ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 53ನೇ ವರ್ಧಂತ್ಯುತ್ಸವ

ಶ್ವೇತಾ ಎಸ್

ಧರ್ಮಸ್ಥಳ, ಅ 22: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ. ವೀರೇಂದ್ರ ಹೆಗ್ಗಡೆಯವರ 53ನೆ ಪಟ್ಟಾಭಿಷೇಕದ ವರ್ಧಂತ್ಯುತ್ಸವ ಸಮಾರಂಭ ಅಕ್ಟೊಬರ್ 24 ರಂದು ಸರಳವಾಗಿ ನಡೆಯಲಿದೆ.
ನವೆಂಬರ್ 25, 1948 ರಂದು ರತ್ನವರ್ಮ ಹೆಗ್ಗಡೆ- ರತ್ನಮ್ಮ ಹೆಗ್ಗಡೆ ಅವರ ಮೊದಲನೇ ಮಗನಾಗಿ ಜನಿಸಿದ ವೀರೇಂದ್ರ ಕುಮಾರ್ ತನ್ನ ಇಪ್ಪತ್ತನೆ ವರ್ಷದಲ್ಲಿ ಧರ್ಮಸ್ಥಳದ ಇಪ್ಪತ್ತೊಂದನೆ ಧರ್ಮಾಧಿಕಾರಿ ಯಾಗಿ- ವೀರೇಂದ್ರ ಹೆಗ್ಗಡೆ ಯಾಗಿ- ನೆಲ್ಯಾಡಿ ಬೀಡಿನಲ್ಲಿ ಪಟ್ಟಾಭಿಷಿಕ್ತರಾದರು.
ಎಳೆಯ ವಯಸ್ಸಿನಲ್ಲೇ ಜನರ ಸೇವೆ ಬಗ್ಗೆ ಅತ್ಯಂತ ಕಾಳಜಿ ಇದ್ದ ವೀರೇಂದ್ರ ಹೆಗ್ಗಡೆಯವರು, ಅನೇಕ ಜನಪರ ಕೆಲಸಕ್ಕೆ ನಾಂದಿ ಹಾಡಿದರು.
ಕ್ಷೇತ್ರದ ಪರಂಪರೆಯಂತೆ ಚತುರ್ದಾನಗಳಾದ- ಅನ್ನದಾನ, ಅಭಯದಾನ, ವಸ್ತ್ರದಾನ ಹಾಗೂ ಔಷಧದಾನ ಗಳೊಂದಿಗೆ, ಉಚಿತ ಸಾಮೂಹಿಕ ವಿವಾಹ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮದ್ಯವರ್ಜನ ಶಿಬಿರ, ಸ್ವ ಉದ್ಯೋಗ ಮುಂತಾದ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡು ಸಾವಿರಾರು ಜನರಿಗೆ, ಕುಟುಂಬಗಳಿಗೆ ಆಸರೆಯಾದರು.
ಶಿಕ್ಷಣ ಕ್ಷೆತ್ರದಲ್ಲಿ ಕ್ರಾಂತಿಯನು ತಂದು ‘ಎಸ್ ಡಿ ಎಂ’ ಮೂಲಕ ಹಳ್ಳಿಯ ಬಡ ವಿದ್ಯಾರ್ಥಿಗಳು ಕೂಡಾ ಗುಣಮಟ್ಟದ ಶಿಕ್ಷಣ ಪಡೆಯುವಂತೆ ಮಾಡಿದರು.

