ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದಿಂದ ಆಶಾದಾಯಕ ಪರಿವರ್ತನೆ: ಡಾ. ಬಿ. ಯಶೋವರ್ಮ

 ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದಿಂದ ಆಶಾದಾಯಕ ಪರಿವರ್ತನೆ: ಡಾ. ಬಿ. ಯಶೋವರ್ಮ
Share this post

ಬೆಳ್ತಂಗಡಿ, ಫೆ ,12, 2021: ಸೃಜನಾತ್ಮಕ ಚಿಂತನೆ, ಪ್ರಾಯೋಗಿಕ ಕಾರ್ಯ, ಕ್ಷೇತ್ರ ಸಂದರ್ಶನ, ಚರ್ಚೆ, ಹೊಸ ತರದ ಯೋಚನಾ ಲಹರಿ ಮೊದಲಾದ ಹಲವಾರು ಧನಾತ್ಮಕ ಅಂಶಗಳನ್ನೊಳಗೊಂಡ ರಾಷ್ಟ್ರೀಯ ಶಿಕ್ಷಣ ನೀತಿ ಸಮಗ್ರ ಪರಿವರ್ತನೆಗೆ ಆಶಾದಾಯಕವಾಗಿದೆ. ಇದರ ಸಮರ್ಪಕ ಅನುಷ್ಠಾನದಿಂದ ದೇಶದ ಪ್ರಗತಿ ಸಾಧ್ಯ ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಹೇಳಿದರು.

ಅವರು ಶುಕ್ರವಾರ ಉಜಿರೆಯಲ್ಲಿ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ಆಶ್ರಯದಲ್ಲಿ ಶ್ರೀ ಸಿದ್ಧವನ ಗುರುಕುಲದಲ್ಲಿ ಆಯೋಜಿಸಿದ “ರಾಷ್ಟ್ರೀಯ ಶಿಕ್ಷಣ ನೀತಿ – 2020: ಅನುಷ್ಠಾನದ ಸವಾಲುಗಳು” ಎಂಬ ವಿಚಾರ ಸಂಕಿರಣದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ರಾಷ್ಟ್ರೀಯ ಶಿಕ್ಷಣ ನೀತಿಯ ಯಶಸ್ವಿ ಅನುಷ್ಠಾನಕ್ಕೆ ಶಿಕ್ಷಕರ, ರಕ್ಷಕರ ಹಾಗೂ ವಿದ್ಯಾರ್ಥಿಗಳ ಮನೋಭಾವ ಬದಲಾಗಬೇಕು. ಶಿಕ್ಷಕರು ಮತ್ತು ರಕ್ಷಕರ ಮಾರ್ಗದರ್ಶನದೊಂದಿಗೆ ವಿದ್ಯಾರ್ಥಿಗಳ ಸೃಜನಾತ್ಮಕ ಚಟುವಟಿಕೆಗಳಿಗೆ ಹೆಚ್ಚಿನ ಅವಕಾಶವಿದೆ. ವಿನೂತನ ವಿಚಾರಗಳನ್ನೊಳಗೊಂಡ ರಾಷ್ಟ್ರೀಯ ಶಿಕ್ಷಣದ ಎಲ್ಲಾ ಹಂತಗಳಿಗೂ ಉಪಯುಕ್ತ ಮಾರ್ಗ ಸೂಚಿ ನೀಡಿದೆ. ಕೆಲವು ಸವಾಲುಗಳಿದ್ದರೂ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ಅಡಚಣೆಯಾಗಲಾರದು ಎಂದು ಅವರು ಅಭಿಪ್ರಾಯ ಪಟ್ಟರು.

ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆಯವರು ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಶುಭಾಶಂಸನೆ ಮಾಡಿದ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ನಿವೃತ್ತ ಕುಲಸಚಿವ ಪ್ರೊ. ಎ.ಎಂ. ನರಹರಿ, ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ಪೂರ್ವಭಾವಿಯಾಗಿ ಎರಡು ವರ್ಷ ನಿರಂತರ ಚರ್ಚೆ , ಸಂವಾದ, ಸಮಾಲೋಚನೆಯೊಂದಿಗೆ ಸಾಕಷ್ಟು ಚಿಂತನ-ಮಂಥನದೊಂದಿಗೆ ಅನುಷ್ಠಾನಗೊಳಿಸಲಾಗಿದೆ. ಶಿಕ್ಷಣದ ಎಲ್ಲಾ ಹಂತಗಳಲ್ಲಿ ಸಮಾನತೆ ಮತ್ತು ಉತ್ತಮ ಗುಣಮಟ್ಟ ಕಾಪಾಡಲು ಆದ್ಯತೆ ನೀಡಲಾಗಿದೆ. ಮಾತೃಭಾಷಾ ಮಾಧ್ಯಮದಲ್ಲಿ ಶಿಕ್ಷಣದ ಮೂಲಕ ಸಾಮಾಜಿಕ ನ್ಯಾಯ ಒದಗಿಸಲು ಪ್ರಯತ್ನಿಸಲಾಗಿದೆ ಎಂದು ಹೇಳಿದರು.

ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ. ಎಸ್. ಸತೀಶ್ಚಂದ್ರ ಅಧ್ಯಕ್ಷತೆ ವಹಿಸಿದರು.

ಮಂಗಳೂರು ವಿಶ್ವವಿದ್ಯಾಲಯದ ನೆಹರೂ ಚಿಂತನ ಕೇಂದ್ರದ ನಿರ್ದೇಶಕ ಪ್ರೊ. ರಾಜಾರಾಮ ತೋಳ್ಪಾಡಿ ಉನ್ನತ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಯೆ ಹಾಗೂ ಬೆಳಾಲು ಎಸ್.ಡಿ.ಎಂ. ಹೈಸ್ಕೂಲಿನ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಚೊಕ್ಕಾಡಿ ಶಾಲಾ ಶಿಕ್ಷಣದಲ್ಲಿ ಬದಲಾವಣೆಗಳ ಬಗ್ಯೆ ಮಾಹಿತಿ ನೀಡಿದರು.

ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕರಾದ ಅವರವಿಂದ ಚೊಕ್ಕಾಡಿ ಉಪಸಂಹಾರದೊಂದಿಗೆ ಸಮಾರೋಪ ಭಾಷಣ ಮಾಡಿದರು.

ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಿ.ಪಿ. ಸಂಪತ್ ಕುಮಾರ್ ಸ್ವಾಗತಿಸಿದರು. ಎಸ್.ಡಿ.ಎಂ. ಆಂಗ್ಲಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯ ಮನಮೋಹನ್ ನಾಯ್ಕ್ ಧನ್ಯವಾದವಿತ್ತರು.
ಡಾ. ಬಿ.ಎ. ಕುಮಾರ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.

Subscribe to our newsletter!

Other related posts

error: Content is protected !!