130 ಗ್ರಾಹಕರಿಗೆ ₹ 12 ಲಕ್ಷ ವಂಚನೆಗೈದ ಖದೀಮರ ಜಾಲ ಬೇಧಿಸಿದ ಉತ್ತರ ಕನ್ನಡ ಪೊಲೀಸ್

 130 ಗ್ರಾಹಕರಿಗೆ ₹ 12 ಲಕ್ಷ  ವಂಚನೆಗೈದ ಖದೀಮರ ಜಾಲ ಬೇಧಿಸಿದ ಉತ್ತರ ಕನ್ನಡ ಪೊಲೀಸ್
Share this post

ಕಾರವಾರ ಮಾರ್ಚ್ 22, 2021: ಅಮೋಘ ಟ್ರೇಡರ್ಸ್ ಹೆಸರಿನಲ್ಲಿ ನಗರದ 130 ಗ್ರಾಹಕರಿಂದ 12 ಲಕ್ಷ ಹಣ ಪಡೆದು ವಂಚನೆಗೈದ ತಮಿಳುನಾಡಿನ 6 ಜನ ವಂಚಕರ ಜಾಲವನ್ನು ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆಯಡಿ ಭೇದಿಸಿದ್ದು, ಓರ್ವನನ್ನು ಹುಬ್ಬಳ್ಳಿಯಲ್ಲಿ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಹೇಳಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚೆಗೆ ಜಾರಿಗೊಳಿಸಿರುವ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ (Banning of Unregulated Deposits Act 2017) (BUDS) ಅಡಿಯಲ್ಲಿ ಈ ವಂಚನೆಯ ಕುರಿತು ದಾಖಲಾದ ದೂರಿನ ಅನ್ವಯ ವಂಚನೆಗೆ ರೂಪುರೇಷೆ ಹೆಣೆಯುವ ಹಂತದಲ್ಲಿಯೇ ಪ್ರಕರಣವನ್ನು ಭೇದಿಸಿದ ರಾಜ್ಯದಲ್ಲಿಯೇ ಪ್ರಥಮ ಪ್ರಕರಣ ಇದಾಗಿದೆ ಎಂದರು.

ಆರ್ಥಿಕ, ಹಣಕಾಸು ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅವ್ಯವಹಾರ ನಡೆಸುವವರು ಇತ್ತೀಚೆಗೆ ಹೆಚ್ಚಾಗಿದ್ದಾರೆ. ಹೀಗಾಗಿ ಈ ವ್ಯವಹಾರಗಳಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಯಾರನ್ನು ಸಹಜವಾಗಿ ನಂಬಬಾರದು. ವಂಚನೆಗಳ ಕುರಿತು ಮಾಹಿತಿ ಬಂದಲ್ಲಿ ತಕ್ಷಣ ಪೊಲೀಸರಿಗೆ ತಿಳಿಸಬೇಕು

ಶಿವಪ್ರಕಾಶ್ ದೇವರಾಜು

ಬಂಧಿತ ವ್ಯಕ್ತಿ ಶಿವರಾಜು ರೆಂಗರಸು(೩೮) ಎಂದು ಗುರುತಿಸಲಾಗಿದ್ದು, ವಂಚನೆ ತಂಡದಲ್ಲಿದ್ದಂತಹ 6 ಜನರೂ ತಮಿಳುನಾಡಿನ ತಂಜಾವೂರಿನವರು ಎಂದು ತನಿಖೆಯಿಂದ ತಿಳಿದು ಬಂದಿದೆ ಎಂದರು.

ಪ್ರಕರಣದ ಹಿನ್ನೆಲೆ:

ಬಂಧಿತ ಆರೋಪಿ ಶಿವರಾಜು ರೆಂಗರಸು, ನಾಸೀರ್ ಮತ್ತು ಗೋವಿಂದರಾಜು ಎಂಬುವರು ಕಾರವಾರದ ಕಾಜುಬಾಗ್‌ದಲ್ಲಿ ಗಣಪತಿ ಅಣ್ವೇಕರ್ ಎಂಬುವರ ಅಂಗಡಿಯನ್ನು ಬಾಡಿಗೆಗೆ ಪಡೆದು 2021 ಫೆ. 13 ರಿಂದ ಅಮೋಘ ಟ್ರೇಡರ್ಸ್ ಹೆಸರಿನಲ್ಲಿ ಅಂಗಡಿ ಪ್ರಾರಂಭಿಸಿದರು.

ಅಂಗಡಿಯಲ್ಲಿ ದಿನ ಬಳಕೆಯ ವಸ್ತುಗಳು, ಎಲ್ಲ ಬಗೆಯ ಗೃಹೋಪಯೋಗಿ, ಇಲೆಕ್ಟ್ರಾನಿಕ್ ವಸ್ತುಗಳು ಹಾಗೂ ಪೀಠೋಪಕರಣಗಳನ್ನು ಜೋಡಿಸಿಟ್ಟು ರಿಯಾಯಿತಿ ದರದಲ್ಲಿ ಅತೀ ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ಸಾರ್ವಜನಿಕರಿಗೆ ತಿಳಿಸುತ್ತಿದ್ದರು. ನಂತರ ಅವುಗಳನ್ನು ಶೇ. 44ರ ದರಕ್ಕೆ ನೀಡಿವುದಾಗಿ ನಂಬಿಸಿ ಗ್ರಾಹಕರಿಂದ ಮುಂಗಡವಾಗಿ ಹಣವನ್ನು ಪಡೆಯುತ್ತಿದ್ದರು.

