ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆಯಡಿ ಕಾರ್ಮಿಕರಿಗೆ ನೋಂದಣಿ ಅಭಿಯಾನ
ಮಂಗಳೂರು, ಎಪ್ರಿಲ್ 22, 2021: ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯು ಅನುಷ್ಠಾನಗೊಳಿಸುತ್ತಿರುವ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆಯಡಿ ಅಸಂಘಟಿತ ವಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ನೋಂದಣಿ ಅಭಿಯಾನವನ್ನು ಎಪ್ರಿಲ್ 19 ರಂದು ನಗರದ ಕಾರ್ಮಿಕ ಭವನದಲ್ಲಿ ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಕೆ.ಬಿ. ನಾಗರಾಜ ಉದ್ಘಾಟಿಸಿದರು.
ಆಟೋ ಚಾಲಕರು, ವಾಣಿಜ್ಯ ವಾಹನ ಚಾಲಕರು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು, ಹಮಾಲರು, ಟೈಲರುಗಳು, ಚಿಂದಿ ಆಯುವವರು, ಗೃಹ ಕಾರ್ಮಿಕರು, ಮೆಕಾನಿಕ್‍ಗಳು, ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು, ಮಂಡಕ್ಕಿ ಭಟ್ಟಿಯಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರು, ಇಟ್ಟಿಗೆ ಭಟ್ಟಿ ಕಾರ್ಮಿಕರು, ಬಿಸಿಯೂಟ ಸಿದ್ದಪಡಿಸುವ ಅಡುಗೆ ಸಹಾಯಕರು, ಬೀದಿ ಬದಿ ವ್ಯಾಪಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು, ಕೃಷಿ ಕಾರ್ಮಿಕರು, ಸ್ವಯಂ ಉದ್ಯೋಗಿಗಳು, ಬೀಡಿ ಕಾರ್ಮಿಕರು, ಕೈಮಗ್ಗ ಕಾರ್ಮಿಕರು, ಧ್ವನಿ ಮತ್ತು ದೃಶ್ಯ ಕಾರ್ಮಿಕರು, ಗೃಹ ಆಧಾರಿತ ಕಾರ್ಮಿಕರು ನೋಂದಾಯಿಸುವಂತೆ ಹಾಗೂ ಈ ಮೂಲಕ ಪಿಂಚಣಿ ಸೌಲಭ್ಯ ಪಡೆಯುವಂತೆ ಅವರು ತಿಳಿಸಿದರು.
ಕಾರ್ಮಿಕ ಅಧಿಕಾರಿಗಳಾದ ವಿಲ್ಮಾ ಎಲಿಜಬೆತ್ ತಾವ್ರೋ, ಅಮರೇಂದ್ರ, ಹಿರಿಯ ಕಾರ್ಮಿಕ ನಿರೀಕ್ಷಕ ಜೀವನ್ ಕುಮಾರ್, ವಿರೇಂದ್ರ ಕುಂಬಾರ, ಸಿಬ್ಬಂದಿ ಹಾಗೂ ಕಾರ್ಮಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.