪಂಚಾಯತ ಸದಸ್ಯರಿಂದ ಹಿಡಿದು ಮುಖ್ಯಮಂತ್ರಿ ವರೆಗೆ ಸಾಂಕ್ರಾಮಿಕ ನಿಯಂತ್ರಣಕ್ಕೆ ಬರುವವರೆಗೆ ಯಾವುದೇ ಭೂಮಿಪೂಜೆ, ಉದ್ಘಾಟನೆ ಕಾರ್ಯಕ್ರಮ ನಡೆಸದಂತೆ ಸರಕಾರ ಆದೇಶ ಹೊರಡಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮತ್ತು ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ರವಿಕುಮಾರ್ ಅವರಿಗೆ ಇ–ಮೇಲ್ ಮುಖಾಂತರ ಮನವಿ ಸಲ್ಲಿಸಿ ಒತ್ತಾಯಿಸಿದ್ದೇನೆ. ತುರ್ತು ಅಗತ್ಯವಿರುವ ಕಾಮಗಾರಿಗಳಿದ್ದಲ್ಲಿ ಯಾವ ಕಾರ್ಯಕ್ರಮ ಆಯೋಜನೆ ಮಾಡದೆ ಅದನ್ನು ಆರಂಭಿಸಲು ಅನುವು ಮಾಡಿಕೊಡುವಂತೆ ಆದೇಶಿಸುವಂತೆಯೂ ಒತ್ತಾಯಿಸಿದ್ದೇನೆ.

Also read: Civil society in Uttara Kannada to work for bringing down mortality rate

ಇದಲ್ಲದೆ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಕಠಿಣ ಲಾಕ್‍ಡೌನ್ ಹೇರುವ ಬದಲು ವಾರದಲ್ಲಿ ಎರಡು ದಿನ ಮಾರುಕಟ್ಟೆ ತೆರೆಯಲು ಅವಕಾಶ ಕಲ್ಪಿಸಿ ಜನಜಂಗುಳಿಗೆ ಕಾರಣವಾಗುವ ಅವೈಜ್ಞಾನಿಕ ಆದೇಶವನ್ನೂ ಹಿಂಪಡೆಯುವಂತೆ ಜಿಲ್ಲಾಧಿಕಾರಿಯವರಿಗೂ ವಿನಂತಿಸಿದ್ದೇನೆ. ಮುಂದಿನ ಹದಿನೈದು ದಿನಗಳ ಕಾಲವಾದರೂ ಕಟ್ಟುನಿಟ್ಟಿನ ಲಾಕ್‍ಡೌನ್ ಜಾರಿಯಲ್ಲಿರಲಿ ಎಂದು ವಿನಂತಿಸಲಾಗಿದೆ.

ಮಾಧವ ಬಿ ನಾಯಕ, ಜನಶಕ್ತಿ ವೇದಿಕೆ ಅಧ್ಯಕ್ಷ

Subscribe to our newsletter!

Other related posts

error: Content is protected !!