ಕೋವಿಡ್ ಲಸಿಕೆ ಕೊರತೆ ಆಗದಂತೆ ಕ್ರಮ: ಪ್ರಿಯಾಗಾ ಎಂ
ಕಾರವಾರ ಏಪ್ರಿಲ್ 15, 2021: ಕಳೆದ ವಾರ ಜಿಲ್ಲೆಯಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ಕಂಡುಬಂದಿದ್ದು, 3 ಸಾವು ದಾಖಲಾಗಿದೆ. ಪ್ರತಿ ದಿನ ಜಿಲ್ಲೆಯಲ್ಲಿ 2000-2200 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗುತಿದ್ದು 40-70 ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿವೆ. ಜಿಲ್ಲೆಯಲ್ಲಿ 250 ಆ್ಯಕ್ಟಿವ್ ಕೇಸ್‍ಗಳು ಇದ್ದು ಲಸಿಕೆಯ ಕೊರತೆ ಕಂಡುಬರುತ್ತಿದ್ದು ಇದರತ್ತ ಗಮನ ಹರಿಸಬೇಕೆಂದು ಜಿಲ್ಲಾ ಆರೋಗ್ಯಾಧಿಕಾರಿ ಮಾಡಿದ ಮನವಿಗೆ ಆದಷ್ಟು ಬೇಗ ಲಸಿಕೆ ಪುರೈಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಪ್ರಿಯಾಗಾ ಎಂ ತಿಳಿಸಿದರು.
ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅದ್ಯಕ್ಷೆ ಜಯಶ್ರೀ ಮೊಗೇರ್ ಅವರ ಅದ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಯಲ್ಲಿ ವಿವಿಧ ಇಲಾಖೆ ಅಭಿವೃದ್ಧಿ ಕಾರ್ಯಕ್ರಮಗಳಡಿಯಲ್ಲಿ ಮಾ.2021 ರವರೆಗೆ ಸಾಧಿಸಿದ ಪ್ರಗತಿಯ ವರದಿಯನ್ನು ಪರಿಶೀಲಿಸಿ ಅವರು ಮಾತನಾಡಿದರು.
ಜಿಲ್ಲೆಯ ಆರೋಗ್ಯ ಇಲಾಖೆ ಸೇರಿದಂತೆ ಇತರೆ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಇರುವ ನೌಕರರಿಗೆ ಪಿಎಫ್ ಇಎಸ್‍ಐ ಕಡ್ಡಾಯವಾಗಿ ಸಿಗಬೇಕು. ಒಂದು ವೇಳೆ ಸಿಗದೇ ಇರುವವರ ಮಾಹಿತಿಯನ್ನು ಜಿಲ್ಲಾ ಪಂಚಾಯತ್ ಆಡಳಿತಕ್ಕೆ ಗಮನಕ್ಕೆ ತರಬೇಕು ಎಂದರು.
ಶಿಕ್ಷಣ ಇಲಾಖೆ:
ಶಿಕ್ಷಣ ಇಲಾಖೆಗೆ ಸಂಬಂದಿಸಿದಂತೆ 6-9 ನೇ ತರಗತಿ ನಡೆಯುತ್ತಿಲ್ಲ 10 ನೇ ತರಗತಿಗಳು ಮಾತ್ರ ನಡೆಯುತ್ತಿದ್ದು ಬಸ್ ಮುಷ್ಕರ ಇರುವುದರಿಂದ 20% ಹಾಜರಾತಿಯಲ್ಲಿ ಇಳಿಕೆ ಕಾಣುತಿದ್ದೇವೆ. ಪರೀಕ್ಷೆ ದೃಷ್ಠಿಕೋನದಿಂದ ಮಕ್ಕಳಿಗೆ ಪಠ್ಯಗಳನ್ನ ಪುನರಾವರ್ತಿಸಲಾಗುತ್ತಿದೆ. ಶಿಕ್ಷಕರು ಹಾಗೂ ಮಕ್ಕಳಿಗೆ ಕೋವಿಡ್ ಟೆಸ್ಟ್ ಮಾಡಲಾಗುತ್ತಿದ್ದು, ಪಾಸಿಟಿವ್ ಬಂದ ಮಕ್ಕಳನ್ನ ಹೊಂ ಐಸೋಲೇಷನ್ ಮಾಡಲಾಗುತ್ತಿದೆ. ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯ ಮಾಡಲಾಗಿದೆ ಎಂದು ಕಾರವಾರ ಡಿ ಡಿ ಪಿ ಐ ಹರೀಶ ಗಾಂವಕರ್ ಮಾಹಿತಿ ನೀಡಿದರು.
