ಪತ್ರಕರ್ತ ಪ್ರದೀಶ್ .ಎಚ್. ಮರೋಡಿ ಅವರಿಗೆ ಪ.ಗೋ.ಪ್ರಶಸ್ತಿ ಪ್ರದಾನ

 ಪತ್ರಕರ್ತ ಪ್ರದೀಶ್ .ಎಚ್. ಮರೋಡಿ ಅವರಿಗೆ ಪ.ಗೋ.ಪ್ರಶಸ್ತಿ ಪ್ರದಾನ
Share this post

ಮಂಗಳೂರು, ಮಾರ್ಚ್ 30, 2021: ಆಮಿಷಗಳಿಗೆ ಬಲಿಯಾಗದೇ ವಿಶ್ವಾಸರ್ಹತೆಯನ್ನು ಉಳಿಸಿಕೊಂಡು ಪತ್ರಕರ್ತರು ಕಾರ್ಯನಿರ್ವಹಿಸಬೇಕು. ವಿಶ್ವಾಸಾರ್ಹತೆಯೇ ಪತ್ರಕರ್ತರಿಗೆ ಜೀವಾಳ ಎಂದು ಮಂಗಳೂರು ವಿ.ವಿ.ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಹೇಳಿದ್ದಾರೆ.

ಮಂಗಳೂರು ಪತ್ರಿಕಾಭವನದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡುವ ಪ.ಗೋ. ಪ್ರಶಸ್ತಿಯನ್ನು ಪ್ರಜಾವಾಣಿ ವರದಿಗಾರ, ಪತ್ರಕರ್ತ ಪ್ರದೀಶ್. ಎಚ್. ಮರೋಡಿ ಅವರಿಗೆ  ಪ್ರದಾನ ಮಾಡಿ ಅವರು ಮಾತನಾಡಿದರು.

ಪತ್ರಕರ್ತರು ಮಾಡುವ ಪ್ರತಿಯೊಂದು ವರದಿಗಳು ನಂಬಿಕೆ ಮತ್ತು ವಿಶ್ವಾಸದಿಂದ ಕೂಡಿರಬೇಕು. ಪ.ಗೊ ಅವರು ಪತ್ರಕರ್ತರಿಗೆ ಆದರ್ಶಪ್ರಾಯರಾಗಿದ್ದರು. ಅವರ ಹೆಸರಿನಲ್ಲಿ ನೀಡುವ ಈ ಪ್ರಶಸ್ತಿ ಗ್ರಾಮೀಣ ಬದುಕಿನ ಬಗ್ಗೆ ಕನ್ನಡಿ ಹಿಡಿಯಲು ಪತ್ರಕರ್ತರಿಗೆ ಪ್ರೇರಣೆಯಾಗಲಿ ಎಂದು ಆಶಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪತ್ರಕರ್ತ ಪ್ರದೀಶ್.ಎಚ್.ಮರೋಡಿ ಪ.ಗೋ ಅವರ ಹೆಸರಿನಲ್ಲಿ ನೀಡುವ ಪ್ರಶಸ್ತಿ ಪಡೆದಿರುವುದು ಜೀವನದ ಅವಿಸ್ಮರಣೀಯ ಕ್ಷಣ ಎಂದು ಹೇಳಿದರು.

ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್  ಇಂದಾಜೆ  ಅಧ್ಯಕ್ಷತೆ ವಹಿಸಿದ್ದರು.    

ಮುಖ್ಯ ಅತಿಥಿಗಳಾಗಿ ಪಿಡಬ್ಲ್ಯುಡಿ ಸಹಾಯಕ ಕಾರ್ಯನಿರ್ವಾಹಕ  ಇಂಜಿನಿಯರ್ ಚಂದ್ರ ಶೇಖರಯ್ಯ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ಚಂದ್ರಶೇಖರಯ್ಯ ಅವರು 50 ಸಾವಿರ ರೂ. ಹಸ್ತಾಂತರಿಸಿದರು.

