ಜ್ವರ, ಶೀತ, ನೆಗಡಿ ರೋಗಗಳಿಗೆ ಔಷಧಿ ಪಡೆಯುವವರ ಮಾಹಿತಿಯನ್ನು ಕಡ್ಡಾಯವಾಗಿ ಜಿಲ್ಲಾಡಳಿತಕ್ಕೆ ನೀಡಬೇಕು: ಜಿಲ್ಲಾಧಿಕಾರಿ
ಮಂಗಳೂರು, ಡಿಸೆಂಬರ್ 23, 2020: ಖಾಸಗಿ, ಸರ್ಕಾರಿ ಆಸ್ಪತ್ರೆ, ಕ್ಲಿನಿಕ್ ಹಾಗೂ ಮೆಡಿಕಲ್ ಅಂಗಡಿಗಳಲ್ಲಿ ಜ್ವರ, ಶೀತ, ನೆಗಡಿ ರೋಗಗಳಿಗೆ ಔಷಧಿ ಪಡೆಯುವವರ ಮಾಹಿತಿಯನ್ನು ಕಡ್ಡಾಯವಾಗಿ ಜಿಲ್ಲಾಡಳಿತಕ್ಕೆ ನೀಡಬೇಕೆಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಸೂಚಿಸಿದರು.
ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಕೋವಿಡ್-19 ಲಸಿಕೆಯ ಪೂರ್ವ ತಯಾರಿ ಮತ್ತು 2021 ರ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಹಾಗೂ ರೂಪಾಂತರಿತ ಹೊಸ ಕೊರೋನಾ ರೋಗಗದ ಕುರಿತು ಜಿಲ್ಲಾ ಮಟ್ಟದ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದೇಶಗಳಲ್ಲಿ ಕೋವಿಡ್ ಎರಡನೇ ಅಲೆ ಹಾಗೂ ರೂಪಾಂತರಿತ ಹೊಸ ಕೊರೋನ ಸೋಂಕು ಕಂಡು ಬಂದಿದ್ದು ಇಲ್ಲಿಗೂ ಹರಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಆಸ್ಪತ್ರೆಗಳಲ್ಲಿ ಹಾಗೂ ಔಷದಿ ಅಂಗಡಿಗಳಲ್ಲಿ ಜ್ವರ, ಶೀತ, ನೆಗಡಿ, ಕೆಮ್ಮು ಸಂಬಂಧಿತ ರೋಗಕ್ಕೆ ಔಷಧಿ ಪಡೆಯುವವರ ಸಂಪೂರ್ಣ ಮಾಹಿತಿಯನ್ನು ಕಡ್ಡಾಯವಾಗಿ ಪಡೆಯಬೇಕು. ಇವುಗಳನ್ನು ಕಡ್ಡಾಯವಾಗಿ ಸಂಬಂಧಿಸಿದ ಸಾಫ್ಟ್‍ವೇರ್‍ನಲ್ಲಿ ನಮೂದಿಸಲು ಸೂಚಿಸಿದರು.
ಇತರ ಪ್ರಮುಖ ನಿರ್ದೇಶನಗಳು
- ಮದುವೆ ಸೇರಿದಂತೆ ಇನ್ನಿತರ ಸಭಾ ಕಾರ್ಯಕ್ರಮಗಳಲ್ಲಿ 200ಕ್ಕಿಂತ ಅಧಿಕ ಹಾಗೂ ಬಯಲು ಪ್ರದೇಶಗಳಲ್ಲಿ ನಡೆಯುವ ಸಮಾರಂಭಗಳಲ್ಲಿ 500 ಕ್ಕಿಂತ ಅಧಿಕ ಜನ ಪಾಲ್ಗೊಳ್ಳಬಾರದು. ಒಂದು ವೇಳೆ ಮಿತಿ ಮೀರಿದ ಜನ ಪಾಲ್ಗೊಂಡಿರುವುದು ಗಮನಕ್ಕೆ ಬಂದರೆ ಸಂಬಂಧಪಟ್ಟ ಅಧಿಕಾರಿಗಳು ಮುಖ್ಯಸ್ಥರಿಗೆ ಹತ್ತು ಸಾವಿರ ದಂಡ ವಿಧಿಸಬೇಕು. ಮೂರನೇ ಬಾರಿಯೂ ಉಲ್ಲಂಘನೆಯಾದರೆ ಪರವಾನಿಗೆಯನ್ನು ರದ್ದುಗೊಳಿಸಬೇಕು.