ಹೆಗ್ಗಡೆಯವರ ಐದು ದಶಕಗಳ ನಿಸ್ವಾರ್ಥ ಸೇವೆಯಿಂದ, ಧರ್ಮಸ್ಥಳವು ಇಂದು ಜನಸೇವೆಗೆ ಪರ್ಯಾಯ ಪದವಾಗಿ ಮೂಡಿಬಂದಿದೆ. ಹಳ್ಳಿಯಾಗಿದ್ದ ಧರ್ಮಸ್ಥಳವನ್ನು ದೇಶದ ಭೂಪಟದಲ್ಲಿ ಒಂದು ಪ್ರಮುಖ ಸ್ಥಾನ ಬರುವಂತೆ ಮಾಡಿದ ಕೀರ್ತಿ ವೀರೇಂದ್ರ ಹೆಗ್ಗಡೆಯವರದ್ದು.
ಬಾಲ್ಯ ಮತ್ತು ಶಿಕ್ಷಣ: ಕೀರ್ತಿಶೇಷ ರತ್ನವರ್ಮ ಹೆಗ್ಗಡೆ ಮತ್ತು ರತ್ನಮ್ಮ ದಂಪತಿಯ ಹಿರಿಯ ಮಗನಾಗಿ ವೀರೇಂದ್ರ ಕುಮಾರ್ 1948ರ ನವಂಬರ್ 25 ರಂದು ಜನಿಸಿದರು.
ಪ್ರಾಥಮಿಕ ಶಿಕ್ಷಣವನ್ನು ಬಂಟ್ವಾಳದಲ್ಲಿ ಅಂದಿನ ಬೋರ್ಡ್ ಶಾಲೆಯಲ್ಲಿ ಮುಗಿಸಿ ಉಜಿರೆಯಲ್ಲಿ ಸಿದ್ಧವನ ಗುರುಕುಲದಲ್ಲಿ ಪ್ರೌಢ ಶಾಲಾ ಶಿಕ್ಷಣ ಹಾಗೂ ಬಳಿಕ ಬೆಂಗಳೂರಿನಲ್ಲಿ ಪದವಿ ಶಿಕ್ಷಣ ಪೂರೈಸಿದರು.
ವಿಶೇಷ ಸೇವೆ, ಸಾಧನೆಗಳು: ಧರ್ಮಸ್ಥಳದಲ್ಲಿ 1982ರಲ್ಲಿ ಭಗವಾನ್ ಬಾಹುಬಲಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಮೂರು ಮಹಾಮಸ್ತಕಾಭಿಷೇಕ, ಮಹಾನಡಾವಳಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರತಿ ವರ್ಷ ಉಚಿತ ಸಾಮೂಹಿಕ ವಿವಾಹ, ಉಜಿರೆ, ಮಂಗಳೂರು, ಬೆಂಗಳೂರು, ಮೈಸೂರು ಹಾಗೂ ಧಾರವಾಡದಲ್ಲಿ ಹಲವು ಶಿಕ್ಷಣ ಸಂಸ್ಥೆಗಳು, ಕಲ್ಯಾಣ ಮಂಟಪಗಳು, ಸ್ವ-ಉದ್ಯೋಗ ತರಬೇತಿ ಕೇಂದ್ರಗಳು ಇತ್ಯಾದಿ ಹೆಗ್ಗಡೆಯವರು ಅನುಷ್ಠಾನಗೊಳಿಸಿದ ಸೇವಾ ಕಾರ್ಯಗಳು.
ಹೆಗ್ಗಡೆಯವರು ಪ್ರಾರಂಭಿಸಿದ ಮಾದರಿ ಯೋಜನೆಗಳನ್ನು ಸರ್ಕಾರ ಹಾಗೂ ಅನೇಕ ಮಠ-ಮಂದಿರಗಳು ಅನುಷ್ಠಾನಗೊಳಿಸುತ್ತಿವೆ.

ಪ್ರಧಾನಿ ಅಭಿನಂದನೆ: ನುಡಿದಂತೆ ನಡೆಯುವ ಹೆಗ್ಗಡೆಯವರು ಸಮಾಜಕ್ಕಾಗಿ ತ್ಯಾಗ ಮತ್ತು ತಪಸ್ಸಿನ ಜೀವನ ನಡೆಸುತ್ತಿದ್ದಾರೆ. ಧರ್ಮಸ್ಥಳವು ಆದರ್ಶ ಧರ್ಮಕ್ಷೇತ್ರ ಎಂದು ಪ್ರಧಾನಿ ನರೇಂದ್ರ ಮೋದಿಯವರು ಶ್ಲಾಘಿಸಿ ಹೆಗ್ಗಡೆಯವರನ್ನು ಅಭಿನಂದಿಸಿದ್ದಾರೆ.
Also read:
- Kateel Mela Yakshagana details
- Today’s Rubber price (Kottayam and International market)
- Udupi Sri Krishna Alankara
- Arecanut and Pepper Price at TSS- Sirsi
- Udupi Mallige and Jaaji today’s price