ಪ್ರಶಸ್ತಿಯ ಆಯ್ಕೆ ಸಮಿತಿ ಸದಸ್ಯರಾದ ಪುತ್ತೂರು ಡಾ.ಶಿವರಾಮ ಕಾರಂತರ ಬಾಲವನದ ವಿಶೇಷ ಕರ್ತವ್ಯಾಧಿಕಾರಿ ಡಾ.ಸುಂದರ ಕೇನಾಜೆ ಮತ್ತು ಮಂಗಳೂರು ವಿವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಡಾ.ಸೌಮ್ಯ ಕೆ.ಬಿ. ಕಿಕ್ಕೇರಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಪದ್ಯಾಣ ಗೋಪಾಲಕೃಷ್ಣ ಅವರ ಪುತ್ರ ಪದ್ಯಾಣ ರಾಮಚಂದ್ರ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ  ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ  ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಸದಸ್ಯೆ ಸತ್ಯವತಿ ಪ್ರಶಸ್ತಿ  ವಿಜೇತರ ಪರಿಚಯ ಮಾಡಿದರು.ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು.  ಕೋಶಾಧಿಕಾರಿ ಬಿ.ಎನ್.ಪುಷ್ಪರಾಜ್ ಕಾರ್ಯಕ್ರಮ ನಿರೂಪಿಸಿದರು.

2020ರ ಜೂನ್  25ರಂದು ಪ್ರಜಾವಾಣಿ ದಿನ  ಪತ್ರಿಕೆಯಲ್ಲಿ ಪ್ರಕಟವಾದ ಪತ್ರಕರ್ತ ಪ್ರದೀಶ್. ಎಚ್.ಮರೋಡಿ  ಅವರ ‘ಕೇಳುತ್ತಿಲ್ಲ ಮಲೆಯ ಮಕ್ಕಳ ಅಳಲು ‘ಎಂಬ ವರದಿಯು ಪ್ರತಿಷ್ಠಿತ  ಪ.ಗೋ. ಪ್ರಶಸ್ತಿಗೆ  ಆಯ್ಕೆಯಾಗಿದೆ.

ಪ್ರದೀಶ್. ಎಚ್. ಮರೋಡಿ ಪರಿಚಯ:
ಪ್ರಜಾವಾಣಿ ದಿನಪತ್ರಿಕೆಯ ಮಂಗಳೂರು ಕಚೇರಿಯಲ್ಲಿ ಉಪಸಂಪಾದಕ/ ವರದಿಗಾರರಾಗಿ ಸೇವೆ ಸಲ್ಲಿಸುತ್ತಿರುವ ಪ್ರದೀಶ್ ಎಚ್. ಮರೋಡಿ  ಅವರು ಪತ್ರಿಕೆ/ಮಾಧ್ಯಮ ಕ್ಷೇತ್ರದಲ್ಲಿ 13 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದಾರೆ.

2007ರಲ್ಲಿ ಪತ್ರಿಕೋದ್ಯಮ ಪ್ರವೇಶಿಸಿರುವ ಅವರು ಬೆಳ್ತಂಗಡಿ ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ ವರದಿಗಾರ (4 ವರ್ಷ), ಕಸ್ತೂರಿ ನ್ಯೂಸ್ ವಾಹಿನಿಯಲ್ಲಿ ಉಪಸಂಪಾದಕ (6 ತಿಂಗಳು), ಪಬ್ಲಿಕ್ ಟಿವಿಯಲ್ಲಿ ಉಪಸಂಪಾದಕರಾಗಿ (ಒಂದೂವರೆ ವರ್ಷ) ಸೇವೆ ಸಲ್ಲಿಸಿದರು.

2013ರಲ್ಲಿ ಪ್ರಜಾವಾಣಿಯ ವರದಿಗಾರ/ ಉಪಸಂಪಾದಕರಾಗಿ ಸೇರ್ಪಡೆಗೊಂಡು 2 ವರ್ಷ ಮೈಸೂರಿನಲ್ಲಿ ಇದೀಗ ಮಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಗ್ರಾಮೀಣ, ಮಾನವೀಯ, ಕೃಷಿ, ಸಿನಿಮಾ ವರದಿಗಾರಿಕೆ ಇವರ ಆಸಕ್ತಿಯ ಕ್ಷೇತ್ರಗಳಾಗಿವೆ.

ಎಂ.ಎ (ಎಂಸಿಜೆ), ಬಿ.ಎಡ್ ಪದವೀಧರರು.

Subscribe to our newsletter!

Other related posts

error: Content is protected !!