- ಸಾಲು ಸಾಲು ರಜೆ, ಹಾಗೂ ಜಿಲ್ಲೆಯಲ್ಲಿ ಧಾರ್ಮಿಕ ಕ್ಷೇತ್ರಗಳು ಹೆಚ್ಚಾಗಿ ಇರುವುದರಿಂದ ಭಕ್ತಾಧಿಗಳು ಹಾಗೂ ಪ್ರವಾಸಿಗರು ಆಗಮಿಸುವ ಸಾಧ್ಯತೆ ಇರುತ್ತದೆ ಹಾಗಾಗಿ ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ 65 ವರ್ಷದ ಮೇಲ್ಪಟ್ಟ ಹಿರಿಯರು ಮತ್ತು 10 ವರ್ಷದೊಳಗಿನ ಮಕ್ಕಳ ಪ್ರವೇಶ ನಿರ್ಬಂಧಿಸಬೇಕು. ಇದಕ್ಕೆ ಸಂಬಂಧಿಸಿದ ಭಿತ್ತಿಪತ್ರಗಳನ್ನು ದೇವಸ್ಥಾನಗಳ ಆವರಣದಲ್ಲಿ ಪ್ರದರ್ಶಿಸಬೇಕು. ದೇವಸ್ಥಾನಕ್ಕೆ ಆಗಮಿಸುವ ಭಕ್ತಾಧಿಗಳು ಕಡ್ಡಾಯವಾಗಿ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಸ್ ಉಪಯೋಗಿಸಿಕೊಳ್ಳುವಂತೆ ಆಡಳಿತ ಮಂಡಳಿಯು ಕ್ರಮ ವಹಿಸಬೇಕು. ಈ ಕಾನೂನುಗಳನ್ನು ಉಲ್ಲಂಘಿಸಿದರೆ ಸಂಬಂಧಪಟ್ಟ ಆಡಳಿತ ಮಂಡಳಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
- ಉದ್ಯೋಗ ನಿಮಿತ್ತ ಕಾಸರಗೋಡು ಸೇರಿದಂತೆ ಇನ್ನಿತರ ಗಡಿಭಾಗದಿಂದ ನಗರಕ್ಕೆ ಆಗಮಿಸುವವರು ಕಡ್ಡಾಯವಾಗಿ 15 ದಿನಕ್ಕೊಮ್ಮೆ ಆರ್‍ಟಿಪಿಆರ್ ಪರೀಕ್ಷೆಗೆ ಒಳಗಾಗಬೇಕು, ಅವರ ಟೆಸ್ಟ್ ವರದಿಯನ್ನು ಉದ್ಯೋಗ ಸಂಸ್ಥೆ ಪಡೆದು ಜಿಲ್ಲಾ ಆರೋಗ್ಯ ಇಲಾಖೆಗೆ ನೀಡಬೇಕು. ಜೊತೆಗೆ ನಗರದಿಂದ ಕಾಸರಗೋಡಿಗೆ ತೆರಳುವವರು ಕೂಡ ಪರೀಕ್ಷೆಗೆ ಒಳಗಾಗಬೇಕು.
- ಈಗಾಗಲೇ ಸರ್ಕಾರವು ಖಾಸಗಿ ಆಸ್ಪತ್ರೆಗಳಲ್ಲಿ ಆರ್.ಪಿ.ಸಿ.ಆರ್ ಪರೀಕ್ಷೆಗೆ 800 ರೂಪಾಯಿ ದರ ನಿಗದಿಪಡಿಸಿದ್ದು, ಹೆಚ್ಚುವರಿ ದರ ಪಡೆದುಕೊಂಡ ಬಗ್ಗೆ ದೂರು ಬಂದರೆ ಅಂತಹ ಆಸ್ಪತ್ರೆಗಳಿಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು.
- ಮಾರುಕಟ್ಟೆ, ಬಸ್‍ಸ್ಟಾಂಡ್, ಇನ್ನಿತರ ಪ್ರದೇಶಗಳಲ್ಲಿ ಸಾರ್ವಜನಿಕರು ವ್ಯಕ್ತಿಗತ ಅಂತರ ಪಾಲಿಸಿ, ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ಯಾನಿಟೈಸ್ ಬಳಸಿಕೊಂಡು ತಮ್ಮ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಬಸ್‍ಗಳಲ್ಲಿ ಡ್ರೈವರ್ ಹಾಗೂ ಕಂಡೆಕ್ಟರ್ ಸೇರಿದಂತೆ ಇನ್ನಿತರ ಸಾರಿಗೆ ವಾಹನಗಳಲ್ಲಿ ಮಾಸ್ಕ್ ಧರಿಸದೆ ಓಡಾಡುವುದು ಗಮನಕ್ಕೆ ಬಂದರೆ ಸಾರಿಗೆ ಅಧಿಕಾರಿಗಳು ನಿಗದಿತ ದಂಡ ವಿಧಿಸಿ ಎಚ್ಚರಿಕೆ ನೀಡಬೇಕು.
