ದುಡಿಯೋಣಾ ಬಾ ಅಭಿಯಾನದ ಪ್ರಯೋಜನ ಪಡೆದುಕೊಳ್ಳಿ: ಪ್ರಿಯಾಂಗಾ ಎಂ

 ದುಡಿಯೋಣಾ ಬಾ ಅಭಿಯಾನದ ಪ್ರಯೋಜನ ಪಡೆದುಕೊಳ್ಳಿ: ಪ್ರಿಯಾಂಗಾ ಎಂ
Share this post

ಕಾರವಾರ, ಮಾರ್ಚ್ 16, 2021: ಗ್ರಾಮೀಣ ಭಾಗದ ಜನರಿಗೆ ನಿರಂತರ ಉದ್ಯೋಗ ಒದಗಿಸುವ ಉದ್ದೇಶದಿಂದ ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಮಾರ್ಚ್ 15 ರಿಂದ ಮುಂದಿನ 3 ತಿಂಗಳವರೆಗೆ ಹಮ್ಮಿಕೊಂಡಿರುವ “ದುಡಿಯೋಣ ಬಾ” ಅಭಿಯಾನದ ಪ್ರಯೋಜನ ಪಡೆದುಕೊಳ್ಳುವಂತೆ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಯೋಜನೆಯಿಂದ ಹೊರಗುಳಿದ ದುರ್ಬಲ ಕುಟುಂಬಗಳನ್ನು ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವುದು, ಗ್ರಾಮೀಣ ಜನರಿಗೆ ಸ್ಥಳೀಯವಾಗಿ ಉದ್ಯೋಗ ನೀಡಿ ಸ್ವಾವಲಂಭಿಯಾಗಿ ಬದುಕುವಂತೆ ಮಾಡುವುದು ಅಭಿಯಾನದ ಪ್ರಮುಖ ಅಂಶಗಳಾಗಿವೆ. ಹೀಗಾಗಿ ಗ್ರಾಮೀಣ ಭಾಗದ ಜನರು ಈ ಅಭಿಯಾನದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ಉದ್ಯೋಗವಿಲ್ಲದೆ ವಲಸೆ ಹೋಗುವ ಗ್ರಾಮೀಣ ಕುಟುಂಬಗಳ ಸಂಕಷ್ಟವನ್ನು ನಿವಾರಿಸುವ ನಿಟ್ಟಿನಲ್ಲಿ ಗ್ರಾಮದಲ್ಲಿಯೇ ಕೆಲಸ ನೀಡಲು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಇಲಾಖೆ ಮಾರ್ಚ್ 15 ರಿಂದ ಜೂನ್ 15 ರವರೆಗೆ ಈ ಅಭಿಯಾನವನ್ನು ಜಾರಿಗೆ ತರಲಾಗಿದೆ.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಈ ಅಭಿಯಾನವನ್ನು ಪ್ರಾರಂಭಿಸಲಾಗಿದ್ದು, ಬೇಸಿಗೆಯಲ್ಲಿ ಪ್ರತಿ ಕುಟುಂಬಕ್ಕೆ ಕನಿಷ್ಠ 60 ದಿನಗಳ ಕೆಲಸವನ್ನು ನೀಡುವುದು. ಇದರಿಂದ ಸುಮಾರು 16 ಸಾವಿರ ರೂ. ಆದಾಯ ಕಲ್ಪಿಸುವುದು ಅಲ್ಲದೇ, ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ರಸಗೊಬ್ಬರ, ಬಿತ್ತನೆ ಬೀಜ, ಮುಂಗಾರಿನ ಸಿದ್ಧತೆಗೆ ಮಾಡಿಕೊಳ್ಳಲು ಆರ್ಥಿಕ ಸ್ವಾವಲಂಬನೆ ಕಲ್ಪಿಸುವುದು ಕೂಡ ಇದರ ಉದ್ದೇಶವಾಗಿದೆ.

ಬೇಸಿಗೆಯ ದಿನಗಳಲ್ಲಿ ಮಾಡಬಹುದಾದ ಬದುಗಳ ನಿರ್ಮಾಣ, ಕೆರೆ ಅಭಿವೃದ್ಧಿ, ರಸ್ತೆ ಬದಿ ನೆಡುತೋಪು, ಕಾಲುವೆಗಳ ಅಭಿವೃದ್ಧಿ, ಅರಣ್ಯೀಕರಣ ಕಾಮಗಾರಿ, ರೈತರ ಜಮೀನುಗಳಲ್ಲಿ ತೋಟಗಾರಿಕೆ ಬೆಳೆ ಬೆಳೆಯಲು ಮುಂಗಡ ಗುಂಡಿ ತೆಗೆಯುವುದು ಸೇರಿದಂತೆ ಇತ್ಯಾದಿ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ ಎಂದು ಸಿಇಒ ಅವರು ಮಾಹಿತಿ ನೀಡಿದ್ದಾರೆ.

Subscribe to our newsletter!

Other related posts

error: Content is protected !!