ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆ ತಡೆಗೆ ಕಟ್ಟುನಿಟ್ಟಿನ ಕ್ರಮ:ಜಿಲ್ಲಾಧಿಕಾರಿ ಜಿ.ಜಗದೀಶ್
ಉಡುಪಿ ಮಾಚ್ 18, 2021: ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಸೂಚಿಸಿರುವ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್, ಸೂಚಿಸಿದರು.
ಅವರು ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ , ಜಿಲ್ಲೆಯಲ್ಲಿ ಕೋವಿಡ್ 2 ನೇ ಅಲೆ ಹರಡುವಿಕೆಯನ್ನು ನಿಯಂತ್ರಿಸುವ ಕುರಿತು ಕೈಗೊಳ್ಳಬೆಕಾದ ಕ್ರಮಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಭೆ ಸಮಾರಂಭಗಳಲ್ಲಿ ನಿಗಧಿತ ಸಂಖ್ಯೆಗಿಂತ ಹೆಚ್ಚು ಜನರು ಸೇರಿದಲ್ಲಿ ಸಂಬಂಧಪಟ್ಟವರ ವಿರುದ್ದ ದಂಡ . ಅಧಿಕಾರಿಗಳು ಸಪರ್ಮಕವಾಗಿ ಕಾರ್ಯ ನಿರ್ವಹಿಸುವ ಕುರಿತು ಪರಿಶೀಲಿಸಲು ನೋಡೆಲ್ ಅಧಿಕಾರಿಯನ್ನು ನೇಮಕ ಮಾಡಲಾಗುವುದು
ಜಿಲ್ಲಾಧಿಕಾರಿ ಜಿ.ಜಗದೀಶ್
ಸಾರ್ವಜನಿಕರು ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಮಾಸ್ಕ್ ಧರಿಸದವರ ವಿರುದ್ದ ನಿಗಧಿತ ದಂಡ ವಸೂಲಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಗರ ಸ್ಥಳಿಯ ಸಂಸ್ಥೆಗಳು ಮತ್ತು ಗ್ರಾಮೀಣ ಪ್ರದೇಶದಲ್ಲಿ ದಂಡ ವಿಧಿಸುವ ಅಧಿಕಾರವನ್ನು ವಿವಿಧ ಅಧಿಕಾರಿಗಳಿಗೆ ಈಗಾಗಲೇ ಪ್ರತ್ಯಾಯೋಜನೆ ಮಾಡಿದ್ದು, ದಂಡ ವಿಧಿಸದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಸುತ್ತೋಲೆಯಲ್ಲಿ ತಿಳಿಸಿರುವಂತೆ ಸಭೆ ಸಮಾರಂಭಗಳಲ್ಲಿ ನಿಗಧಿತ ಸಂಖ್ಯೆಗಿಂತ ಹೆಚ್ಚು ಜನರು ಸೇರಿದಲ್ಲಿ ಸಂಬಂಧಪಟ್ಟವರ ವಿರುದ್ದ ದಂಡ ವಿಧಿಸುವಂತೆ ಸೂಚಿಸಿದ ಅವರು , ಅಧಿಕಾರಿಗಳು ಸಪರ್ಮಕವಾಗಿ ಕಾರ್ಯ ನಿರ್ವಹಿಸುವ ಕುರಿತು ಪರಿಶೀಲಿಸಲು ನೋಡೆಲ್ ಅಧಿಕಾರಿಯನ್ನು ನೇಮಕ ಮಾಡಲಾಗುವುದು ಎಂದರು.
ಎಲ್ಲಾ ಅಂಗಡಿ , ಮಾಲ್ ಗಳಲ್ಲಿನ ಸಂಸ್ಥೆಯ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು, ಹಾಗೂ ಗ್ರಾಹಕರಿಗೂ ಮಾಸ್ಕ್ ಧರಿಸುವಂತೆ ಸೂಚಿಸಬೇಕು , ಮಾಸ್ಕ್ ಧರಿಸದೇ ಕಾರ್ಯ ನಿರ್ವಹಿಸುವ ಸಂಸ್ಥೆಗಳ ಟ್ರೇಡ್ ಲೈಸೆನ್ಸ್ ರದ್ದುಗೊಳಿಸುವದು ಸೇರಿದಂತೆ ಎಪಿಡಮಿಕ್ ಕಾಯ್ದೆಯನುಸಾರ ಸಹ ಕ್ರಮ ಕೈಗೊಳ್ಳಲಾಗುವುದು. ಅಂಗಡಿ ಮತ್ತು ಮಾಲ್ ಗಳಿಗೆ ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಹಿಂದೆ ಕೋವಿಡ್ ಸಮಯದಲ್ಲಿ ರಚಿಸಲಾಗಿದ್ದ ಎಲ್ಲಾ ತಂಡಗಳು ತಮಗೆ ವಹಿಸಲಾಗಿದ್ದ ಕರ್ತವ್ಯಗಳನ್ನು ನಿರ್ವಹಿಸುವಂತೆ ಸೂಚಿಸಿದ ಜಿಲ್ಲಾಧಿಕರಿಗಳು, ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಪತ್ತೆ ಹಂಚುವಿಕೆ , ಹೋಂ ಕ್ವಾರಂಟೈನ್ ಭೇಟಿ, ಕ್ವಾರಂಟೈನ್ ಆಪ್ ನಿರ್ವಹಣೆ, ಗ್ರಾಮೀಣ ಮಟ್ಟದಲ್ಲಿ ರಚಿಸಲಗಿರುವ ಕಾರ್ಯಪಡೆಗಳು ತಕ್ಷಣ ಸಭೆ ಸೇರಿ ತಮ್ಮ ವ್ಯಾಪ್ತಿಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.
ಸಾರ್ವಜನಿಕರಿಗೆ ಕೋವಿಡ್ ಸುರಕ್ಷತಾ ನಿಯಮಗಳ ಕುರಿತು ಹೆಚ್ಚಿನ ಪ್ರಮಾಣದಲ್ಲಿ ಅರಿವು ಮೂಡಿಸಲು ಪ್ರತೀ ಮನೆ ಮನೆಗೆ ಕರಪತ್ರಗಳ ಹಂಚಿಕೆ, ಜಿಂಗಲ್ಸ್ ಗಳ ಬಳಕೆ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುವಂಥೆ ತಿಳಿಸಿದರು.
ಮಣಿಪಾಲ ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಅವಧಿ ಮೀರಿ ಪಬ್ ಮತ್ತು ಬಾರ್ ಗಳು ತೆರೆದಿದ್ದು ಇದರಿಂದ ಕೋವಿಡ್ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಗಳಿದ್ದು ಇಂತಹ ಪಬ್ ಬಾರ್ ಗಳ ವಿರುದ್ದ ಅಬಕಾರಿ ಇಲಾಖೆಯಿಂದ ಕಠಿಣ ಕ್ರಮ ಕೈಗೊಳ್ಳುವಂತೆ ಜಿ.ಜಗದೀಶ್ ಸೂಚನೆ ನೀಡಿದರು.