- ತಾಲೂಕು ಮಟ್ಟದಲ್ಲಿ ತಹಶೀಲ್ದಾರ್, ತಾಲೂಕು ಪಂಚಾಯತ್ ಇ.ಓ ಅಧಿಕಾರಿಗಳು ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಸಭೆ ನಡೆ ಸಿ ಎಂದ ಅವರು, ಜನ ಸಾಮಾನ್ಯರೊಂದಿಗೆ ಕೋವಿಡ್ ಸೋಂಕು ತಡೆಯುವ ಬಗ್ಗೆ ಅರಿವು ಮೂಡಿಸುವುದರೊಂದಿಗೆ, ಮುನ್ನೆಚ್ಚರಿಕಾ ಕ್ರಮಗಳು ಪರಿಪಾಲನೆಯಾಗುವಂತೆ ನೋಡಿಕೊಳ್ಳಬೇಕು.
- ತಾಲೂಕು ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ನಗರ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಪರೀಕ್ಷೆಯನ್ನು ಹೆಚ್ಚು ಹೆಚ್ಚು ಮಾಡಬೇಕು. ಖಚಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಟೈನ್‍ಮೆಂಟ್ ಪ್ರದೇಶಗಳನ್ನು ಗುರುತಿಸುವುದರ ಜೊತೆಗೆ ಅವರ ಕುಟುಂಬ ವರ್ಗದವರನ್ನು ಹೋಮ್ ಕ್ವಾರಂಟೈನ್‍ನಲ್ಲಿ ಇರಿಸಿ ನಿಗಾವಹಿಸಬೇಕು.
- ಅಂಗಡಿ, ಮಾಲ್, ಮಾರುಕಟ್ಟೆಗಳಲ್ಲಿ ಗ್ರಾಹಕರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇದ್ದರೆ ಅಂತಹ ಸಂದರ್ಭದಲ್ಲಿ ಅಂಗಡಿಯ ಮಾಲೀಕನಿಗೆ ದಂಡ ವಿಧಿಸಬೇಕು.
- ಆಶಾ ಕಾರ್ಯಕರ್ತೆಯರು ವಿದೇಶದಿಂದ ಬಂದವರ ಮಾಹಿತಿ ಪಡೆದು ಆರೋಗ್ಯ ಕೇಂದ್ರಕ್ಕೆ ನೀಡಬೇಕು, ಅವರನ್ನು ಕಡ್ಡಾಯವಾಗಿ ಆರ್‍ಟಿಪಿಸಿರ್ ಪರೀಕ್ಷೆಗೆ ಒಳಪಡಿಸಬೇಕು.
- ಕೋವಿಡ್-19 ಲಸಿಕೆಯು ಲಭ್ಯತೆ ಅನುಗುಣವಾಗಿ ಹಾಗೂ ಆದ್ಯತೆಯ ಅನುಸಾರ ಮೂರು ಹಂತದಲ್ಲಿ ಲಸಿಕೆ ನೀಡಲಾಗುತ್ತದೆ. ಲಸಿಕೆಯು ನೊಂದಣಿ ಮಾಡಿಕೊಂಡವರಿಗೆ ಪಡೆಯಲು ಅವಕಾಶ ಇರುತ್ತದೆ. ಲಸಿಕೆ ಹಂಚಿಕೆ ಸಂಬಂಧಿಸಿದಂತೆ ತಹಶೀಲ್ದಾರ್ ಹಾಗೂ ತಾಲೂಕು ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಜೊತೆಗೆ ಸಿಬ್ಬಂದಿಗಳನ್ನು ವಿಶೇಷ ತರಬೇತಿ ನೀಡಬೇಕು.
