ಅರುವ ಶ್ರೀಧರ ಭಟ್ಟರಿಗೆ ಕದ್ರಿ ಯಕ್ಷ ಸಮ್ಮಾನ್ ಪ್ರಶಸ್ತಿ


ಮಂಗಳೂರು, ಫೆ 02, 2021: ಕದ್ರಿ ಬಾಲ ಯಕ್ಷಕೂಟದ ವತಿಯಿಂದ ನೀಡಲಾಗುವ ಕದ್ರಿ ಯಕ್ಷ ಸಮ್ಮಾನ್ ಪ್ರಶಸ್ತಿಗೆ ಈ ಬಾರಿ ಖ್ಯಾತ ಯಕ್ಷಗಾನ ಕಲಾವಿದ ಅರುವ ಶ್ರೀಧರ ಭಟ್ ಬರಮೇಲು ಆಯ್ಕೆಯಾಗಿದ್ದಾರೆ.
ಅರುವ ಕೊರಗಪ್ಪ ಶೆಟ್ಟರು, ಸೂರಿಕುಮೇರು ಗೋವಿಂದ ಭಟ್ಟರು, ಕುಬಣೂರು, ಕಾವೂರು ಕೇಶವ ಭಟ್ಟರ ಗರಡಿಯಲ್ಲಿ ಪಳಗಿರುವ ಶ್ರೀಧರ ಭಟ್ಟರಿಗೆ ಈಗ 70 ವರ್ಷ. ಆಳದಂಗಡಿ ಸೋಮನಾಥೇಶ್ವರ ಮೇಳ, ಕೊಲ್ಲೂರು, ಮಲ್ಲ ಮೇಳಗಳಲ್ಲಿ ಕಲಾ ಸೇವೆ ಮಾಡಿದವರು. ಕೀಚಕ, ದ್ರೌಪದಿ, ಮಹಿಷಾಸುರ, ಭೀಮ ಮೊದಲಾದ ಪಾತ್ರಗಳಿಗೆ ಪ್ರಸಿದ್ಧರು.
ಬೆಳ್ತಂಗಡಿ ಬಳಂಜದ ಕಂಚಿನಡ್ಕ ಶ್ರೀ ನಾಗ ಬ್ರಹ್ಮ- ಮೂಜುಲ್ನಾಯ- ಬ್ರಹ್ಮಸ್ಥಾನದಲ್ಲಿ ಫೆ. 4 ರಂದು ನಡೆಯುವ ಉತ್ಸವ ಸಂದರ್ಭ ಮಧ್ಯಾಹ್ನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಸಮಾರಂಭದಲ್ಲಿ ಕಂಚಿನಡ್ಕ ಬ್ರಹ್ಮಸ್ಥಾನ ಸಮಿತಿ ಅಧ್ಯಕ್ಷ ದಯಾನಂದ ಶೆಟ್ಟಿ ಭಾಗವಹಿಸುವರು ಎಂದು ಬಾಲ ಯಕ್ಷಕೂಟದ ಸಂಚಾಲಕ ಕದ್ರಿ ರಾಮಚಂದ್ರ ಭಟ್ ಎಲ್ಲೂರು ತಿಳಿಸಿದ್ದಾರೆ.