ನಾಳೆ ಪುರಭವನದಲ್ಲಿ ಪಿಎಂ ಸ್ವನಿಧಿ ಬೃಹತ್ ಸಾಲ – ಉತ್ಸವ
ಮಂಗಳೂರು,ನ 30, 2020: ಪ್ರಧಾನಮಂತ್ರಿ ಬೀದಿಬದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ ದ.ಕ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ದ.ಕ ಜಿಲ್ಲಾಮಟ್ಟದ ಬೃಹತ್ ಪಿಎಂಸ್ವನಿಧಿ ಸಾಲ-ಉತ್ಸವ ಹಾಗೂ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಕಾರ್ಯಾಗಾರವನ್ನು ಡಿಸೆಂಬರ್ 1 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಪುರಭವನದಲ್ಲಿ ಆಯೋಜಿಸಲಾಗಿದೆ.
ದ.ಕ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ಮುಂದಾಳತ್ವದಲ್ಲಿ ಹಾಗೂ ಶಾಸಕರ ಸಹಕಾರದೊಂದಿಗೆ ಸಮಾವೇಶವನ್ನು ಆಯೋಜಿಸಲಾಗುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಮಾವೇಶ ಉದ್ಘಾಟಿಸುವರು.
ಉತ್ಸವದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಸ್ಥಳದಲ್ಲಿಯೇ ಸಾಲ ಮಂಜೂರು ಮಾಡುವುದು, ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಬೀದಿಬದಿ ವ್ಯಾಪಾರಿಗಳಿಗೆ ಹಾಗೂ ಕಿಸಾನ್ ಕ್ರೆಡಿಟ್ ಕಾರ್ಡ್ ಮೀನುಗಾರಿಕಾ ಮತ್ತು ಹೈನುಗಾರಿಕೆಯ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಸಾಲ ಮಂಜೂರಾತಿ ಪತ್ರಗಳನ್ನು ವಿತರಿಸುವುದು, ಸಾಲ ಮಂಜೂರಾತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವುದು, ಕೇಂದ್ರ ಸರ್ಕಾರದ ವಿವಿಧ ಜನಪರ ಯೋಜನೆಗಳಾದ ಮುದ್ರ, ಪಿ.ಎಂ.ಇ.ಜಿ.ಪಿ, ಪಿ.ಎಂ.ಎ.ವೈ ಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮಗಳು ಏಕಕಾಲದಲ್ಲಿ ನಡೆಯಲಿದೆ.
ಜಿಲ್ಲೆಯಾದ್ಯಂತ ಕಾರ್ಯಾಚರಿಸುತ್ತಿರುವ ವಿವಿಧ ಬ್ಯಾಂಕುಗಳು ತಮ್ಮ ಕೌಂಟರ್‍ಗಳನ್ನು ಅಳವಡಿಸಲಿದ್ದು, ಸ್ಥಳದಲ್ಲಿಯೇ ಸಾಲ ಮಂಜೂರಾತಿಗೆ ಕ್ರಮ ಕೈಗೊಳ್ಳಲಿವೆ ಹಾಗೂ ಬೀದಿಬದಿ ವ್ಯಾಪಾರಿಗಳು ಡಿಜಿಟಲ್ ಪಾವತಿಗಾಗಿ ಕ್ಯೂಆರ್ ಕೋಡ್ QR code/UPID ಸೌಲಭ್ಯವನ್ನು ಮೊಬೈಲ್ ಫೋನ್‍ಗಳಲ್ಲಿ ಅಳವಡಿಸಿಕೊಳ್ಳಲು ಫೋನ್ ಪೇ ಹಾಗೂ ಏರ್‍ಟೆಲ್ ಪೇಮೆಂಟ್ ಬ್ಯಾಂಕ್ ಪೇಮೆಂಟ್ ಆಗ್ರಿಗೇಟರ್ಸ್ ತಮ್ಮ ಸೇವೆಯನ್ನು ಒದಗಿಸಲಿದ್ದಾರೆ ಎಂದು ಮಂಗಳೂರು ಮಹಾನಗರಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.