ಫರಂಗಿಪೇಟೆ ಮಸೀದಿಯ ಮುಅಝ್ಝಿನ್ ರಿಗೆ ದುಷ್ಕರ್ಮಿಗಳಿಂದ ಹಲ್ಲೆ: ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಖಂಡನೆ
ಮಂಗಳೂರು, ಮಾರ್ಚ್ 30, 2021: ಮಂಗಳೂರು ಸಮೀಪದ ಫರಂಗಿಪೇಟೆ ಯ ಬಿರ್ರುಲ್ ವಾಳಿದೈನ್ ಮಸೀದಿಯ ಮುಅಝ್ಝಿನ್ ರವರ ಮೇಲೆ ನಡೆದ ಹಲ್ಲೆಯು ಮತೀಯ ಸೌಹಾರ್ದವನ್ನು ಕೆಡಿಸುವ ಹುನ್ನಾರವಾಗಿದೆ ಎಂದು ಮಾಜಿ ಮೇಯರ್ ಹಾಗೂ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಅಧ್ಯಕ್ಷರು ಕೆ ಅಶ್ರಫ್ ಹೇಳಿದ್ದಾರೆ.
ಮುಸ್ಲಿಮ್ ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ನಡೆಸಿ ಆ ಮೂಲಕ ಒಂದು ಧರ್ಮದ ಜನರ ಭಾವನೆಗಳನ್ನು ಕೆರಳಿಸಿ, ಕೋಮು ಪ್ರಚೋದನೆಗೆ ಅವಕಾಶ ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ. ಇದನ್ನು ಮುಸ್ಲಿಮ್ ಒಕ್ಕೂಟವು ತೀವ್ರವಾಗಿ ಖಂಡಿಸುತ್ತದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಇಂತಹ ಹಲವಾರು ಕೋಮು ಪ್ರಚೋದನಾ ಕೃತ್ಯಗಳು ಅಲ್ಲಲ್ಲಿ ಕಾಣತೊಡಗಿವೆ. ಮೊದಲೇ ಕೋಮು ಸೂಕ್ಷ್ಮವಾದ ಈ ಜಿಲ್ಲೆಯಲ್ಲಿ ಇದರಿಂದಾಗಿ ಕೋಮು ಸೌಹಾರ್ದಕ್ಕೆ ಧಕ್ಕೆಯುಂಟಾಗುತ್ತಿವೆ. ಈ ಕೃತ್ಯವನ್ನು ಯಾರೇ ಮಾಡಿದರೂ, ಗ್ರಹ ಇಲಾಖೆ ಕೂಡಲೇ ಕಾನೂನಾತ್ಮಕ ಕ್ರಮಗಳನ್ನು ಜರುಗಿಸಿ ನ್ಯಾಯವನ್ನು ಒದಗಿಸಬೇಕು. ಇಲ್ಲವಾದಲ್ಲಿ ಜಿಲ್ಲಾ ಮುಸ್ಲಿಮ್ ಒಕ್ಕೂಟದಿಂದ ಜಿಲ್ಲಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.