ಪ್ರತೀ ತಾಲೂಕಿನಲ್ಲಿ ಗೋಶಾಲೆ ನಿರ್ಮಾಣಕ್ಕೆ ಜಾಗ ಗುರುತಿಸಿ : ಜಿಲ್ಲಾಧಿಕಾರಿ ಜಿ.ಜಗದೀಶ್
ಉಡುಪಿ, ಜನವರಿ 29, 2021: ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕನಿಷ್ಠ 1 ರಿಂದ 2 ಗೋಶಾಲೆಗಳನ್ನು ನಿರ್ಮಿಸಲು ಅಗತ್ಯವಿರುವ ಜಾಗವನ್ನು ಗುರುತಿಸಿ ಕಾಯ್ದಿರಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಅವರು ಶುಕ್ರವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಾಣಿ ದಯಾ ಸಂಘದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರ್ನಾಟಕ ಜಾನುವಾರು ಹತ್ಯೆ ಪ್ರತಿಭಂದಕ ಮತ್ತು ಸಂರಕ್ಷಣೆ ನಿಯಮ 2020 ನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ, ರೈತರು ಮತ್ತು ಸಾರ್ವಜನಿಕರು ತಮ್ಮಲ್ಲಿನ ಅನುತ್ಪಾದಕ ಜಾನುವಾರುಗಳು, ಅಪಘಾತಗೊಂಡ ಜಾನುವಾರು, ಮತ್ತಿತರ ಜಾನುವಾರುಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿದಾಗ, ಅವುಗಳನ್ನು ಪೋಷಿಸಲು ಅನುಕೂಲವಾಗುವಂತೆ ಪ್ರತಿಯೊಂದು ತಾಲೂಕಿನಲ್ಲಿ ಗೋಶಾಲೆಗಳನ್ನು ಸ್ಥಾಪಿಸುವುದು ಅಗತ್ಯವಾಗಿದ್ದು, ಇದಕ್ಕಾಗಿ ಸೂಕ್ತ ಸ್ಥಳಾವಕಾಶವನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಡಿ.ಸಿ. ಸೂಚನೆ ನೀಡಿದರು.
ಗೋಶಾಲೆಗಳನ್ನು ಆರಂಭಿಸುವ ಸಂದರ್ಭದಲ್ಲಿ, ಅದೇ ಸ್ಥಳದಲ್ಲಿ ಮೇವು ಬೆಳೆಯಲು ಸಾಧ್ಯವಿರುವಂತಹ ಜಾಗವನ್ನು ಗುರುತಿಸುವಂತೆ ನೀಲಾವರ ಗೋಶಾಲೆಯ ಟ್ರಸ್ಟಿ ಡಾ.ಸರ್ವೋತ್ತಮ ಉಡುಪ ಹೇಳಿದರು.
ಸಭೆಯಲ್ಲಿ ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಪಶುಪಾಲನಾ ಇಲಾಖೆಯ ವೈದ್ಯಾಧಿಕಾರಿಗಳು ಹಾಗೂ ಪ್ರಾಣಿ ದಯಾ ಸಂಘದ ಸದಸ್ಯರು ಉಪಸ್ಥಿತರಿದ್ದರು.