ಮುಖ್ಯ ಅಭಿಯಂತರರನ್ನು ಭೇಟಿಯಾದ ಗುತ್ತಿಗೆದಾರರ ಸಂಘದ ಪ್ರತಿನಿಧಿಗಳು, ಸಮಸ್ಯೆ ನಿವಾರಿಸುವಂತೆ ಮನವಿ
ಕಾರವಾರ , ಮಾರ್ಚ್ 02, 2021: ಲೋಕೋಪಯೋಗಿ ಇಲಾಖೆಯ ಧಾರವಾಡ ವಿಭಾಗದ ಮುಖ್ಯ ಅಭಿಯಂತರ ಎಸ್.ಎಫ್.ಪಾಟೀಲ್ ಅವರನ್ನು ಭೇಟಿಯಾದ ಗುತ್ತಿಗೆದಾರರ ಸಂಘದ ಪ್ರತಿನಿಧಿಗಳು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿ ಅವುಗಳನ್ನು ನಿವಾರಿಸುವಂತೆ ಮನವಿ ಮಾಡಿಕೊಂಡರು.
ಲೋಕೋಪಯೋಗಿ ಇಲಾಖೆಯ ಧಾರವಾಡ ವಿಭಾಗದ ಮುಖ್ಯ ಅಭಿಯಂತರ (ಚೀಫ್ ಇಂಜಿನಿಯರ್) ಎಸ್.ಎಫ್.ಪಾಟೀಲರವರು ಕಾರವಾರ ನಗರಕ್ಕೆ ಮಂಗಳವಾರ ಭೇಟಿ ನೀಡಿದರು. ಈ ವೇಳೆ ಅವರನ್ನು ಗುತ್ತಿಗೆದಾರರ ಸಂಘದವರು ಭೇಟಿಯಾಗಿ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಮಾಧವ ನಾಯಕ ಮಾತನಾಡಿ ಕಾಮಗಾರಿಗಳ ಅವಧಿಯಲ್ಲಿ ಮಳೆಗಾಲದ ನಾಲ್ಕು ತಿಂಗಳ ಅವಧಿಗೆ ವಿನಾಯಿತಿ ನೀಡಬೇಕು. ಏಕೆಂದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಗಾಲದ ವೇಳೆ ಸೇತುವೆ, ರಸ್ತೆ ಕೆಲಸಗಳನ್ನು ನಡೆಸುವುದು ಕಷ್ಟ. ಆದರೆ ಸರ್ಕಾರದ ಮಾರ್ಗಸೂಚಿ ಪ್ರಕಾರ ನಿಗದಿತ ಕಾಲಮಿತಿಯೊಳಗೆ ಈ ಅವಧಿಯೂ ಸೇರಿದ್ದರಿಂದ ಗುತ್ತಿಗೆದಾರರಿಗೆ ಸಮಸ್ಯೆಯಾಗುತ್ತಿದೆ. ಈ ಕಾರಣಕ್ಕೆ ನಿಯಮಕ್ಕೆ ತಿದ್ದುಪಡಿ ತಂದು ವಿನಾಯಿತಿ ಕೊಡುವಂತೆ ಮನವಿ ಮಾಡಿದರು.
ಇದಲ್ಲದೆ ಪ್ಯಾಕೇಜ್ ಟೆಂಡರ್ ವ್ಯವಸ್ಥೆ ಮೂಲಕ ಕಾಮಗಾರಿ ಹಂಚಿಕೆಯಾಗುತ್ತಿರುವುದು ಗುತ್ತಿಗೆದಾರರಿಗೆ ಸಮಸ್ಯೆಯಾಗುತ್ತಿದೆ. ಇದು ಅವೈಜ್ಞಾನಿಕ ಕ್ರಮವೂ ಆಗಿದೆ. ಮೊದಲಿನಂತೆ ಟೆಂಡರ್ ಮೂಲಕ ಕಾಮಗಾರಿ ಹಂಚಿಕೆ ಮಾಡುವ ವ್ಯವಸ್ಥೆಯೇ ರೂಪುಗೊಳ್ಳಬೇಕು ಎಂದು ಒತ್ತಾಯಿಸಿದರು.
ಗುತ್ತಿಗೆದಾರರು ಎದುರಿಸುತ್ತಿರುವ ಅನೇಕ ತಾಂತ್ರಿಕ ಮತ್ತು ಆಡಳಿತಾತ್ಮಕ ಸಮಸ್ಯೆಗಳ ಬಗ್ಗೆಯೂ ಮನವರಿಕೆ ಮಾಡಿಕೊಟ್ಟರು.
ಸಮಸ್ಯೆ ಆಲಿಸಿದ ಪಾಟೀಲರು ಈ ಬಗ್ಗೆ ಸಕಾರಾತ್ಮಕ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಧಾರವಾಡ ವಲಯದ ಸೂಪರಿಟೆಂಡೆಂಟ್ ಇಂಜಿನಿಯರ್ ಶಿವಾನಂದ ನಾಯಕ ಎಕ್ಸಿಕ್ಯೂಟಿವ್ ಇಂಜಿನಿಯರ್ ಸತೀಶ ಜಹಗೀರದಾರ, ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ರಾಜೀವ ನಾಯ್ಕ, ಗುತ್ತಿಗೆದಾರರ ಸಂಘದ ಪ್ರಮುಖರಾದ ಅನಿಲಕುಮಾರ ಮಾಳ್ಸೇಕರ, ವಿಜಯ ದೇಸಾಯಿ, ದೀಪಕ ಕೆ.ನಾಯ್ಕ, ವಿಜಯ ಬಿಲಿಯೆ, ಧೀರು ಶಾನಭಾಗ, ರಮೇಶ ನಾಯಕ,ತೊರ್ಕೆ ಇತರರು ಉಪಸ್ಥಿತರಿದ್ದರು.