ಮೀನುಗಾರರು ಆರ್ಥಿಕವಾಗಿ ಸದೃಢರಾಗಬೇಕು: ಎಸ್. ಅಂಗಾರ
ಮಂಗಳೂರು, ಫೆಬ್ರವರಿ 23, 2021: ಸರ್ಕಾರ ಮೀನುಗಾರರ ಕಲ್ಯಾಣ ಅಭಿವೃದ್ಧಿಗೆ ಅನೇಕ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಮೀನುಗಾರರು ಇವುಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕೆಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸಚಿವ ಎಸ್. ಅಂಗಾರ ತಿಳಿಸಿದರು.
ಅವರು ಇಂದು ಮಂಗಳೂರು ಬಂದರಿನ ಮತ್ಸ್ಯಗಂಧಿ ಸಭಾಂಗಣದಲ್ಲಿ ಮೀನುಗಾರಿಕೆ ಇಲಾಖೆ ವತಿಯಿಂದ ಆಯೋಜಿಸಲಾದ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ನಾಡದೋಣಿಗಳ ಜೆಟ್ಟಿಗಳು ಹಾಗೂ ಬಂದರಿನ ಹೂಳೆತ್ತುವ ಕಾರ್ಯಗಳು ಹೆಚ್ಚಾಗಿ ನಡೆಯಬೇಕು ಹಾಗೂ ಬಂದರುಗಳಲ್ಲಿ ಜೆಟ್ಟಿಗಳ ವಿಸ್ತರಣೆಯಾಗಬೇಕು, ಜೊತೆಗೆ ಮೀನುಗಾರರ ಅಗತ್ಯ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಲು ಸರ್ಕಾರದಿಂದ ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು.
ಮೀನುಗಾರಿಕೆ ಉತ್ಪಾದಕರ ಸಂಸ್ಥೆ ಕುರಿತ ಮಾಹಿತಿ ಶಿಬಿರದಿಂದ ಹೆಚ್ಚಿನ ಮೀನುಗಾರರು ಇದರ ಉಪಯೋಗ ಪಡೆಯಬೇಕು ಎಂದ ಅವರು, ಸುಮಾರು 100 ಕ್ಕೂ ಹೆಚ್ಚಿನ ಸಂಖ್ಯೆಯ ಮೀನುಕೃಷಿಕರು, ಮೀನುಗಾರರು ಈ ರೀತಿಯ ಸಂಸ್ಥೆಗಳನ್ನು ಮಾಡಿಕೊಳ್ಳುವುದರಿಂದ ಮೀನುಗಾರರ ಹಲವು ಸಂಕಷ್ಟಗಳಿಗೆ ಪರಿಹಾರ ಸಿಗುತ್ತದೆ. ಮುಖ್ಯವಾಗಿ ಅವರ ಉತ್ಪನ್ನಗಳಿಗೆ ಉತ್ತಮ ಬೆಲೆ, ಸೂಕ್ತ ಮಾರುಕಟ್ಟೆ ಸಿಗುತ್ತದೆ ಎಂದರು.
ಮೀನುಗಾರಿಕೆಯಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಹಾಗೂ ಮೀನುಗಾರಿಕೆಯ ಉನ್ನತಿಗಾಗಿ ಸರ್ಕಾರದಿಂದ ನೀಡಲಾಗುವ ಆರ್ಥಿಕ ಸಹಾಯಧನ, ಕಾರ್ಯಕ್ರಮಗಳು, ಯೋಜನೆಗಳು ಸೇರಿದಂತೆ ಬ್ಯಾಂಕ್‍ಗಳಲ್ಲಿ ಸಿಗುವ ಸೌಲಭ್ಯವನ್ನು ಮೀನು ಉತ್ಪಾದಕರ ಸಂಸ್ಥೆ ಮೂಲಕ ಸುಲಭವಾಗಿ ಪಡೆದುಕೊಳ್ಳಬಹುದು ಎಂದರು.
ಸರ್ಕಾರದಿಂದ ಸಿಗುವ ಅನುದಾನದಲ್ಲಿ ಮೀನುಗಾರರ ಸುರಕ್ಷತೆಗೆ ಆದ್ಯತೆ ನೀಡಲಾಗುವುದು ಎಂದರು.
ಈಗಾಗಲೇ ಬಂದರಿನಲ್ಲಿ ಕೈಗೊಳ್ಳಲಾಗಿರುವ ಡ್ರೆಜ್ಜಿಂಗ್ ಕಾರ್ಯವನ್ನು ಚುರುಕುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೋಟು ತಂಗಲು ಹಾಗೂ ಸುಗಮ ಸಂಚಾರಕ್ಕೆ ಅಡ್ಡಿಯಾಗುವ ಹಲವು ಕಷ್ಟಗಳನ್ನು ಪರಿಹರಿಸಲು ಮೀನುಗಾರರು ಮನವಿ ಮಾಡಿದ್ದಾರೆ. ಸರ್ಕಾರದಿಂದ ಮೀನುಗಾರರ ಕಷ್ಟಗಳನ್ನು ಪರಿಹರಿಸಲು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದರು.
ಮಂಗಳೂರು ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ಬಹುತೇಕ ಮೀನುಗಾರಿಕಾ ವಲಯದಲ್ಲಿ ಮತ್ಸ್ಯಕ್ಷಾಮದ ಸಂಕಷ್ಟಗಳು ಎದುರಾಗಿದ್ದು, ಡಿಸೇಲ್ ಬೆಲೆ ಏರಿಕೆಯಿಂದಾಗಿ ಬೋಟುಗಳ ನಿರ್ವಹಣೆ ಕಷ್ಟವಾಗಿದೆ ಎಂದರು.
ಒಂದನೇ ಮತ್ತು ಎರಡನೇ ಹಂತದ ಧಕ್ಕೆಯಲ್ಲಿ ದಟ್ಟಣೆಯಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಈ ಕಷ್ಟಗಳನ್ನು ಸರಿಪಡಿಸಲು ಸರ್ಕಾರವು ಸ್ಪಂದಿಸಬೇಕು ಎಂದರು.
ನಮ್ಮ ರಾಜ್ಯದ ಬೋಟುಗಳಿಗೆ ಕೇರಳ ರಾಜ್ಯದ ಕರಾವಳಿ ಕಾವಲು ಪಡೆಯ ಪೊಲೀಸರು ಹಾಗೂ ಮೀನುಗಾರಿಕಾ ಅಧಿಕಾರಿಗಳಿಂದ ತೊಂದರೆಯಾಗುತ್ತಿದ್ದು, ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕೆ.ಎಫ್.ಡಿ.ಸಿ ಯ ಅಧ್ಯಕ್ಷ ನಿತಿನ್ ಕುಮಾರ್, ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ದೊಡ್ಮಣಿ, ಮಹಾನಗರ ಪಾಲಿಕೆಯ ಸದಸ್ಯ ಅಬ್ದುಲ್ ಲತೀಫ್, ಭಾಸ್ಕರ ಚಂದ್ರ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.