ಟೊಮ್ಯಾಟೊ ಬೆಳೆಯಲ್ಲಿ ಎಲೆ ಸುರಂಗ ಹಾಗೂ ಕಾಯಿಕೊರಕ/ಹೂಜಿ ಹುಳುವಿನ ನಿಯಂತ್ರಣ ಕ್ರಮಗಳು
ಚಿಕ್ಕಮಗಳೂರು, ನ 22: ಜಿಲ್ಲೆಯಲ್ಲಿ ಟೊಮ್ಯಾಟೊ ಬೆಳೆಗೆ ಎಲೆ ಸುರಂಗ ಹಾಗೂ ಕಾಯಿಕೊರೆಯುವ /ಹೂಜಿ ಹುಳುವಿನ ಕೀಟವು ತುಂಬಾ ಹಾನಿಯನ್ನುಂಟು ಮಾಡುತ್ತಿದ್ದು, ಈ ಕೀಟವು ನಮ್ಮ ದೇಶದಲ್ಲಿ ಹೊಸದಾಗಿ ಪರಿಚಯವಾಗಿದ್ದು, ಟೊಮ್ಯಾಟೊ ಜಾತಿಗೆ ಸೇರಿದ ಬೆಳೆಗಳಿಗೆ ಹಾನಿಯನ್ನುಂಟು ಮಾಡುತ್ತದೆ.
ಹಾನಿಯ ಲಕ್ಷಣಗಳು :
ಮರಿಹುಳು ಎಳೆಯ ಎಲೆಗಳು, ಹೂವು ಮತ್ತು ಎಳೆಯ ಕಾಂಡವನ್ನು ಕೊರೆಯಲು ಶುರು ಮಾಡುತ್ತದೆ. ಈ ಕೀಟವು ಹಸಿರು ಪದಾರ್ಥವನ್ನು ಕೆರೆದು ತಿನ್ನುವುದರಿಂದ ಎಲೆಯ ಮೇಲೆ ಸುರಂಗಗಳನ್ನು ಮತ್ತು ಜಾಲರಿಯಂತಹ ಪದರವನ್ನು ಕಾಣಬಹುದು.
ನಂತರ ಎಲೆಯ ಎರಡು ಕಡೆ ಮಚ್ಚೆಗಳನ್ನು ಕಾಣಬಹುದು. ಎಲೆಯ ಬೆಳವಣಿಗೆ ಕುಂಠಿತಗೊಂಡು ನಂತರ ಎಲೆಯು ಒಣಗಿ ಉದುರಿ ಹೋಗುತ್ತದೆ ಹಾಗೂ ಎಲೆಗಳು ತೀವ್ರ ಹಾನಿಗೊಳಗಾಗಿ ಸುಟ್ಟಂತೆ ಕಾಣುತ್ತವೆ. ಮರಿ ಹುಳು ಮಧ್ಯಮ ಗಾತ್ರದ ಕಾಯಿಗಳು ಮತ್ತು ಹಣ್ಣುಗಳಲ್ಲಿ ಸಹಿತ ತೊಟ್ಟಿನ ಕೆಳಭಾಗದಲ್ಲಿ ಸಣ್ಣ ಸಣ್ಣ ರಂಧ್ರಗಳನ್ನು ಮಾಡಿ ಸ್ಪಲ್ಪ ಪ್ರಮಾಣದಲ್ಲಿ ತಿರುಳನ್ನು ತಿಂದು ನಾಶ ಮಾಡುತ್ತದೆ. ಜೊತೆಗೆ ರಂಧ್ರಗಳ ಪಕ್ಕದಲ್ಲಿ ಹುಳುವಿನ ಹಿಕ್ಕೆ ಸಹಿತ ನೋಡಬಹುದು.
ಇದರಿಂದ ಹಣ್ಣುಗಳು ಮೇಲೆ ಬೊಬ್ಬೆ ತರಹದ ಚಿಹ್ನೆಗಳು ಕಾಣುತ್ತದೆ. ಈ ಕೀಟಗಳ ಹವಳಿಯಿಂದ ಹಣ್ಣುಗಳ ಗುಣಮಟ್ಟ ಕಳಪೆಯಾಗಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರಕುವುದಿಲ್ಲ.
ಬೇಸಾಯ ವಿಧಾನಗಳು:-
ಏಕ ಬೆಳೆ ಪದ್ಧತಿಯನ್ನು ಅನುಸರಿಸದೇ ಆದಷ್ಟು ಬೆಳೆ ಪರಿವರ್ತನೆ ಮಾಡಬೇಕು. ಸಸಿ ಮಡಿ ಹಂತದಲ್ಲಿಯೇ ಈ ಕೀಟವನ್ನು ನಿಯಂತ್ರಿಸುವುದು ಸೂಕ್ತ ಮತ್ತು ಕೀಟ ರಹಿತ ಸಸಿಗಳನ್ನು ನಾಟಿಗೆ ಬಳಸಬೇಕು.
