ಬಾಲಕಾರ್ಮಿಕರನ್ನು ನೇಮಿಸಿಕೊಂಡಲ್ಲಿ ಎರಡು ವರ್ಷ ಜೈಲು

 ಬಾಲಕಾರ್ಮಿಕರನ್ನು ನೇಮಿಸಿಕೊಂಡಲ್ಲಿ ಎರಡು ವರ್ಷ ಜೈಲು
Share this post

ಉಡುಪಿ, ಫೆಬ್ರವರಿ 16, 2021: ಜಿಲ್ಲೆಯಲ್ಲಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಬಾಲ ಕಾರ್ಮಿಕರನ್ನು ನೇಮಿಸಿಕೊಳ್ಳುವುದು ಅಥವಾ ದುಡಿಸಿಕೊಳ್ಳುವುದು ಅಪರಾಧವಾಗಿದ್ದು, ಅಂತವರಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದರು.

ಅವರು ಇಂದು ನಗರದ ಮಣಿಪಾಲ್‌ನ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ
ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರ ತಿದ್ದುಪಡಿ ಕಾಯ್ದೆ ಕುರಿತ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಹೆಚ್ಚಿನ ಜನ ಶಿಕ್ಷಣ ಹೊಂದಿ ಪ್ರಜ್ಞಾವಂತರಾಗಿದ್ದು, ಕಾನೂನಿನ ಅರಿವು ಹೊಂದಿ ಅದನ್ನು ಗೌರವಿಸಿ, ಪಾಲನೆ ಮಾಡುವಂತವರಾಗಿದ್ದಾರೆ.

ಜಿಲ್ಲೆಯಲ್ಲಿ ಯಾವುದೇ ಬಾಲ ಕಾರ್ಮಿಕರನ್ನು ನಿಯೋಜಿಸಿಕೊಳ್ಳದೇ ಬಾಲ ಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸಬೇಕು.

ಬಾಲ ಕಾರ್ಮಿಕರನ್ನು ನಿಯೋಜಿಸಿಕೊಂಡಲ್ಲಿ ಅಂತವರಿಗೆ ಆರು ತಿಂಗಳಿಗಿಂತ ಕಡಿಮೆ ಇಲ್ಲದಂತೆ ಎರಡು ವರ್ಷದವರೆಗೆ ಜೈಲು ಶಿಕ್ಷೆ ಅಥವಾ 20,000 ರೂ. ಯಿಂದ 50,000 ರೂ. ವರೆಗೆ ದಂಡ ವಿಧಿಸಲಾಗುವುದು ಎಂದರು.

ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ವೃತ್ತಿಯನ್ನು ಅರಸಿ ಬರುವ ಕಾರ್ಮಿಕರು ತಮ್ಮ ಮಕ್ಕಳು ದುಡಿಮೆಗೆ ಹೋದಲ್ಲಿ ಹಣ ಗಳಿಸಬಹುದು ಎಂಬ ಮನೋಭಾವದಿಂದ ಸಣ್ಣ ಪುಟ್ಟ ಉದ್ಯೋಗಳಿಗೆ ಕಳುಹಿಸಲು ಮುಂದಾಗುತ್ತಾರೆ.

ಇದಕ್ಕೆ ಕಡಿವಾಣ ಹಾಕಿ ಅವರುಗಳು ಶಾಲೆಗೆ ಹೋಗುವಂತೆ ಮಾಡಿ, ಶಿಕ್ಷಣವಂತರನ್ನಾಗಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಪ್ರಸ್ತುತ ಸಾಲಿಗೆ ಮಕ್ಕಳನ್ನು ದುಡಿಸಿಕೊಳ್ಳುವ ಎರಡು ಪ್ರಕರಣಗಳಿವೆ. ಮುಂದಿನ ದಿನಗಳಲ್ಲಿ ಯಾವುದೇ ಪ್ರಕರಣಗಳಾಗದಂತೆ ಮಾಡುವ ಜವಾಬ್ದಾರಿ ಸಾರ್ವಜನಿಕರ ಹಾಗೂ ಅಧಿಕಾರಿಗಳ ಮೇಲಿದೆ ಎಂದರು.

ಮಲ್ಪೆಯ ಮೀನುಗಾರಿಕಾ ಬಂದರಿನಲ್ಲಿ ಮುಂಜಾನೆಯ ವೇಳೆಯಲ್ಲಿ ಹೊರ ಜಿಲ್ಲೆಯಿಂದ ಬಂದಿರುವ ಕಾರ್ಮಿಕರ ಮಕ್ಕಳು ಮೀನುಗಳನ್ನು ಆರಿಸುವ ಕೆಲಸ ಮಾಡುತ್ತಾರೆ. ಅಧಿಕಾರಿಗಳು ಆಗಿಂದ್ದಾಗೆ ಅನಿರೀಕ್ಷಿತ ಭೇಟಿ ಮಾಡಿ, ಇಂತಹ ಪ್ರಕರಣಗಳು ಕಂಡುಬಂದಲ್ಲಿ ಅವರುಗಳ ಪೋಷಕರ ಗಮನಕ್ಕೆ ತಂದು ಪೂರ್ಣಪ್ರಮಾಣದಲ್ಲಿ ಅದನ್ನು ನಿಲ್ಲಿಸಬೇಕು ಎಂದರು.

ಸರ್ಕಾರಿ ಅಭಿಯೋಜಕ ಪ್ರಕಾಶ್ ಚಂದ್ರ ಶೆಟ್ಟಿ ಮಾತನಾಡಿ, ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ಸಾಮಾನ್ಯವಾಗಿ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬದವರ ಮಕ್ಕಳು ಬಾಲ ಕಾರ್ಮಿಕರುಗಳಾಗುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಎಚ್ಚರಿಸಬೇಕು.

ಹಾಗೂ ಸಂವಿಧಾನದಲ್ಲಿ ಮಕ್ಕಳ ರಕ್ಷಣೆಗಾಗಿ ಅನೇಕ ಕಾನೂನುಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಚಾಚೂ ತಪ್ಪದೇ ಅನುಷ್ಠಾನಗೊಳಿಸಬೇಕು ಎಂದರು.

Subscribe to our newsletter!

Other related posts

error: Content is protected !!