ಜಿಲ್ಲೆಯಲ್ಲಿ ವೈದ್ಯರ ನಡೆ ಹಳ್ಳಿಗಳ ಕಡೆ : ಜಿಲ್ಲಾಧಿಕಾರಿ ಜಿ.ಜಗದೀಶ್
ಉಡುಪಿ ಮೇ 24, 2021: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ 19 ಹರಡುವುದನ್ನು ನಿಯಂತ್ರಿಸಲು,
ವೈದ್ಯರು ಮತ್ತು ಸ್ವಾಬ್ ಸಂಗ್ರಹಿಸುವ ಸಿಬ್ಬಂದಿಗಳು ಮನೆ ಮನೆಗಳಿಗೆ ಭೇಟಿ ನೀಡಿ, ಗ್ರಾಮದ ಎಲ್ಲಾ ಸಾರ್ವಜನಿಕರನ್ನು
ತಪಾಸಣೆಗೆ ಒಳಪಡಿಸಿ, ಸೋಂಕಿನ ಲಕ್ಷಣಗಳಿದ್ದಲ್ಲಿ ಸ್ಥಳದಲ್ಲೇ ತಪಾಸಣೆ ನಡೆಸಿ, ರೋಗದ ಕುರಿತು ಅರಿವು ಮೂಡಿಸುವ ವೈದ್ಯರ
ನಡೆ ಹಳ್ಳಿಗಳ ಕಡೆ ಕಾರ್ಯಕ್ರಮವನ್ನು ಮೇ 25 (ನಾಳೆ) ರಿಂದ ಜಿಲ್ಲೆಯಲ್ಲಿ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ
ಜಿ.ಜಗದೀಶ್ ತಿಳಿಸಿದ್ದಾರೆ.
ಅವರು ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವೈದ್ಯರ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ
ಮಾತನಾಡಿದರು.
ಜಿಲ್ಲೆಯ 155 ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯಲ್ಲಿನ 59 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ
ಕೇಂದ್ರಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳು ತಮ್ಮ ವ್ಯಾಪ್ತಿಯ ಗ್ರಾಮಗಳಿಗೆ ತೆರಳಿ, ಮನೆ ಮನೆಗಳಿಗೆ ಭೇಟಿ ನೀಡಿ, ಮನೆಯಲ್ಲಿ
ಸೋಂಕಿನ ಲಕ್ಷಣಗಳಿದ್ದವರನ್ನು ರ‍್ಯಾಟ್ ಪರೀಕ್ಷೆ ಮೂಲಕ ಪರೀಕ್ಷಿಸಬೇಕು. ಪಾಸಿಟಿವ್ ಕಂಡುಬಂದಲ್ಲಿ ರೋಗಿಯ ಗುಣಲಕ್ಷಣದ
ಆಧಾರದ ಮೇಲೆ ಆಸ್ಪತ್ರೆಗೆ ದಾಖಲಾಗಬೇಕೇ, ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಬೇಕೇ ಅಥವಾ ಹೋಂ ಐಸೋಲೇಶನ್ ನಲ್ಲಿ
ಇರಬೇಕೇ ಎಂಬುದರ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಹಾಗೂ ಸೋಂಕಿತರಿಗೆ ಮೆಡಿಕಲ್ ಕಿಟ್ ವಿತರಿಸಿ ಸೂಕ್ತ ಮಾಹಿತಿಯನ್ನು ನೀಡಬೇಕು ಎಂದು ಡಿಸಿ ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಹೋಂ ಐಸೋಲೇಶನ್ ನಲ್ಲಿರುವ ರೋಗಿಗಳನ್ನೂ ಸಹ ವೈದ್ಯರು ತಪಾಸಣೆ ಮಾಡಬೇಕು. ಹೋಂ
ಐಸೋಲೇಶನ್ ನಲ್ಲಿ ಇರಲು ಸೂಕ್ತ ವ್ಯವಸ್ಥೆ ಇಲ್ಲದವರು ಕಂಡುಬಂದಲ್ಲಿ ಅವರನ್ನು ಕೋವಿಡ್ ಕೇರ್ ಸೆಂಟರ್‌ಗೆ ದಾಖಲು
ಮಾಡಿ ಚಿಕಿತ್ಸೆಗೆ ಒಳಪಡಿಸಬೇಕು. ಪಾಸಿಟಿವ್ ರೋಗಿಗಳ ಪ್ರಾಥಮಿಕ ಸಂಪರ್ಕಿತರನ್ನೂ ಸಹ ಪರೀಕ್ಷೆಗೆ ಒಳಪಡಿಸಬೇಕು ಎಂದರು.
ವೈದ್ಯರು ಮತ್ತು ಸಿಬ್ಬಂದಿಗಳು ಸಂಚರಿಸಲು ಅನುಕೂಲವಾಗುವಂತೆ ಅಗತ್ಯವಿರುವ ವಾಹನಗಳನ್ನು ಬಾಡಿಗೆ ಆದಾರದಲ್ಲಿ
ಪಡೆಯುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಪ್ರತೀ ದಿನ ಯಾವ ಗ್ರಾಮಕ್ಕೆ ತೆರಳಬೇಕು ಎನ್ನುವ ಬಗ್ಗೆ ಯೋಜನೆಯನ್ನು
ರೂಪಿಸಿಕೊಂಡು ಅದರಂತೆ ಕಾರ್ಯನಿರ್ವಹಿಸಬೇಕು ಹಾಗೂ ಗ್ರಾಮಗಳಿಗೆ ಈ ಬಗ್ಗೆ ಮಾಹಿತಿ ನೀಡಬೇಕು. ಗ್ರಾಮಗಳಲ್ಲಿ
ರಚಿಸಲಾಗಿರುವ ಟಾಸ್ಕ್ಫೋರ್ಸ್ ತಂಡಗಳ ಸದಸ್ಯರು ವೈದ್ಯಕೀಯ ತಂಡಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು
ನೀಡುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಡಾ. ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಎಎಸ್ಪಿ ಕುಮಾರ ಚಂದ್ರ,
ಡಿಹೆಚ್‌ಓ ಡಾ.ಸುಧೀರ್ ಚಂದ್ರ ಸೂಡಾ, ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಕೋವಿಡ್ ನೋಡೆಲ್ ಅಧಿಕಾರಿ
ಡಾ.ಪ್ರಶಾಂತ ಭಟ್ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.