ಪೋಷಣ್ ಅಭಿಯಾನ ಯೋಜನೆಯಿಂದ ಅಪೌಷ್ಟಿಕತೆ ದೂರ: ಡಾ.ನವೀನ್ ಭಟ್

 ಪೋಷಣ್ ಅಭಿಯಾನ ಯೋಜನೆಯಿಂದ ಅಪೌಷ್ಟಿಕತೆ ದೂರ: ಡಾ.ನವೀನ್ ಭಟ್
Share this post

ಉಡುಪಿ, ಮಾರ್ಚ್ 18, 2021: ಅಂಗನವಾಡಿ ಕೇಂದ್ರಗಳಲ್ಲಿ ಗುರುತಿಸಲ್ಪಟ್ಟ ತೀವ್ರ ಅಪೌಷ್ಠಿಕ ಹಾಗೂ ಸಾಧಾರಣ ಅಪೌಷ್ಠಿಕ ಮಕ್ಕಳನ್ನು ಪಂಚಾಯತ್ ಮಟ್ಟದಲ್ಲಿ ದತ್ತು ಪಡೆದು ಅವರ ಪೌಷ್ಠಿಕತೆ ಮಟ್ಟವನ್ನು ಹೆಚ್ಚಿಸುವಲ್ಲಿ ಸಹಕರಿಸಿದಾಗ ಪೋಷಣ್ ಅಭಿಯಾನ ಯೋಜನೆಯ ಮುಖ್ಯ ಉದ್ದೇಶವಾದ ಅಪೌಷ್ಠಿಕತೆಯನ್ನು ಹೋಗಲಾಡಿಸಬಹುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ಹೇಳಿದರು.

ಅವರು ಬುಧವಾರ, ಬಡಗಬೆಟ್ಟು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಉಡುಪಿ ಹಾಗೂ 80 ಬಡಗಬೆಟ್ಟು ಗ್ರಾಮ ಪಂಚಾಯತ್ ಇವರ ಸಹಯೋಗದೊಂದಿಗೆ ನಡೆದ ಪೋಷಣ್ ಅಭಿಯಾನ್ ಯೋಜನೆಯ ಪೋಷಣ್ ಪಕ್ವಾಡ ಕಾರ್ಯಕ್ರಮ ಉದ್ಘಾಟಿಸಿ, ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.

ಸರಕಾರ ಮಕ್ಕಳಲ್ಲಿ ಪೌಷ್ಟಿಕಾಂಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅನೇಕ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅಂಗನವಾಡಿಗಳ ಮೂಲಕ ತಲುಪಿಸುತ್ತಿದೆ. ಇದು ಪ್ರತಿಶತಃ 100 ರಷ್ಟು ಅನುಷ್ಟಾನವಾದಾಗ ಅಪೌಷ್ಟಿಕತೆಯನ್ನು ದೂರ ಮಾಡಲು ಸಾಧ್ಯವಾಗುತ್ತದೆ ಎಂದರು.     

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಆರ್ ಶೇಷಪ್ಪ, ಬಡಗಬೆಟ್ಟು ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷೆ ನಿರುಪಮಾ ಎಸ್ ಹೆಗ್ಡೆ, ಎನ್.ಆರ್.ಎಲ್.ಎಮ್ ಯೋಜನಾ ನಿರ್ದೇಶಕ ಬಾಬು, ಎನ್.ಆರ್.ಎಲ್.ಎಮ್ ಉಪ ಯೋಜನಾ ನಿರ್ದೇಶಕ ಗುರುದತ್, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಗ್ರಾಮ ಪಂಚಾಯತ್ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಪಸ್ಥಿತರಿದ್ದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ವಿವೇಕಾನಂದ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ಕೇಶವ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Subscribe to our newsletter!

Other related posts

error: Content is protected !!