ಮಂಗಳೂರು ಟಗ್ ದುರಂತ:ಮೃತರ ಕುಟುಂಬಗಳಿಗೆ ತಲಾ ₹ 25 ಲಕ್ಷ ಪರಿಹಾರ ಒದಗಿಸಲು ಎಸ್. ಡಿ. ಪಿ. ಐ ಆಗ್ರಹ
ಮಂಗಳೂರು, ಮೇ.18, 2021: ತೌಕ್ತೆ ಚಂಡಮಾರುತದಿಂದ ನಡೆದ ಟಗ್ ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ತಲಾ 25 ಲಕ್ಷ ರೂ ಪರಿಹಾರ ಒದಗಿಸಬೇಕೆಂದು ಎಸ್. ಡಿ. ಪಿ. ಐ ಆಗ್ರಹಿಸಿದೆ.
ತೌಕ್ತೆ ಚಂಡಮಾರುತದ ಬಗ್ಗೆ ಮುನ್ಸೂಚನೆ ಇದ್ದರೂ ಸಮುದ್ರಕ್ಕೆ ಸಿಬ್ಬಂದಿಗಳಿಗೆ ಇಳಿಯಲು ಅನುಮತಿ ನೀಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಿ
ಅಥಾವುಲ್ಲಾ ಜೋಕಟ್ಟೆ
ತೌಕ್ತೆ ಚಂಡಮಾರುತದ ಬಗ್ಗೆ ಒಂದು ದಿನ ಮುಂಚಿತವಾಗಿಯೇ ಹವಾಮಾನ ಇಲಾಖೆ ಎಚ್ಚರಿಸಿತ್ತು. ವಾಯುಪಡೆ ಹಾಗೂ ನೌಕಾಪಡೆಯ ಚಂಡಮಾರುತದ ಗಂಭೀರತೆಯ ಬಗ್ಗೆ ಎಚ್ಚರಿಕೆಯ ಸಂದೇಶಗಳನ್ನು ಮೈಕ್ ಮೂಲಕ ಎಚ್ಚರಿಕೆ ನೀಡಿ ಎಲ್ಲಾ ಟಗ್ ಗಳು ಮೀನುಗಾರರು ಸಮುದ್ರ ದಡಕ್ಕೆ ಬರಬೇಕೆಂದು ಸೈರನ್ ಮೊಳಗಿಸಿ ಅಪಾಯದ ಕರೆಗಂಟೆಯನ್ನು ಬಾರಿಸಿತ್ತು. ಆದರೆ ಇದನ್ನು ಮೀರಿ ದುರಂತಕ್ಕೀಡಾದ ಟಗ್ ಗಳಿಗೆ ಸಮುದ್ರಕ್ಕಿಳಿಯಲು ಅನುಮತಿ ನೀಡಿದವರು ಯಾರು? ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ದ.ಕ ಜಿಲ್ಲಾದ್ಯಕ್ಷ ಅಥಾವುಲ್ಲಾ ಜೋಕಟ್ಟೆ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಕಂದಾಯ ಸಚಿವರು ನಡೆಸಿದ ಎಂ.ಆರ್.ಪಿ.ಎಲ್ ಮತ್ತು ಎನ್.ಎಂ.ಪಿ.ಟಿ ಅಧಿಕಾರಿಗಳ ಸಭೆಯಲ್ಲಿ ಈ ಎರಡೂ ಕಂಪನಿಗಳ ಹಿರಿಯ ಅಧಿಕಾರಿಗಳು ಈ ದುರಂತದ ಬಗ್ಗೆ ಪರಸ್ಪರ ಆರೋಪ ಪ್ರತ್ಯಾರೋಪ ನಡೆಸಿ ತಮ್ಮ ತಪ್ಪನ್ನು ಮರೆಮಾಚಲು ಯತ್ನಿಸುತ್ತಿರುವ ಬಗ್ಗೆ ಪತ್ರಿಕೆಯಲ್ಲಿ ವರದಿ ಯಾಗಿದೆ. ಹಾಗಾಗಿ ಈ ಪ್ರಕರಣದಲ್ಲಿ ಯಾರು ತಪ್ಪಿತಸ್ತರಿದ್ದಾರೋ ಅವರ ಬಗ್ಗೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಅಥಾವುಲ್ಲಾ ಜೋಕಟ್ಟೆ ಒತ್ತಾಯಿಸಿದ್ದಾರೆ.
ಇದೇ ವೇಳೆ ಮನೆ ಮಠ ಕಳೆದುಕೊಂಡವರಿಗೆ ಸರಕಾರ ಘೋಷಿಸಿರುವ ಪರಿಹಾರವನ್ನು ಐದು ಲಕ್ಷದಿಂದ ಹತ್ತು ಲಕ್ಷ ರೂಪಾಯಿಗೆ ಏರಿಸಬೇಕು, ತುರ್ತು ಪರಿಹಾರ ಮೊತ್ತವಾಗಿ ಘೋಷಿಸಿರುವ 10 ಸಾವಿರ ರುಪಾಯಿ ಪರಿಹಾರವನ್ನು 25 ಸಾವಿರ ರುಪಾಯಿ ಗಳಿಗೆ ಏರಿಸಿ ಅದನ್ನು ಶೀಘ್ರವಾಗಿ ನೀಡಬೇಕು ಎಂದು ಅವರು ಹೇಳಿದರು.