ಧರ್ಮದ ಮರ್ಮವನ್ನು ಅರಿತು ಸಹಜವಾಗಿ ಆಚರಣೆ ಮಾಡಬೇಕು: ಡಿ. ವೀರೇಂದ್ರ ಹೆಗ್ಗಡೆ

 ಧರ್ಮದ ಮರ್ಮವನ್ನು ಅರಿತು ಸಹಜವಾಗಿ ಆಚರಣೆ ಮಾಡಬೇಕು: ಡಿ. ವೀರೇಂದ್ರ ಹೆಗ್ಗಡೆ
Share this post

ಅಳದಂಗಡಿ ಬೆಟ್ಟದ ಬಸದಿಯಲ್ಲಿ ಪಂಚಕಲ್ಯಾಣ ಮಹೋತ್ಸವ

ಬೆಳ್ತಂಗಡಿ, ಫೆ 18, 2021: ವಸ್ತುವಿನ ಸಹಜ ಸ್ವಭಾವವೇ ಧರ್ಮ. ಪರಿಶುದ್ಧ ಮನಸ್ಸಿನಿಂದ ಬದ್ಧತೆಯಿಂದ ಧರ್ಮವನ್ನು ಸಹಜವಾಗಿ ಆಚರಿಸಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಅವರು ಬುಧವಾರ ಅಳದಂಗಡಿಯಲ್ಲಿ ಬೆಟ್ಟದ ಭಗವಾನ್ ಶ್ರೀ ಪಾಶ್ರ್ವನಾಥ ಸ್ವಾಮಿ ಬಸದಿಯಲ್ಲಿ ಪಂಚಕಲ್ಯಾಣ ಮಹೋತ್ಸವ ಹಾಗೂ ನೂತನ ಬಿಂಬ ಪ್ರತಿಷ್ಠೆ ಸಂದರ್ಭ ಆಯೋಜಿಸಿದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶ್ರಾವಕರು ದೇವರ ಪೂಜೆ, ಗುರುಗಳ ಸೇವೆ, ಸ್ವಾಧ್ಯಾಯ, ಸಂಯಮ, ತಪ, ದಾನ ಮೊದಲಾದ ಷಟ್ಕರ್ಮಗಳನ್ನು ಪ್ರತಿ ದಿನ ಸಹಜವಾಗಿಯೇ ಮುನಿಧರ್ಮ ಪಾಲನೆ ಮಾಡುತ್ತಾರೆ. ಹಕ್ಕಿಗಳು ಬಾನಿನಲ್ಲಿ ಸ್ವಚ್ಛಂದವಾಗಿ ಹಾರಾಡುವಂತೆ, ಮೀನುಗಳು ನೀರಿನಲ್ಲಿ ಸ್ವತಂತ್ರವಾಗಿ ಬದುಕುವಂತೆ ನಾವು ಕೂಡಾ ನಿತ್ಯವೂ ಧರ್ಮನುರಾಗಿಗಳಾಗಿ ಧರ್ಮದ ಪಾಲನೆ ಮಾಡಬೇಕು ಎಂದು ಹೆಗ್ಗಡೆಯವರು ಅಭಿಪ್ರಾಯಪಟ್ಟರು.

ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು ಮಾತನಾಡಿ, ಯುವಜನತೆ ಉತ್ಸಾಹದಿಂದ ಧಾರ್ಮಿಕ ಕಾರ್ಯಗಳಲ್ಲಿ ಹಾಗೂ ಸಮಾಜ ಸೇವಾ ಕಾಯಕದಲ್ಲಿ ಭಾಗವಹಿಸುತ್ತಿರುವುದು ಶ್ಲಾಘನೀಯವಾಗಿದೆ. ಸಮಾಜದ ಸಂಘಟನೆ ಮತ್ತು ಬಲವರ್ಧನೆಗೆ ಎಲ್ಲರೂ ಸಂಘಟಿತ ಪ್ರಯತ್ನ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಶುಭಾಶಂಸನೆ ಮಾಡಿದರು. ಮೂಡಬಿದ್ರೆ ಜೈನ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳ ಮಾತನಾಡಿದರು.

ರತ್ನರಾಜ ಜೈನ್ ಪೆರಂದಬೈಲು ಸ್ವಾಗತಿಸಿದರು. ಸಂದೀಪ್ ಕುಮಾರ್ ಜೈನ್ ಧನ್ಯವಾದವಿತ್ತರು. ಶಿಕ್ಷಕ ಅಜಿತ್ ಕೊಕ್ರಾಡಿ ಕಾರ್ಯಕ್ರಮ ನಿರ್ವಹಿಸಿದರು. ಸಮವಸರಣ ಪೂಜೆ, ಶ್ರೀ ಸಿದ್ಧಚಕ್ರ ಯಂತ್ರಾರಾಧನೆ ಮತ್ತು ಭವ್ಯ ಅಗ್ರೋದಕ ಮೆರವಣಿಗೆ ಬಳಿಕ ಭಗವಾನ್ ಶ್ರೀ ಪಾಶ್ರ್ವನಾಥ ಸ್ವಾಮಿಗೆ 504 ಕಲಶಗಳಿಂದ ಅಭಿಷೇಕ ನಡೆಯಿತು.

ಪಂಚಕಲ್ಯಾಣ ಸೇವಾಕರ್ತೃಗಳನ್ನು ಗೌರವಿಸಲಾಯಿತು.

Subscribe to our newsletter!

Other related posts

error: Content is protected !!