ಕೃಷಿ- ತೋಟಗಾರಿಕೆ:
ಮೇ ತಿಂಗಳ ಒಳಗಾಗಿ ರಸಗೊಬ್ಬರ, ಬೀಜಗಳನ್ನ ದಾಸ್ತಾನು ಮಾಡಲಾಗುವುದು ಹಾಗೂ ಗೊಬ್ಬರವನ್ನ ಹಳೆಯ ಬೆಲೆಯಲ್ಲಿಯೇ ಮಾರಾಟ ಮಾಡಲಾಗುವುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ ಮಾಹಿತಿ ನೀಡಿದರೆ, ತೋಟಗಾರಿಕಾ ಇಲಾಖೆ ಅಧಿಕಾರಿ 45 ಎಕರೆ ಮಾವಿನ ಬೆಳೆ ನಾಶವಾಗಿರುವ ಬಗ್ಗೆ ವರದಿ ಮಾಡಿದರು.
ರೇಷ್ಮೆ:
ಜಿಲ್ಲೆಯಲ್ಲಿ 280 ಎಕರೆ ರೇಷ್ಮೆ ಬೆಳೆಯುವ ಭೂಮಿ ಇದ್ದು 436 ಬೆಳೆಗಾರರಿದ್ದಾರೆ. ರೇಷ್ಮೆ ಬೆಳೆಗೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ ಎಂದು ರೇಷ್ಮೆ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ದೊಡ್ಮನಿ, ರೇಷ್ಮೆ ಲಾಭದಾಯಕ ಬೆಳೆಯಾಗಿದ್ದು ರೈತರಿಗೆ ಇದರ ಬಗ್ಗೆ ಅರಿವು ಮೂಡಿಸುವುದು ಅಧಿಕಾರಿಗಳ ಕರ್ತವ್ಯ ಎಂದರು.
ಪಶುಸಂಗೋಪನೆ:
ಪಶುಪಾಲನೆ ಇಲಾಖಾಧಿಕಾರಿ ಮಾತನಾಡಿ ಕೃತಕ ಗರ್ಬಧಾರಣೆ , ಮೇವು ಅಭಿವೃದ್ಧಿ, ಕಾಲುಬಾಯಿ ರೋಗದ ವಿರುದ್ಧ ಲಸಿಕೆ, ದೊಡ್ಡ ರೋಗದ ಮೂಲ ತಪಾಸಣೆ ಇವುಗಳಲ್ಲಿ 100% ಸಾಧನೆ ಮಾಡಲಾಗಿದೆ ಎಂಬ ಮಾಹಿತಿ ನೀಡಿದರು.
ಹೆಸ್ಕಾಂ:
ಮುಂಬರುವ ಮಳೆಗಾಲದ ಪೂರ್ವ ಸಿದ್ದತೆಯಾಗಿ, ಕಂಬಗಳು, ಲೈನ್, ಟಿಸಿ ಇವುಗಳ ಮೇಲೆ ಇಗಾಗಲೇ ಮುಂಜಾಗ್ರತೆ ವಹಿಸಲಾಗುತ್ತಿದೆ. ಕರಾವಳಿ ಭಾಗದಲ್ಲಿ ಬುದವಾರ ವಿದ್ಯುತ್ ವ್ಯತ್ಯೆಯಗೊಳಿಸಿ ದುರಸ್ತಿ ಕಾರ್ಯ ನಡೆಸಲಗುತ್ತದೆ, ಇನ್ನುಳಿದ ಕಡೆ ಪತ್ರಿಕೆಯ ಮೂಲಕ ಸಾರ್ವಜನಿಕರಿಗೆ ತಿಳಿಸಿ ದುರಸ್ತಿ ಮಡಲಾಗಿತ್ತಿದೆ ಎಂದು ಹೆಸ್ಕಾಂ ಅಧಿಕಾರಿ ತಿಳಿಸಿದರು.
ಸಾಮಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಬಸವರಾಜ ದೊಡ್ಮನಿ ಮೊರಾರ್ಜಿ ವಸತಿಶಾಲೆಗಳ ಕುರಿತು ಮಾತನಾಡಿ, ಮೊದಲು ಜಿಲ್ಲೆಯಲ್ಲಿನ ಆಯಾ ತಾಲೂಕಿನ ಮಕ್ಕಳಿಗೆ ಆದ್ಯತೆ ನೀಡಬೇಕು ಎಂದು ಗೈಡ್‍ಲೈನ್ ಇದೆ ಆದರೆ ಹಾವೇರಿ, ಗದಗದ ವಿದ್ಯಾರ್ಥಿಗಳನ್ನ ಶಿರಸಿಗೆ ಹಾಗೂ ಶಿರಸಿಯವರನ್ನ ಮುರುಡೇಶ್ವರಕ್ಕೆ ಹಾಕಲಾಗಿದೆ ಇಂತಹ ಪ್ರಕರಣಗಳ ಬಗ್ಗೆ ಗಮನಹರಿಸಬೇಕೆಂದು ಸಮಾಜ ಕಲ್ಯಾಣ ಇಲಾಖೆಗೆ ಸೂಚಿಸಿದರು.
ಇದಕ್ಕೆ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎಸ್. ಪುರುಷೋತ್ತಮ ಉತ್ತರಿಸಿ, ಆನ್ ಲೈನ್ ಸೆಲೆಕ್ಷನ್ ಇರುವ ಕಾರಣ ಬೆಂಗಳೂರಿನ ಕೇಂದ್ರ ಕಚೇರಿಯಿಂದಲೇ ಹೀಗೆ ಆಗುತ್ತಿದೆ, ಈ ವಿಷಯ ಕುರಿತು ಕೇಂದ್ರ ಕಚೇರಿಯೊಂದಿಗೆ ಚರ್ಚಿಸಲಾಗುವುದು. ಜಿಲ್ಲೆಯಲ್ಲಿ 210 ಎಸ್‍ಎಸ್‍ಎಲ್‍ಸಿ ಹಾಗೂ 122 ಡಿಗ್ರೀ ಓದುವ ವಿಧ್ಯಾರ್ಥಿಗಳು ಹಾಸ್ಟೆಲ್‍ಗಳಲ್ಲಿ ಇದ್ದಾರೆ ಎಂದರು.
ಅಕ್ಷರ ದಾಸೋಹ:
ಅಡುಗೆ ಕೆಲಸದವರಿಗೆ 10 ತಿಂಗಳ ವೇತನ ನೀಡಲಾಗಿದೆ. ಅಕ್ಕಿ ಹಾಗೂ ಗೋಧಿಯನ್ನು 90% ವಿತರಣೆ ಮಾಡಿದ್ದು ಎಣ್ಣೆ, ಬೇಳೆ,ಉಪ್ಪು ಸರಬರಾಜು ಆಗಿಲ್ಲ ಎಂದು ಅಧಿಕಾರಿ ತಿಳಿಸಿದರು.
ಸಭೆಯಲ್ಲಿ ಜಿ ಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಉಷಾ ನಾಯ್ಕ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಚೈತ್ರಾ ಕೊಟಾರಕರ್ ಉಪಸ್ಥಿತರಿದ್ದರು.