ಸಸಿ ಮಡಿಯಿಂದ ಟ್ರೇನಲ್ಲಿ ಸಸಿಗಳನ್ನು ಸಾಗಿಸುವಾಗ ಟ್ರೇಗಳನ್ನು ನೈಲಾನ್ ಪರದೆಯಿಂದ ಕಡ್ಡಾಯವಾಗಿ ಮುಚ್ಚಿ ಸಾಗಾಣಿಕೆ ಮಾಡಬೇಕು ಹಾಗೂ ಸಸಿಗಳನ್ನು ಇಳಿಸಿದ ಜಾಗದಲ್ಲಿಯೂ ಸಹ ನೈಲಾನ್ ಪರದೆಯನ್ನು ಮುಚ್ಚಿರಬೇಕು. ಆಶ್ರಯ ಬೆಳೆಗಳಾದ ಆಲೂಗಡ್ಡೆ ಹಾಗೂ ಬದನೆ ಬೆಳೆಗಳ ಕಡೆ ಸಹ ಗಮನ ಹರಿಸಬೇಕು.
ಭೌತಿಕ ವಿಧಾನಗಳು:-
ಆರಂಭಿಕ ಹಂತದಲ್ಲಿ ಹಾವಳಿಗೆ ತುತ್ತಾಗಿರುವ ಎಲೆಗಳು ಮತ್ತು ಕಾಯಿಗಳನ್ನು ಕಿತ್ತು ನಾಶಪಡಿಸಬೇಕು. ಬೆಳೆಯ ಕಟಾವಿನ ನಂತರ ಕೂಳೆ ಮತ್ತು ಉಳಿಕೆ ಕಸ ಕಡ್ಡಿಗಳನ್ನು ಸುಟ್ಟು ನಾಶಪಡಿಸಬೇಕು.
ಯಾಂತ್ರಿಕ ವಿಧಾನಗಳು:-
೬೦ ವ್ಯಾಟ್ ವಿದ್ಯುತ್ ಬಲ್ಬ್ ಬೆಳಕಿನ ಬಲೆಗಳನ್ನು ಪ್ರತಿ ಎಕರೆಗೆ ೪ ರಂತೆ ಬೆಳೆ ಬಿತ್ತುವ ಅಥವಾ ನಾಟಿ ಮಾಡುವುದಕ್ಕೂ ೭ ರಿಂದ ೧೦ ದಿನ ಮುಂಚಿತವಾಗಿ ಅಳವಡಿಸಿ ಬೆಳೆಯ ಕೊನೆವರೆಗೂ ಅಳವಡಿಸುವುದರಿಂದ ಕೀಟ ಬಾಧೆ ಹರಡದಂತೆ ತಡೆಯಬಹುದು.
ಟ್ಯೂಟಾ ಲ್ಯೂರ್ ಫೆರೋಮೊನ್ ಬಲೆಗಳು / ಹಳದಿ ಅಂಟು ಹಾಳೆಗಳನ್ನು ಅಥವಾ ನೀರಿನ ಬಲೆಗಳು ಒಂದು ಎಕರೆಗೆ ೨೦ ಬಲೆಗಳನ್ನು ಬಳಸಬೇಕು.
ಮೋಹಕ ಬಲೆಗಳು ಭೂಮಿಯಿಂದ ೨ ರಿಂದ ೩ ಅಡಿ ಎತ್ತರದಲ್ಲಿ ಕಟ್ಟಬೇಕು. ಪ್ರತಿ ಎಕರೆಗೆ ೬ ರಿಂದ ೧೦ ಗಂಡು ಮೋಹಕ ಬಲೆಗಳನ್ನು ಅಳವಡಿಸುವುದು. ಟೊಮ್ಯಾಟೊ ಬೆಳೆಯನ್ನು ನಾಟಿ ಮಾಡಿದ ೨೦ ದಿನಗಳ ನಂತರ ಮೋಹಕ ಬಲೆಗಳನ್ನು ಕಡ್ಡಾಯವಾಗಿ ಬಳಸಬೇಕು.
ಜೈವಿಕ ವಿಧಾನಗಳು:-
ನಾಟಿ ಮಾಡಲು ಸಿದ್ಧಪಡಿಸಿದ ತಾಕು/ಜಮೀನಿಗೆ ಬೇವಿನ ಹಿಂಡಿ/ ಹೊಂಗೆ ಹಿಂಡಿ ಹಾಕುವುದರಿಂದ ಪ್ರಾರಂಭಿಕ ಹಂತದ ಹಾವಳಿಯಿಂದ ತಡೆಯಬಹುದು (ಒಂದು ಎಕರೆಗೆ ೧೦೦ ಕೆ.ಜಿ ಬೇವಿನ ಹಿಂಡಿ).
