ಉಜಿರೆ ವಿಜಯೋತ್ಸವ ವಿವಾದ: ನಿಷ್ಪಕ್ಷ ತನಿಖೆಗೆ ಮಾಜಿ ಮೇಯರ್ ಕೆ.ಅಶ್ರಫ್ ಆಗ್ರಹ
ಮಂಗಳೂರು, ಜನವರಿ 02, 2021: ಉಜಿರೆ ವಿಜಯೋತ್ಸವ ವಿವಾದಕ್ಕೆ ಸಂಬಂಧಿಸಿದಂತೆ ಪೊಲೀಸರ ಕ್ರಮ ಖಂಡಿಸಿರುವ ಮಾಜಿ ಮೇಯರ್ ಹಾಗೂ ಮುಸ್ಲಿಮ್ ಒಕ್ಕೂಟ ಅಧ್ಯಕ್ಷ ಕೆ.ಅಶ್ರಫ್, ಪ್ರಕರಣದ ನಿಷ್ಪಕ್ಷ ತನಿಖೆಗೆ ಆಗ್ರಹಿಸಿದ್ದಾರೆ.
“ಪಕ್ಷವೊಂದರ ಕಾರ್ಯಕರ್ತರು ಗೆಲುವಿನ ಸಂಭ್ರಮಾಚರಣೆಯ ವೇಳೆ ಪಾಕಿಸ್ತಾನ ಝಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆಂಬ ವದಂತಿಯ ಆಧಾರದಲ್ಲಿ ಕೆಲವು ಯುವಕರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಪ್ರಥಮ ವರ್ತಮಾನ ವರದಿ ದಾಖಲಿಸಿ,ಪೊಲೀಸರು ಈ ಬಗ್ಗೆ ಕೂಲಂಕಷ ತನಿಖೆ ನಡೆಸದೆ,ಪ್ರಕರಣ ದ ಸತ್ಯಾಸತ್ಯತೆ ಅರಿಯದೆ ಅಮಾಯಕ ಯುವಕರನ್ನು ಬಂಧಿಸಿರುವುದು ಖಂಡನೀಯ,” ಎಂದು ಕೆ.ಅಶ್ರಫ್ ಹೇಳಿದ್ದಾರೆ.
“ಸಾಮಾಜಿಕ ತಾಣಗಳಲ್ಲಿ ಈ ಬಗ್ಗೆ ಪರ ವಿರೋಧ ಚರ್ಚೆಗಳೂ ನಡೆಯುತ್ತಿದೆ. ಘಟನೆಯ ಸತ್ಯಾಸತ್ಯತೆ ಬಗ್ಗೆ ಪೋಲೀಸರು ಸಾರ್ವಜನಿಕರಿಗೆ ನೈಜ ಮಾಹಿತಿ ತಿಳಿಸದೇ ಇದ್ದದ್ದು ವ್ಯಾಪಕ ಸಂಶಯಕ್ಕೆ ಎಡೆಮಾಡಿ ಕೊಟ್ಟಿದೆ. ಪಾಕಿಸ್ತಾನಕ್ಕೆ ಝಿಂದಾಬಾದ್ ಕೂಗಿದ್ದೇ ಅದರೆ ಅದು ಅತ್ಯಂತ ಖಂಡನೀಯವಾಗಿದೆ. ಅಂತವರನ್ನು ಕಾನೂನಿನ ಪ್ರಕಾರ ಶಿಕ್ಷಿಸ ಬೇಕಿದೆ. ಆದರೆ ಉಜಿರೆಯಲ್ಲಿ ಪಾಕಿಸ್ತಾನಕ್ಕೆ ಝಿಂದಾಬಾದ್ ಘೋಷಣೆ ಮೊಳಗಿಸಿದ ಎಡಿಟ್ ಮಾಡದ ಒರಿಜಿನಲ್ ವೀಡೀಯೋ ಕ್ಲಿಪನ್ನು ಪೋಲೀಸರು ಸಾರ್ವಜನಿಕರ ಅಗತ್ಯಕ್ಕಾಗಿ ಕೊಡಬೇಕಾಗಿದೆ,” ಎಂದು ಹೇಳಿದ್ದಾರೆ.
“ಒಂದು ವೇಳೆ ಇದು ಸುಳ್ಳು ಎಂದಾದಲ್ಲಿ ದೇಶದಲ್ಲಿ ಕ್ಷೋಭೆ ಹರಡುವ ಪೂರ್ವ ಗೃಹ ಪೀಡಿತ ಮಾದ್ಯಮಗಳ ಪಾತ್ರ ಅಪಾರವಿದೆ. ಮಾತ್ರವಲ್ಲ ಸುಳ್ಳು ಪ್ರಕರಣ ದಾಖಲಿಸಿ ಕಾರ್ಯಕರ್ತರಿಗೆ ದೌರ್ಜನ್ಯ ಎಸಗಲಾಗಿದೆ. ಇನ್ನು ಘೋಷಣೆ ಕೂಗಿದ್ದು ನಿಜವೇ ಆಗಿದ್ದರೆ ಅಂತವರನ್ನು ಸಮಾಜವೂ ಬಹಿಷ್ಕರಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಿಷ್ಪಕ್ಷ ತನಿಖೆ ನಡೆಸಬೇಕು.” ಎಂದು ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.