ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ, ಕೂಡಲೇ ತುರ್ತು ಕ್ರಮಕ್ಕೆ ಎಸ್‌ಡಿಪಿಐ ಆಗ್ರಹ

 ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ, ಕೂಡಲೇ ತುರ್ತು ಕ್ರಮಕ್ಕೆ ಎಸ್‌ಡಿಪಿಐ ಆಗ್ರಹ
Share this post

ಚಾಮರಾಜನಗರ ದುರಂತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರುಕಳಿಸಿದರೆ ಜಿಲ್ಲಾಡಳಿತ ನೇರ ಹೊಣೆ: ಎಸ್‌ಡಿಪಿಐ

ಮಂಗಳೂರು, ಮೇ 03, 2021: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಕ್ಸಿಜನ್ ಮುಂದಿನ ಇಪ್ಪತ್ತನಾಲ್ಕು ಗಂಟೆಗಳಿಗೆ ಮಾತ್ರ ದಾಸ್ತಾನು ಇದೆ ಎಂದು ಇಂದು ಜಿಲ್ಲಾಧಿಕಾರಿ ಡಾಕ್ಟರ್ ಕೆ ವಿ ರಾಜೇಂದ್ರ ಅವರ ಹೇಳಿಕೆ ಜಿಲ್ಲೆಯ ಜನತೆಯನ್ನು ಆತಂಕಕ್ಕೀಡು ಮಾಡಿದೆ, ಇದು ಸರಕಾರ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ ಎಂದು ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್ಎಚ್ ಶಾಹುಲ್ ಹಮೀದ್ ತಿಳಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಿಂದ ಇಪ್ಪತ್ತಕ್ಕೂ ಹೆಚ್ಚು ಕೋವಿಡ್ ಸೋಂಕಿತರು ಮ್ರತಪಟ್ಟ ಘಟನೆ ನಮ್ಮ ಮುಂದೆ ಜೀವಂತ ಇರುವಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ಸಮಸ್ಯೆ ಇರುವುದು ಆರೋಗ್ಯ ಕ್ಷೇತ್ರದಲ್ಲಿ ಮುಂದುವರಿದ ಜಿಲ್ಲೆಯಾದ ನಮ್ಮ ಜಿಲ್ಲೆಯ ಜನತೆಯನ್ನು ಆಂತಂಕಕ್ಕೀಡು ಮಾಡಿದೆ .ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲೇ ಅತೀ ಹೆಚ್ಚು ಮೆಡಿಕಲ್ ಕಾಲೇಜು, ಆರೋಗ್ಯ ಕೇಂದ್ರ ಹಾಗೂ ಆಕ್ಸಿಜನ್ ತಯಾರಿಕಾ ಘಟಕಗಳು ಅಸ್ತಿತ್ವದಲ್ಲಿ ಇದ್ದರೂ ಇಲ್ಲಿ ಇಂದು ತುರ್ತು ಅಗತ್ಯ ಇರುವ ಆಕ್ಸಿಜನ್ ಕೊರತೆ ಸಂಭವಿಸಿರುವುದು ಜಿಲ್ಲಾಡಳಿತದ ನಿರ್ಲಕ್ಷ್ಯ ಧೋರಣೆ ಹಾಗೂ ಅಸಹಾಯಕತೆ ಯನ್ನು ತೋರಿಸುತ್ತದೆ, ಎಂದು ಹೇಳಿದರು.

ಆರೋಗ್ಯ ,ಶಿಕ್ಷಣ ಹಬ್ ಎಂದು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ಪರಿಸ್ಥಿತಿ ಆದರೆ ಉಳಿದ ಜಿಲ್ಲೆಗಳ ಪಾಡೇನು ಎಂದು ಶಾಹುಲ್ ಹಮೀದ್ ಪ್ರಶ್ನಿಸಿದ್ದಾರೆ .

“ನಮ್ಮ ಜಿಲ್ಲೆಯ ರೋಗಿಗಳಲ್ಲದೆ ಹೊರ ಜಿಲ್ಲೆಗಳ ಹಾಗೂ ನೆರೆಯ ರಾಜ್ಯಗಳಿಂದ ದಿನನಿತ್ಯ ನೂರಾರು ಮಂದಿ ಚಿಕಿತ್ಸೆಗಾಗಿ ಮಂಗಳೂರಿಗೆ ಬರುತ್ತಿದ್ದಾರೆ. ಕೋವಿಡ್ ಎರಡನೇ ಅಲೆಯ ಗಂಭೀರ ಪರಿಣಾಮದ ಬಗ್ಗೆ ಹಲವಾರು ತಜ್ಞರು, ಸಂಘಸಂಸ್ಥೆಗಳು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರೂ ಸರಕಾರ ಹಾಗೂ ಸಂಬಂದಪಟ್ಟ ಅಧಿಕಾರಿಗಳು ಸಮರ್ಥವಾದ ಪೂರ್ವ ಸಿದ್ದತೆ ಮಾಡದೆ ಅಮಾಯಕ ಜನರ ಅಮೂಲ್ಯ ಜೀವದೊಂದಿಗೆ ಚೆಲ್ಲಾಟ ಆಡಲು ಹೊರಟಿರುವುದು ದುರದ್ರಷ್ಟಕರ. ಒಂದು ವೇಳೆ ಚಾಮರಾಜನಗರದ ದುರಂತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರುಕಳಿಸಿದರೆ ಜಿಲ್ಲಾಡಳಿತವೇ ಸಂಪೂರ್ಣ ಹೊಣೆ ಹೊರಬೇಕಾದೀತು,” ಎಂದು ಎಚ್ಚರಿಸಿದರು.

ನಮ್ಮ ಜಿಲ್ಲೆಯಲ್ಲಿ ಆಕ್ಸಿಜನ್ ದಾಸ್ತಾನು ಇಡಲು ಬೇಕಾದಷ್ಟು ಪ್ಲಾಂಟ್ ಗಳು ಇರುವುದರಿಂದ ಜಿಲ್ಲಾಡಳಿತ ಕೂಡಲೇ ವಿಶೇಷ ಕಾಳಜಿ ವಹಿಸಿ ನೆರೆಯ ರಾಜ್ಯವಾದ ಕೇರಳದಿಂದ ಆಕ್ಸಿಜನ್ ತರಿಸಿ ದಾಸ್ತಾನು ಇಡಬೇಕು. ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಸಮರ್ಪಕವಾದ ಕಾರ್ಯಯೋಜನೆಗಳನ್ನು ಮಾಡುವ ಮೂಲಕ ಜನತೆಯ ಆತಂಕವನ್ನು ದೂರ ಮಾಡಬೇಕು.ಇದಕ್ಕಾಗಿ ಎಸ್ಡಿಪಿಐ ಜಿಲ್ಲಾಡಳಿತ ದೊಂದಿಗೆ ಕೈಜೋಡಿಸಲು ಸದಾ ಸಿದ್ದ ಎಂದು ಶಾಹುಲ್ ಹಮೀದ್ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!