ಕೋವಿಡ್ ಲಾಕ್ಡೌನ್: ನಿಯಮಗಳೊಂದಿಗೆ ಕ್ಯಾಂಪ್ಕೊ ಸರಕು ಖರೀದಿ ಮುಂದುವರಿಕೆ
ಮಂಗಳೂರು, ಏಪ್ರಿಲ್ 27, 2021: ಆತಂಕ ಹುಟ್ಟಿಸಿರುವ ಕೊರೋನಾ 2ನೇ ಅಲೆಯಿಂದ ರಾಜ್ಯದ ಜನತೆಯನ್ನು ರಕ್ಷಿಸಲು ಕರ್ನಾಟಕ ಸರಕಾರವು ಏಪ್ರಿಲ್ 28 ರಿಂದ ರಿಂದ ರಾಜ್ಯಾದ್ಯಂತ ಲಾಕ್ಡೌನ್ ಹೇರಿದೆ.
ಹೀಗಿದ್ದೂ, ಕೃಷಿ ಉತ್ಪನ್ನಗಳ ಮಾರಾಟ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ತನ್ನ ಎಲ್ಲಾ ಶಾಖೆಗಳಲ್ಲಿ ಸರಕುಗಳ ಖರೀದಿಯನ್ನು ಮುಂದುವರಿಸಲಿದೆ. ಆದರೆ ಸದಸ್ಯರ ಮತ್ತು ಸಿಬ್ಬಂದಿಗಳ ಆರೋಗ್ಯದ ದೃಷ್ಟಿಯಿಂದ ಈಗಾಗಲೇ ಕೆಲವೊಂದು ನಿಬಂಧನೆಗಳನ್ನು ರೂಪಿಸಲಾಗಿದ್ದು, ಆ ಪ್ರಕಾರ ಸಂಸ್ಥೆಯು ಕಾರ್ಯಾಚರಿಸಲಿದೆ ಮತ್ತು ಮುಂದಿನ ಆದೇಶದ ವರೆಗೆ ಈ ನಿಯಮಗಳು ಅನ್ವಯವಾಗಲಿದೆ.
- ಶಾಖೆಗಳಲ್ಲಿನ ಸರಕು ಖರೀದಿಯು ಸರದಿಯ ಪ್ರಕಾರ ನಡೆಯಲಿದ್ದು, ಪ್ರತಿದಿನ ಗರಿಷ್ಠ 25 ಸದಸ್ಯರಿಂದ ತಲಾ 1 ಕ್ವಿಂಟಾಲ್ ಅಡಿಕೆ ಮಾತ್ರ ಖರೀದಿಸಲಾಗುವುದು. ಒಬ್ಬ ಸದಸ್ಯ ಗರಿಷ್ಠ ವಾರದಲ್ಲೊಂದು ಬಾರಿ 1 ಕ್ವಿಂಟಾಲ್ ಅಡಿಕೆಯನ್ನು ಮಾತ್ರವೇ ಮಾರಾಟ ಮಾಡಬಹುದಾಗಿದೆ. ಸದಸ್ಯರು ತಮ್ಮ ವ್ಯಾಪ್ತಿಯ ಶಾಖೆಗಳಿಗೆ ಕರೆ ಮಾಡಿ ತಮ್ಮ ಸರದಿಯನ್ನು ನಿಗದಿಪಡಿಸಿಕೊಳ್ಳಬಹುದು.
- ಸಂಸ್ಥೆಯ ಯಾವುದೇ ಶಾಖೆಗಳಲ್ಲಿ ಕಾಳುಮೆಣಸು ಮತ್ತು ರಬ್ಬರ್ ಖರೀದಿ ನಡೆಯುವುದಿಲ್ಲ.
- ಎಲ್ಲಾ ಶಾಖೆಗಳಲ್ಲಿ ಕೊಕ್ಕೊ ಖರೀದಿ ಎಂದಿನಂತೆ ನಡೆಯಲಿದೆ.
ಮಾರುಕಟ್ಟೆಯಲ್ಲಿ ಅಡಿಕೆಯ ಬೆಲೆ ಕುಸಿತದ ಸಾಧ್ಯತೆಯ ಬಗ್ಗೆ ವದಂತಿಗಳು ಹರಡುತ್ತಿದ್ದು, ಇದು ಖಾಸಗಿ ವರ್ತಕರು ಕೃಷಿಕರನ್ನು ವಂಚಿಸಲು ಮಾಡುತ್ತಿರುವ ಹುನ್ನಾರವಾಗಿದೆ. ಅಡಿಕೆಯ ದರವು ಸ್ಥಿರವಾಗಿದ್ದು, ಬೆಳೆಗಾರರು ಇಂತಹ ಯಾವುದೇ ವದಂತಿಗಳಿಗೆ ಕಿವಿಗೊಡಬಾರದಾಗಿ ಸಂಸ್ಥೆಯ ಅಧ್ಯಕ್ಷರು ವಿನಂತಿಯನ್ನು ಮಾಡಿದ್ದಾರೆ.
ಸಂಸ್ಥೆಯ ಎಲ್ಲ ಸದಸ್ಯರು ಇದನ್ನು ಗಮನಿಸಿ ಸಹಕರಿಸಬೇಕಾಗಿ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯವರು ಕೇಳಿಕೊಂಡಿದ್ದಾರೆ.