ಮೊದಲು ಬಂದ ಕೆಲವು ಗ್ರಾಹಕರಿಗೆ ಪ್ರಥಮ ಆದ್ಯತೆ ಮೇರೆಗೆ ಅತೀ ಕಡಿಮೆ ದರದಲ್ಲಿ ವಸ್ತುಗಳನ್ನು ನೀಡುವುದಾಗಿ ತಿಳಿಸಿ ಜನರಿಂದ ಹಣ ಪಡೆದು ಸ್ವಲ್ಪ ದಿನಗಳ ನಂತರ ಮೊದಲು ಹಣ ನೀಡಿದವರಿಗೆ ವಸ್ತುಗಳನ್ನು ಕೊಟ್ಟು ಜನರನ್ನು ಆಕರ್ಷಿಸುತ್ತಿದ್ದರು.

ಆರೋಪಿಗಳ ಆಮೀಶಕ್ಕೆ ಒಳಗಾಗಿ ನಗರದ ಸುಮಾರು 130ಕ್ಕೂ ಹೆಚ್ಚಿನ ಗ್ರಾಹಕರು ಸುಮಾರು 12 ಲಕ್ಷ ಹಣವನ್ನು ಆರೋಪಿತರಿಗೆ ನೀಡಿ ವಸ್ತುಗಳನ್ನು ಕಾಯ್ದಿರಿಸಿದ್ದರು. ಆದರೆ ವಂಚಕರು ಗ್ರಾಹಕರಿಂದ ಹಣ ಪಡೆದುಕೊಂಡು ಕಾರವಾರದಿಂದ ಪರಾರಿಯಾಗಿದ್ದರು.

ಈ ರೀತಿ ವಂಚನೆಗೆ ಒಳಗಾದವರ ಪೈಕಿ ನಗರದ ಮಾಡಿಬಾಗ ಕಡವಾಡದ ನಿವಾಸಿ ಹಾಗೂ ವಿ ಗಾರ್ಡ್ ಕಂಪನಿಯ ಸಾಮಗ್ರಿಗಳ ರಿಪೇರಿ ಕೆಲಸ ಮಾಡುವ ಸಮರ್ಥ ನೇತಾಳಕರ್ ಎಂಬುವರು ಒಬ್ಬರು. ವಂಚನೆಗೊಳಗಾದ ಸಮರ್ಥ ನೇತಾಳಕರ್ ಆರೋಪಿಗಳ ಬಳಿ ಗೃಹ ಬಳಕೆಯ ಸೋಫಾ, 2 ಕಬ್ಬಿಣದ ಮಂಚ, ವಾಸಿಂಗ್ ಮಶೀನ್, ಕಪಾಟು ಹಾಗೂ ಇತರೆ ಅಡುಗೆ ಪಾತ್ರೆಗಳನ್ನು ತಂದುಕೊಡುವಂತೆ ಮುಂಗಡವಾಗಿ 1.13 ಲಕ್ಷ ರೂ ಹಣವನ್ನು ನೀಡಿದರು.

ಆರೋಪಿಗಳು ವಸ್ತುಗಳನ್ನು ತಂದುಕೊಡದೇ ವಂಚಿಸಿದ್ದು, ಈ ಕುರಿತು ಮಾರ್ಚ್ 12 ರಂದು ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಕ್ರೈಂ ನಂಬರ್ 39/2021 ಕಲಂ: 406, 420 ಸಹಿತ ಐಪಿಸಿ ಸೆಕ್ಷನ್ 34 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರು ಜನ ವಂಚಿತರ ತಂಡವನ್ನು ಭೇದಿಸಲಾಗಿದ್ದು, ಈ ಪೈಕಿ ಓರ್ವನನ್ನು ಹುಬ್ಬಳ್ಳಿಯಲ್ಲಿ ಬಂಧಿಸಲಾಗಿದೆ. ಉಳಿದ ಐವರನ್ನೂ ಆದಷ್ಟು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಎಸ್‌ಪಿ ಅವರು ತಿಳಿಸಿದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್. ಬದರಿನಾಥ, ಪೊಲೀಸ್ ಉಪಾಧೀಕ್ಷಕ ಅರವಿಂದ ಕಲಗುಜ್ಜಿಯವರ ಮಾರ್ಗದರ್ಶನದಲ್ಲಿ ಕಾರವಾರ ವೃತ್ತ ನಿರೀಕ್ಷಕ ಸಂತೋಷ ಶೆಟ್ಟಿ, ಪಿಎಸ್‌ಐಗಳಾದ ಸಂತೋಷ ಕುಮಾರ, ಎಸ್.ಬಿ. ಪೂಜಾರಿ, ಹಾಗೂ ಸಿಬ್ಬಂದಿನ್ನೊಳಗೊಂಡ ತನಿಖಾ ತಂಡ ರಚಿಸಿ ಕಾರ್ಯಾಚರಣೆ ನಡೆಸಿ ವಂಚಕರ ಜಾಲವನ್ನು ಭೇದಿಸಲಾಗಿದೆ ಎಂದರು.

Subscribe to our newsletter!

Other related posts

error: Content is protected !!