ಕರ್ನಾಟಕ ರಾಜ್ಯ ಕಡಲತೀರ ವಲಯ ನಿರ್ವಹಣಾ ಯೋಜನೆ: ಸಲಹೆ ಸೂಚನೆ ಆಹ್ವಾನ
ಕಾರವಾರ, ಮೇ 06, 2021: ಕರ್ನಾಟಕ ರಾಜ್ಯ ಕಡಲತೀರ ವಲಯ ನಿರ್ವಹಣಾ ಯೋಜನೆಯ ಕರಡು ಕುರಿತಂತೆ ಉತ್ತರ ಕನ್ನಡ ಜಿಲ್ಲೆಯ ಪಾಲುದಾರರು ಮತ್ತು ಸಾರ್ವಜನಿಕರಿಂದ ಯಾವುದೇ ತಕರಾರು, ಸಲಹೆ ಮತ್ತು ಅನಿಸಿಕೆಗಳಿದ್ದಲ್ಲಿ ಅರಣ್ಯ ಪರಿಸರ ಮತ್ತು ಜೀವಶಾಶ್ತ್ರ ಇಲಾಖೆಗೆ ಸಲ್ಲಿಸಬಹುದು ಎಂದು ಇಲಾಖೆಯ ಪ್ರಾದೇಶಿಕ ನಿರ್ದೇಶಕರಾದ ಪ್ರಸನ್ನ ಕೆ. ಪಟಗಾರ ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ಕಡಲತೀರ ವಲಯ ನಿರ್ವಹಣಾ ಯೋಜನೆಗಳನ್ನು ತಯಾರಿಸುವ ಕಾರ್ಯವನ್ನು ಚೆನ್ನೈ ನ ನ್ಯಾಷನಲ್ ಸೆಂಟರ್ ಫಾರ್ ಸಸ್ಟೈನಬಲ್ ಕೋಸ್ಟಲ್ ಮ್ಯಾನೇಜ್ಮೆಂಟ್ (NCSCM) ಗೆ ವಹಿಸಿ ಕೊಟ್ಟಿದ್ದು, ಸದರಿ ಸಂಸ್ಥೆಯು 1:25000 ಅಳತೆಯ ನಕ್ಷೆಯಲ್ಲಿ ಕರ್ನಾಟಕ ರಾಜ್ಯ ಕಡಲತೀರ ವಲಯ ನಿರ್ವಹಣಾ ಯೋಜನೆ ಕರಡು (CZMP) ಯನ್ನು ತಯಾರಿಸಿರುತ್ತದೆ.
ಈ ಯೋಜನೆಯ ವಿದ್ಯುನ್ಮಾನ ಪ್ರತಿ ಹಾಗೂ ಮತ್ತಿತರ ದಾಖಲೆಗಳು ಪ್ರಾಧಿಕಾರದ ವೆಬ್ಸೈಟ್ http://ksczma.karnataka.gov.in ನಲ್ಲಿ ಲಭ್ಯವಿರುತ್ತವೆ.
ಆದ್ದರಿಂದ ಎಲ್ಲಾ ಪಾಲುದಾರರು ಮತ್ತು ಸಾರ್ವಜನಿಕರು ಕರ್ನಾಟಕ ರಾಜ್ಯ ಕಡಲತೀರ ವಲಯ ನಿರ್ವಹಣಾ ಯೋಜನೆ ಕರಡು (CZMP) ನ್ನು ಪರಿಶೀಲಿಸಿ, ಸಲಹೆ, ಸೂಚನೆ ಆಕ್ಷೇಪಣೆ ಅಥವಾ ಅನಿಸಿಕೆಗಳೇನಾದರು ಇದ್ದಲ್ಲಿ ಅವುಗಳನ್ನು ಲಿಖಿತ ರೂಪದಲ್ಲಿ, ವಿಶೇಷ ನಿರ್ದೇಶಕರು (ತಾಂತ್ರಿಕ ಕೋಶ), ಅರಣ್ಯ, ಪರಿಸರ ಮತ್ತು ಜೀವಶಾಶ್ತ್ರ ಇಲಾಖೆ, ಕೊಠಡಿ ಸಂಖ್ಯೆ:710, 7ನೇ ಮಹಡಿ ಬಹುಮಹಡಿ ಕಟ್ಟಡ, ಬೆಂಗಳೂರು ಇವರಿಗೆ ಅಧಿಸೂಚನೆ ಪ್ರಕಟಣೆಗೊಂಡಂತಹ 27-4-2021 ದಿನಾಂಕದಿಂದ 60 ದಿನಗಳೊಳಗಾಗಿ ತಲುಪುವಂತೆ ಕಳುಹಿಸಿ ಕೊಡಬಹುದಾಗಿದೆ ಎಂದು ಹೇಳಿದ್ದಾರೆ.
ಅದೇ ರೀತಿ ತಕರಾರು, ಸಲಹೆ ಮತ್ತು ಅನಿಸಿಕೆಗಳನ್ನು ನಿಗದಿತ ಸಮಯಕ್ಕೆ ಮುಂಚಿತವಾಗಿ [email protected] ಗೆ ಇ-ಮೇಲ್ ಕಳುಹಿಸುವ ಮೂಲಕವೂ ಸಲ್ಲಿಸಬಹುದಾಗಿರುತ್ತದೆ.
ನಿಗದಿತ ಸಮಯದ ನಂತರ ಸ್ವೀಕೃತವಾಗುವ ತಕರಾರು, ಸಲಹೆ ಮತ್ತು ಅನಿಸಿಕೆ ಇತ್ಯಾದಿಗಳನ್ನು ಪರಿಗಣಿಸಲಾಗುವುದಿಲ್ಲ.