ಜಿಲ್ಲೆಯಲ್ಲಿ 5 ವರ್ಷದೊಳಗಿನ ಯಾವುದೇ ಮಗು ಪೊಲೀಯೋ ಲಸಿಕೆಯಿಂದ ವಂಚಿತರಾಗಬಾರದು, ಆದುದರಿಂದ ಪಾಲಿಕೆಯ ವ್ಯಾಪ್ತಿ ಹಾಗೂ ಇನ್ನಿತರ ಪ್ರದೇಶಗಳಲ್ಲಿರುವ ಕಟ್ಟಡ ಕಾರ್ಮಿಕರ ಮಕ್ಕಳು, ವಲಸೆ ಬಂದ ಕುಟುಂಬ, ಕೊಳಚೆ ಪ್ರದೇಶದಲ್ಲಿ ವಾಸವಿರುವ ಮಕ್ಕಳನ್ನು ಗುರುತಿಸಿ ವರದಿಯನ್ನು ಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ನೀಡಬೇಕು. ಸಾರ್ವಜನಿಕರಿಗೆ ಜಿಂಗಲ್, ಭಿತ್ತಿಪತ್ರ ಡಿಜಿಟಲ್ ಎಲ್.ಇ.ಡಿ ಪರದೆ, ಜಾಹೀರಾತು, ಸೇರಿದಂತೆ ಮತ್ತಿತರ ಚಟುವಟಿಕೆಯ ಮೂಲಕ ಹೆಚ್ಚಿನ ಪ್ರಚಾರ ನೀಡಿ ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು.
ಜಿಲ್ಲಾ ಆರೋಗ್ಯಾದಿಕಾರಿ ರಾಮಚಂದ್ರ ಬಾಯರಿ ಮಾತನಾಡಿ, ಜನವರಿ 17 ರಂದು 0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಬೂತ್ ಮಟ್ಟದಲ್ಲಿ ಪಲ್ಸ್ ಪೊಲೀಯೋ ಕಾರ್ಯಕ್ರಮ ಎಲ್ಲಾ ಅಂಗನವಾಡಿ ಕೇಂದ್ರ, ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಡೆಯಲಿದೆ. ಜನವರಿ 18, 19, 20 ರಂದು ಮನೆ ಭೇಟಿ ಮಾಡುವ ಮೂಲಕ ಪೋಲಿಯೋ ಲಸಿಕೆ ನೀಡಲಾಗುತ್ತದೆ. ಕೋವಿಡ್ ಮುಂಜಾಗೃತಾ ಕ್ರಮ ಕಟ್ಟುನಿಟ್ಟಾಗಿ ಪಾಲಿಸುವುದು ಅಗತ್ಯ. ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆಯುವ ಮಕ್ಕಳ ಸಂಖ್ಯೆ ಹೆಚ್ಚಿದರೆ ಬೂತ್ ಸಂಖ್ಯೆಯನ್ನು ಜಾಸ್ತಿ ಮಾಡಬೇಕು ಎಂದು ಸೂಚಿಸಿದರು.
ಜನರು ಹೆಚ್ಚು ಆತಂಕಕ್ಕೊಳಗಾಗದೆ ಹಾಗೂ ಭಯ ಪಡದೆ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಕೊವಿಡ್ ಪರೀಕ್ಷೆ ಮಾಡಬೇಕು. ವಿದೇಶಿ ಪ್ರಯಾಣಿಕರು ಕಡ್ಡಾಯವಾಗಿ ಹೋ ಕ್ವಾರಂಟೈನ್‍ಗೆ ಒಳಗಾಗಿ ಆರ್‍ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು. ಈಗಾಗಲೇ ಜಿಲ್ಲೆಗೆ ಆಗಮಿಸಿದ 49 ವಿದೇಶಿ ಪ್ರಯಾಣಿಕರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದೆ, ಇದರಲ್ಲಿ 35 ಮಂದಿಯ ವರದಿ ನೆಗೆಟಿವ್ ಬಂದಿದೆ, ಬಾಕಿ ಉಳಿದಿರುವವರ ಪರೀಕ್ಷೆ ಪ್ರಕ್ರಿಯೆಯಲ್ಲಿರುತ್ತದೆ ಎಂದು ಹೆಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪ, ಐಎಎಸ್ ಪ್ರೋಬೇಷನರಿ ಆಫಿಸರ್ ಮೋನಾ ರೋತ್, ಆರ್.ಸಿಹೆಚ್ ಅಧಿಕಾರಿ ಡಾ. ರಾಜೇಶ್, ಮಹಾನಗರ ಪಾಲಿಕೆಯ ವೈದ್ಯಾಧಿಕಾರಿ ಡಾ.ಮಂಜಯ್ಯ ಶೆಟ್ಟಿ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.