ವಾರಕ್ಕೊಮ್ಮೆ (೫ ವಾರಗಳು) ಪರಾವಲಂಬಿ ಜೀವಿ, ಟ್ರೈಕೊಗ್ರಾಮಾ ಪ್ರಿಟಿಯೊಸಂನ ಮೊಟ್ಟೆಯ (ಪ್ರತಿ ಎಕರೆಗೆ ೪೦ ಸಾವಿರ ಮೊಟ್ಟೆ) ಚೀಟಿಗಳನ್ನು ಕಟ್ಟಬೇಕು ಹಾಗೂ ಪ್ರಕೃತಿ ದತ್ತವಾಗಿ ಬರುವ ಪರಭಕ್ಷಕ ಕೀಟ, ಜೇಡ ಇತರೆ ಜೀವಿಗಳನ್ನು ಉಳಿಸಿಕೊಳ್ಳುವುದರಿಂದ ಈ ಪತಂಗವನ್ನು ತಡೆಗಟ್ಟಬಹುದು.
ರಾಸಾಯನಿಕ ವಿಧಾನಗಳು:-
ಈ ಕೀಟದ ಹಾವಳಿಯು ಹೆಚ್ಚಾಗಿ ಕಂಡು ಬಂದರೆ ಮೊದಲನೇ ಸಿಂಪರಣೆಯಾಗಿ ೨ ಮಿ.ಲೀ ಅಜಾಡಿರೆಕ್ಟಿನ್ ೧೦೦೦೦ ಠಿಠಿm ಅಥವಾ ೦.೨೦ ಮಿ.ಲೀ. ಸ್ಪೈನೋಸ್ಯಾಡ್ ಅಥವಾ ೦.೨೦ ಮಿ.ಲೀ. ಫ್ಲುಬೆಂಡಿಯಮೈಡ್ ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬಹುದು.
ಕಾಯಿ ಕಚ್ಚಿದ ಸಮಯದಲ್ಲಿ ಹಾವಳಿ ಹೆಚ್ಚಾದರೆ ೦.೨೫ ಮಿ.ಲೀ. ಕೋರಾಜೆನ್ ಅಥವಾ ೦.೨೫ ಮಿ.ಲೀ. ಸೈಂಟ್ರಾನಿಲಿಪ್ರೋಲ್ ಅಥವಾ ೨ ಮಿ.ಲೀ. ಪ್ರೊಪೆನೋಫಾಸ್ ಅಥವಾ ೦.೬೦ ಮಿ.ಲೀ. ಲ್ಯಾಂಬ್ಡಾಸೆಹಲೊಥ್ರೀನ್ ಅಥವಾ ೧ ಮಿ.ಲೀ. ಡೆಕಾಮೆಥ್ರಿನ್ ಔಷಧಿಯನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬಹುದು.
ಮೇಲಿನ ಕೀಟನಾಶಕಗಳನ್ನು ೧೦-೧೫ ದಿನಗಳ ಅಂತರದಲ್ಲಿ ಎರಡ ರಿಂದ ಮೂರು ಸಲ ಸಿಂಪರಣೆ ಮಾಡಬೇಕು. ಇಂಡ್‌ಟ್ರಾನ್/ಅಪ್‌ಸಾ-೮೦/ಅಕ್ಟೀವ್-೮೦ ಮತ್ತು ಫಿಲ್‌ವಾಟ್ ಅಂಟುಗಳನ್ನು ಕೀಟ ನಾಶಕಗಳ ಜೊತೆಯಲ್ಲಿ ಬಳಸುವುದು ಉತ್ತಮ (೦.೫ ಮಿ.ಲೀ/ಲೀಟರ್‌ಗೆ). ಸಿಂಪರಣೆಯನ್ನು ಬೆಳಗಿನ ವೇಳೆಯಲ್ಲಿ ಕೈಗೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಚಿಕ್ಕಮಗಳೂರಿನ ತೋಟಗಾರಿಕೆ ಇಲಾಖೆ ಹಾರ್ಟಿ ಕ್ಲಿನಿಕ್, ವಿಷಯ ತಜ್ಞ ಯಶವಂತ್ ದೂ.ಸಂ: ೦೮೨೬೨-೨೯೫೦೪೩, ೮೬೧೮೧೮೬೫೮೬. ಅಥವಾ ಹತ್ತಿರದ ತೋಟಗಾರಿಕೆ ಇಲಾಖೆಯ ಆರ್.ಎಸ್.ಕೆ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.
Also read:
- Sri Dharmasthala Mela Yakshagana show today
- Udupi Sri Krishna Alankara
- Today’s Rubber price (Kottayam and International market)
- Arecanut and Pepper Price at TSS- Sirsi
- Udupi Mallige and Jaaji today’s price